ಸಮಸ್ತ ಧಾರ್ಮಿಕ ವಿದ್ವೇಷ ಉಂಟು ಮಾಡುವ ಸಂಘಟನೆಯಲ್ಲ: ಜಿಫ್ರಿ ಮುತ್ತುಕೋಯ ತಂಙಳ್

ಸಮಸ್ತ ಧಾರ್ಮಿಕ ವಿದ್ವೇಷ ಉಂಟು ಮಾಡುವ ಸಂಘಟನೆಯಲ್ಲ: ಜಿಫ್ರಿ ಮುತ್ತುಕೋಯ ತಂಙಳ್

ಕೋಝಿಕ್ಕೋಡ್: ಕೇರಳದ ಪಾಲ ಬಿಷಪ್ ಹೇಳಿಕೆಯು ಮುಸ್ಲಿಮರಿಗೆ ನೋವುಂಟು ಮಾಡುವಂತಹದ್ದು. ರಾಜಕೀಯ ನೇತಾರರು, ಮಂತ್ರಿಗಳು ಅದನ್ನು ಬೆಂಬಲಿಸಿ ಪರಸ್ಪರ ದ್ವೇಷ ಹುಟ್ಟಿಸುವ ಬದಲು ಮುಸ್ಲಿಮರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದ್ದಾರೆ.

      ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪತ್ತಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ನಾರ್ಕೋಟಿಕ್ ಜಿಹಾದ್ ಪರಾಮರ್ಶೆ ನಡೆಸಿದ ಬಿಷಪ್‌ರನ್ನು ಬೆಂಬಲಿಸುವ ಕೆಲಸ ನಡೆಯುತ್ತಿದೆಯೇ ಎಂದು ಸಂಶಯವಿದೆ. ಕೆಲವು ಮಂತ್ರಿಗಳು ಇಂತಹ ಹೇಳಿಕೆಗಳನ್ನು ಬೆಂಬಲಿಸುತ್ತಿದ್ದು, ಜವಾಬ್ದಾರಿಯುಳ್ಳವರ ಕಡೆಯಿಂದ ಇಂತಹ ಪ್ರಯತ್ನಗಳು ನಡೆಯಬಾರದು ಎಂದೂ ಅವರು ಹೇಳಿದರು. 

      ಇದು ಸರಕಾರದ ಅಭಿಪ್ರಾಯವೇ ಎಂಬುದು ಗೊತ್ತಿಲ್ಲ. ಮುಖ್ಯಮಂತ್ರಿಯವರು ಹಾಗೇ ಹೇಳಲಾರರು ಎಂಬ ವಿಶ್ವಾಸವಿದೆ. ಸರಕಾರದ ಅಭಿಪ್ರಾಯವೇ ಆಗಿದ್ದರೆ ಇಂತಹ ಬೆಂಬಲ ಸರಿಯಲ್ಲ. ಈ ವಿಷಯವನ್ನು  ಸ್ಪಷ್ಟಪಡಿಸುವುದು ಮುಖ್ಯಮಂತ್ತಿಯವರ ಜವಾಬ್ದಾರಿ. ಸಮನ್ವಯಗೊಳಿಸಲು ಯಾವುದೇ ಉಪಕ್ರಮವು ಸ್ವಾಗತಾರ್ಹ. ಎರಡೂ ಕಡೆಯವರನ್ನು ಒಂದೆಡೆ ಕೂರಿಸಿ ಚರ್ಚೆ ನಡೆಸಲು ಕಾಂಗ್ರೆಸ್ ಮಾಡಿದ ಪ್ರಯತ್ನಗಳು ಒಳ್ಳೆಯದು. ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಧಾರ್ಮಿಕ ಸಾಮರಸ್ಯವನ್ನು ಕಾಪಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

      ಇಸ್ಲಾಂ ಎಲ್ಲರೂ ಬಾರಿಸಲು ಇರುವ ನಗಾರಿಯಲ್ಲ. ಪಾಲಾದ ಬಿಷಪ್ ಹೇಳಿಕೆ ನಡೆಯಲೇ ಬಾರದ ಘಟನೆ. ಬಿಷಪ್ ಹೇಳಬೇಕಾದ್ದನ್ನು ಸಾರ್ವಜನಿಕವಾಗಿ ಹೇಳಬೇಕೆಂದಿರಲಿಲ್ಲ. ಅಂತಹ ಘಟನೆಗಳು ನಡೆದಿದ್ದರೆ ಸರಕಾರಕ್ಕೆ ವರದಿ ಸಲ್ಲಿಸಬೇಕಿತ್ತು. ಬಿಷಪ್ ಹೇಳಿದಂತಹ ಕಾರ್ಯಗಳನ್ನು ಯಾರಾದರೂ ಮಾಡಿದ್ದರೆ, ಅವರು ಯಾವ ಜಾತಿಯವರೇ ಆಗಿದ್ದರೂ ಭಾರತೀಯ ದಂಡ ಸಂಹಿತೆಯಡಿ ಅವರನ್ನು ಶಿಕ್ಷಿಸಬೇಕು. ಶ್ರೇಷ್ಠ ಸ್ಥಾನದಲ್ಲಿರುವ ಧಾರ್ಮಿಕ ಮುಖಂಡರಿಂದ ಧಾರ್ಮಿಕ ಸಾಮರಸ್ಯದ ಮಾತುಗಳನ್ನು ಸಮಾಜ ನಿರೀಕ್ಷಿಸುತ್ತದೆ. ಹಿಂದುಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಪರಸ್ಪರ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಕೇರಳದಲ್ಲಿ ಹೆಚ್ಚಿನ ಜನರು ಧಾರ್ಮಿಕ ಸಾಮರಸ್ಯವನ್ನೇ ಬಯಸುತ್ತಾರೆ.  ಕೇರಳದ ಬಹುತೇಕ ಕ್ರೈಸ್ತರು ದ್ವೇಷ ಅಥವಾ ಮತಾಂಧತೆಯನ್ನು ವ್ಯಕ್ತಪಡಿಸುವುದಿಲ್ಲ ಎಂಬುದು ನಮ್ಮ ಅನುಭವ.

      ಮಕ್ಕಳನ್ನು ಶಾಲೆಗೆ ಸೇರಿಸುವಾಗ, ಶಾಲೆಗಳನ್ನು ಯಾರು ನಡೆಸುತ್ತಿದ್ದಾರೆ ಎಂದು ನೋಡಿಕೊಂಡು ಸೇರಿಸುವುದಿಲ್ಲ. ಕೇರಳದಲ್ಲಿ ಯಾವ ಸಮುದಾಯ ಶಾಲೆಗಳನ್ನು ನಡೆಸುತ್ತಿದ್ದರೂ ಅಲ್ಲಿ ವಿವಿಧ ಸಮುದಾಯಗಳ ಮಕ್ಕಳು ಬಂದು ಒಂದಾಗಿ ವಿದ್ಯಾಭ್ಯಾಸ ಪಡೆಯುವ ರಾಜ್ಯವಾಗಿದೆ. ನಡೆಸುತ್ತಿದ್ದರೂ ವಿದ್ಯಾರ್ಥಿಗಳನ್ನು ಕಳುಹಿಸುವುದಿಲ್ಲ. ಕೇರಳವು ಎಲ್ಲಾ ಸಮುದಾಯಗಳು ನಡೆಸುವ ಶಾಲೆಗಳಲ್ಲಿ ವಿವಿಧ ಸಮುದಾಯಗಳ ಮಕ್ಕಳು ಅಧ್ಯಯನ ಮಾಡುವ ದೇಶವಾಗಿದೆ. ದ್ವೇಷಪೂರಿತ ವಿಷಯಗಳನ್ನು ಕಲಿಸಿಕೊಡುವುದರಿಂದ ಯಾವುದೇ ಪ್ರಯೋಜನವಿಲ್ಲ. ದ್ವೇಷಪೂರಿತ ಮಾತುಗಳನ್ನು ಹೇಳುವ ಮುಂಚೆ ಜಾಗ್ರತೆ ವಹಿಸಬೇಕು. ಪ್ರತಿಯೊಂದು ಗುಂಪಿನಲ್ಲೂ ಇರುವ ಉಗ್ರರನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಬೇಕು.

      ತಾಮರಶೇರಿ ಧರ್ಮಪ್ರಾಂತ್ಯದ ವೇದಪಠ್ಯಪುಸ್ತಕದಲ್ಲಿನ ಉಲ್ಲೇಖಗಳನ್ನು ಹಿಂತೆಗೆದುಕೊಳ್ಳಲಾಗುವುದು ಎಂಬ ಬಿಷಪ್ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಧಾರ್ಮಿಕ ಸಾಮರಸ್ಯದ ಬಗ್ಗೆ ಸಮಸ್ತದ ಸಂವಿಧಾನದಲ್ಲೇ ಉಲ್ಲೇಖಿಸಲಾಗಿದೆ. ಸಮಸ್ತದ ನಾಯಕರು ಅಥವಾ ಯಾವುದಾದರೂ ಕಾರ್ಯಕರ್ತರಿಂದ ಧಾರ್ಮಿಕ ಸಾಮರಸ್ಯವನ್ನು ಕದಡುವ ಯಾವುದೇ ಕಾರ್ಯ ನಡೆಯಲು ಸಾಧ್ಯವಿಲ್ಲ. ಇದಕ್ಕೆ ಹೊರತಾಗಿ ಯಾರಾದರೂ ವರ್ತಿಸಿದರೆ, ಅದನ್ನು ಎಲ್ಲಾ ಮುಸ್ಲಿಮರ ಮೇಲೆ ಹೇರುವುದು ಕೆಟ್ಟ ಅಭ್ಯಾಸ.

      ಬಿಷಪ್‌ರ ರೀತಿಯಲ್ಲೇ ಪ್ರಚೋದನಕಾರಿ ಧಾರ್ಮಿಕ ವಿದ್ವೇಷ ಉಂಟು ಮಾಡುವ ಹೇಳಿಕೆ ನೀಡುವ ಸಂಘಟನೆ ನಮ್ಮದಲ್ಲ. ಇಸ್ಲಾಂ ಯಾವತ್ತೂ ಭಯೋತ್ಪಾದನೆಯನ್ನು ಉತ್ತೇಜಿಸುವುದಿಲ್ಲ. ಇಸ್ಲಾಂನ ಇತಿಹಾಸವನ್ನು ಪರಿಶೀಲಿಸಿದರೆ ಇದು ಸ್ಪಷ್ಟವಾಗುತ್ತದೆ. ಮುಸ್ಲಿಮರು ಕೋಮುವಾದ ಅಥವಾ ಉಗ್ರವಾದವನ್ನೂ ಪ್ರಚಾರ ಮಾಡುವುದಿಲ್ಲ. ಅಂತಹ ಚಟುವಟಿಕೆಯಲ್ಲಿ ತೊಡಗಿರುವ ಯಾರೇ ಆದರೂ ಅವರನ್ನು ಕಾನೂನಿನ ಮುಂದೆ ತರಬೇಕೇ ಹೊರತು ಇಡೀ ಸಮುದಾಯವನ್ನು ದೂಷಿಸಬಾರದು ಎಂದು ಅವರು ಹೇಳಿದರು.

      ಪತ್ರಿಕಾ ಗೋಷ್ಠಿಯಲ್ಲಿ ಸಮಸ್ತ ಪ್ರಧಾನ ಕಾರ್ಯದರ್ಶಿ ಪ್ರೊ.ಕೆ.ಆಲಿಕುಟ್ಟಿ ಮುಸ್ಲಿಯಾರ್, ಎವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಹಮ್ಮದ್ ಕೋಯಾ ತಂಙಳ್ ಜಮಲುಲೈಲಿ, ವರ್ಕಿಂಗ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಫೈಝಿ ಅಂಬಲಕಡವು, ಸಮಸ್ತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಡಾ.ಎನ್.ಎ.ಎಮ್.ಅಬ್ದುಲ್ ಖಾದಿರ್, ಸಂಚಾಲಕ ಮುಸ್ತಫಾ ಮುಂಡುಪಾರ, ಸಮಸ್ತ ಶಿಕ್ಷಣ ಮಂಡಳಿಯ ವ್ಯವಸ್ಥಾಪಕ ಕೆ.ಮೊಯಿನ್ ಕುಟ್ಟಿ ಮಾಸ್ಟರ್ ಮುಂತಾದವರು ಭಾಗವಹಿಸಿದ್ದರು.

 

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ