ಭಾರತಕ್ಕೆ ಹೆಮ್ಮೆ ತಂದ ಸಾಧಕಿ: ಮೀರಾಬಾಯಿ ಚಾನುಗೆ ಒಲಿಂಪಿಕ್ ಬೆಳ್ಳಿ

ಟೋಕಿಯೊ ಒಲಂಪಿಕ್ಸ್‌ನಲ್ಲಿ 49 ಕೆ.ಜಿ. ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ದಾಖಲೆ ಬರೆದಿದ್ದಾರೆ. ಇದರೊಂದಿಗೆ ಶನಿವಾರದಿಂದ ಭಾರತದ ಪದಕ ಬೇಟೆ ಆರಂಭವಾಗಿದ್ದು, ಮೀರಾಬಾಯಿ ಸಾಧನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.

ಭಾರತಕ್ಕೆ ಹೆಮ್ಮೆ ತಂದ ಸಾಧಕಿ: ಮೀರಾಬಾಯಿ ಚಾನುಗೆ ಒಲಿಂಪಿಕ್ ಬೆಳ್ಳಿ

ಟೋಕಿಯೊ: ಟೋಕಿಯೊ ಒಲಂಪಿಕ್ಸ್‌ನಲ್ಲಿ 49 ಕೆ.ಜಿ. ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ದಾಖಲೆ ಬರೆದಿದ್ದಾರೆ. ಇದರೊಂದಿಗೆ ಶನಿವಾರದಿಂದ ಭಾರತದ ಪದಕ ಬೇಟೆ ಆರಂಭವಾಗಿದ್ದು, ಮೀರಾಬಾಯಿ ಸಾಧನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.

      2000ನೇ ಇಸವಿಯಲ್ಲಿ ಸಿಡ್ನಿಯಲ್ಲಿ ಕರ್ಣಂ ಮಲ್ಲೇಶ್ವರಿ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದು ಭಾರತಕ್ಕೆ ಮೊದಲ ಪದಕದ ಸವಿ ನೀಡಿದ್ದರು. ಆ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಪದಕದ ಗೌರವ ಸಂದಿದೆ.

      ಭಾರತ ಸರ್ಕಾರದಿಂದ ಹಿಡಿದು ಬಹುತೇಕ ಎಲ್ಲ ಮಾಧ್ಯಮಗಳು, ಕ್ರೀಡಾ ಫೆಡರೇಷನ್‌ಗಳು, ಕ್ರೀಡಾಭಿಮಾನಿಗಳು ಮೆಚ್ಚುಗೆ, ಹೆಮ್ಮೆಯ ಹಾಗೂ ಅಭಿಮಾನದ ಸಾಲುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಭಾರತಕ್ಕೆ ಹೆಮ್ಮೆ ತಂದ ಸಾಧಕಿ ಎಂದು ಚಿತ್ರ, ವಿಡಿಯೊಗಳ ಸಹಿತ ಪ್ರೀತಿಯ ಅಭಿನಂದನೆಗಳನ್ನು ತಿಳಿಸಿದ್ದಾರೆ.

      ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಡುವುದು ಸಾಧ್ಯವಾದದ್ದಕ್ಕೆ ಮೀರಾಬಾಯಿ ಚಾನು ಸಂಭ್ರಮ ವ್ಯಕ್ತಪಡಿಸಿದ್ದಾರೆ. ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿರುವುದು ಬಹಳ ಸಂತಸ ತಂದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ನನ್ನ ಕನಸು ನನಸಾಯಿತು. ಈ ಪಯಣದಲ್ಲಿ ಕೋಟ್ಯಂತರ ಭಾರತೀಯರ ಪ್ರಾರ್ಥನೆಗಳು ನನ್ನ ಜತೆಗಿದ್ದವು. ಅವರೆಲ್ಲರಿಗೆ ಹಾಗೂ ದೇಶಕ್ಕೆ ಈ ಪದಕವನ್ನು ಅರ್ಪಿಸುತ್ತಿದ್ದೇನೆ. ನನ್ನ ಕುಟುಂಬದವರಿಗೆ, ಅದರಲ್ಲೂ ನನಗಾಗಿ ಅನೇಕ ತ್ಯಾಗಗಳನ್ನು ಮಾಡಿ ನನ್ನ ಮೇಲೆ ನಂಬಿಕೆ ಇರಿಸಿದ ತಾಯಿಗೆ ವಿಶೇಷ ಕೃತಜ್ಞತೆಗಳು. ನನಗೆ ನಿರಂತರವಾಗಿ ಬೆಂಬಲ ನೀಡಿದ ಸರ್ಕಾರ, ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ, ಐಒಎ, ಭಾರತೀಯ ವೇಟ್‌ಲಿಫ್ಟಿಂಗ್ ಒಕ್ಕೂಟ, ರೈಲ್ವೇಸ್, ಪ್ರಾಯೋಜಕತ್ವ ವಹಿಸಿಕೊಂಡವರು, ಮಾರ್ಕೆಟಿಂಗ್ ಏಜೆನ್ಸಿ ಐಒಎಸ್‌ ಸಂಸ್ಥೆಗಳಿಗೆ ಧನ್ಯವಾದಗಳು. ಕಠಿಣ ಪರಿಶ್ರಮ, ಪ್ರೋತ್ಸಾಹ ಮತ್ತು ತರಬೇತಿ ನೀಡಿದ ಕೋಚ್ ವಿಜಯ್ ಶರ್ಮಾ ಹಾಗೂ ಸಹಾಯಕ ಸಿಬ್ಬಂದಿಗೂ ವಿಶೇಷ ಧನ್ಯವಾದಗಳು. ವೇಟ್‌ಲಿಫ್ಟಿಂಗ್ ವಿಭಾಗದ ಎಲ್ಲ ಸಹೋದರ–ಸಹೋದರಿಯರು ಮತ್ತು ದೇಶದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. ಜೈ ಹಿಂದ್’ ಎಂದು ಚಾನು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.‌

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ