ಶೀಘ್ರದಲ್ಲೇ ಭಾರತ ಎದುರಿಸಲಿದೆ ಕೋವಿಡ್‌ನ ಮತ್ತೊಂದು ಅಲೆ

ಭಾರತವು ಅತೀ ಶೀಘ್ರದಲ್ಲೇ ಕೋವಿಡ್‌ನ ಮತ್ತೊಂದು ಅಲೆಯೊಂದನ್ನು ಎದುರಿಸಲಿದೆ. ಅದು ಅಕ್ಟೋಬರ್‌ ಹೊತ್ತಿಗೆ ಉತ್ತುಂಗಕ್ಕೇರಲಿದೆ ಎಂದು ಸಂಶೋಧಕರು ಗಣಿತದ ಮಾದರಿಯ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಶೀಘ್ರದಲ್ಲೇ ಭಾರತ ಎದುರಿಸಲಿದೆ ಕೋವಿಡ್‌ನ ಮತ್ತೊಂದು ಅಲೆ

ನವದೆಹಲಿ, ಆಗಸ್ಟ್‌ 2: 2020 ರಲ್ಲಿ ಭಾರತಕ್ಕೆ ವಕ್ಕರಿಸದ ಕೊರೋನಾ ಬೇರೆ ಬೇರೆ ರೀತಿಯಲ್ಲಿ ಕಾಡುತ್ತಲೇ ಇದೆ. ಭಾರತವು ಅತೀ ಶೀಘ್ರದಲ್ಲೇ ಕೋವಿಡ್‌ನ ಮತ್ತೊಂದು ಅಲೆಯೊಂದನ್ನು ಎದುರಿಸಲಿದೆ. ಅದು ಅಕ್ಟೋಬರ್‌ ಹೊತ್ತಿಗೆ ಉತ್ತುಂಗಕ್ಕೇರಲಿದೆ ಎಂದು ಸಂಶೋಧಕರು ಗಣಿತದ ಮಾದರಿಯ ಮೂಲಕ ಎಚ್ಚರಿಕೆ ನೀಡಿದ್ದಾರೆ.

      ಈ ಸಮಯದಲ್ಲಿ ದೇಶವು ಸಾಂಕ್ರಾಮಿಕ ರೋಗದ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲಿದೆ. ಈ ಅಲೆಯು ಉತ್ತುಂಗಕ್ಕೆ ಏರಲಿದ್ದು, ದಿನವೊಂದಕ್ಕೆ 1,00,000 ಅಥವಾ 1,50,000 ಸನಿಹದ ಪ್ರಕರಣಗಳು ವರದಿಯಾಗಲಿವೆ ಎಂದು ಹೈದರಾಬಾದ್ ಮತ್ತು ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಮತುಕುಮಳ್ಳಿ ವಿದ್ಯಾಸಾಗರ್‌ ಮತ್ತು ಮಣೀಂದ್ರ ಅಗರವಾಲ್ ನೇತೃತ್ವದ ಸಂಶೋಧನಾ ತಂಡ ತಿಳಿಸಿದೆ.

ಇದೇ ತಂಡ, ಗಣಿತದ ಮಾದರಿಯ ಮೂಲಕ ಎರಡನೇ ಅಲೆಯ ಏರಿಳಿತಗಳ ಸ್ಪಷ್ಟ ಮುನ್ಸೂಚನೆ ನೀಡಿತ್ತು. ಸದ್ಯ ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಚಿತ್ರಣವೇ ಬದಲಾಗಬಹುದು ಎಂದೂ ವಿದ್ಯಾಸಾಗರ್‌ ಅವರು ತಿಳಿಸಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆ ‘ಬ್ಲೂಮ್‌ಬರ್ಗ್‌’ ವರದಿ ಮಾಡಿದೆ.

      ಎರಡನೇ ಅಲೆಗೆ ಹೋಲಿಸಿದರೆ ಸಂಭಾವ್ಯ ಅಲೆಯು ಸಣ್ಣದಾಗಿರುವ ಸಾಧ್ಯತೆಗಳಿವೆ. ಎರಡನೇ ಅಲೆ ಉತ್ತುಂಗದಲ್ಲಿದ್ದ ವೇಳೆ ಮೇ 7ರಂದು 4 ಲಕ್ಷ ಪ್ರಕರಣಗಳು ದೇಶದಲ್ಲಿ ವರದಿಯಾಗಿದ್ದವು. ನಂತರ ತೀವ್ರವಾಗಿ ಕುಸಿಯಲಾರಂಭಿಸಿತ್ತು.

      ದೇಶದಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡುವಂತೆಯೂ, ಹಾಟ್‌ಸ್ಪಾಟ್‌ಗಳನ್ನು ಪತ್ತೆಹಚ್ಚುವಂತೆಯೂ ಸಂಶೋಧಕರು ಸಲಹೆ ನೀಡಿದ್ದಾರೆ. ಜೊತೆಗೆ ಹೊಸ ಮಾದರಿ ಹೊರ ಹೊಮ್ಮಲು ಕಾರಣವಾಗುವ ಅಂಶಗಳತ್ತ ಗಮನಹರಿಸಬೇಕು ಎಂದೂ ತಿಳಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ