ಲಾಕ್ ಡೌನ್ ರಾಜ್ಯ ಸರಕಾರದ ಮಾರ್ಗಸೂಚಿಯನ್ನೇ ಅನುಸರಿಸಿ: ಜಿಲ್ಲಾಡಳಿತಕ್ಕೆ ರಮಾನಾಥ ರೈ ಒತ್ತಾಯ

ಲಾಕ್ ಡೌನ್  ರಾಜ್ಯ ಸರಕಾರದ ಮಾರ್ಗಸೂಚಿಯನ್ನೇ ಅನುಸರಿಸಿ: ಜಿಲ್ಲಾಡಳಿತಕ್ಕೆ ರಮಾನಾಥ ರೈ ಒತ್ತಾಯ

ಮಂಗಳೂರು, ಮೇ.10: ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ರಾಜ್ಯ ಸರಕಾರದ ಮಾರ್ಗಸೂಚಿಯನ್ನು ಜಾರಿ ಮಾಡಬೇಕೆ ಹೊರತು ಪ್ರತ್ಯೇಕ ನಿಯಮಗಳನ್ನು ತಂದು ಜನರನ್ನು ಗೊಂದಲಕ್ಕೆ ದೂಡಬೇಡಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ  ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

      ಕೊರೋನಾ ಜನರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಜನರು ಈಗಾಗಲೇ ಮಾನಸಿಕ ತುಮುಲದಲ್ಲಿದ್ದಾರೆ. ನಮ್ಮ ಜಿಲ್ಲೆಗೆ ಪ್ರತ್ಯೇಕ ನಿಯಮಗಳನ್ನು ಮಾಡುವುದರಿಂದ ಜನರಿಗೆ ಇನ್ನಷ್ಟು ತೊಂದರೆ ಆಗುತ್ತದೆಯೇ ಹೊರತು ಪರಿಹಾರವಾಗುವುದಿಲ್ಲ. ಖರೀದಿಗೆ ಕಡಿಮೆ ಸಮಯ ನೀಡಿದರೆ ಮಾರ್ಕೆಟ್, ಅಂಗಡಿಗಳಲ್ಲಿ ಜನಜಂಗುಲಿ ಜಾಸ್ತಿಯಾಗುತ್ತದೆ. ಒಂದೇ ಕಡೆ ಜಾಸ್ತಿ ಜನ ಸೇರುವುದು ಒಳ್ಳೆಯದಲ್ಲ ಎಂದು ಮಾಜಿ ಸಚಿವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
      ರಾಜ್ಯದಲ್ಲಿ ಲಾಕ್ ಡೌನ್ ಹೇರುವ ಮುನ್ನ ಮೂರು ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಹ ಅವಕಾಶವನ್ನು ನಿರಾಕರಿಸಲಾಗಿದೆ‌. ರಾಜ್ಯ ಸರಕಾರ ನೀಡಿರುವ ಮಾರ್ಗಸೂಚಿಯನ್ನು ಯಥಾವತ್ ಜಾರಿ ಮಾಡಿಬೇಕು. ಮೀನು ಮಾರಾಟಗಾರರಿಗೆ ಕೋವಿಡ್ ನಿಯಂತ್ರಣ ಸೂತ್ರಗಳನ್ನು ಅನುಸರಿಸಿ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
      ಕೋವಿಡ್ 19 ವಿರುದ್ಧ ಹೋರಾಡುವಾಗ ಅಹಂಭಾವ ಬಿಟ್ಟು ಜಿಲ್ಲೆಯ ಮುಖಂಡರು, ತಜ್ಞರು, ಸೇವಾ ಸಂಸ್ಥೆಗಳನ್ನು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿತ ಪ್ರಯತ್ನ ಮಾಡಿದರೆ ಮಾತ್ರ ಕೊರೋನಾ ಸೋಂಕನ್ನು ಸೋಲಿಸಲು ಸುಲಭವಾಗಬಹುದು ಎಂದು ಮಾಜಿ ಸಚಿವರು ಜಿಲ್ಲಾಡಳಿತಕ್ಕೆ ಕಿವಿಮಾತು ಹೇಳಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ