ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ: ಕಾರಿನಲ್ಲಿದ್ದ ನಾಲ್ಕು ಅಧಿಕಾರಿಗಳ ಅಮಾನತು

ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ: ಕಾರಿನಲ್ಲಿದ್ದ ನಾಲ್ಕು ಅಧಿಕಾರಿಗಳ ಅಮಾನತು

ನವದೆಹಲಿ: ಬಿಜೆಪಿ ಅಭ್ಯರ್ಥಿಯೊಬ್ಬರ ಕಾರಿನಲ್ಲಿ ಇವಿಎಂಗಳನ್ನು ಸಾಗಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಶುಕ್ರವಾರ ಅಸ್ಸಾಮಿನ ನಾಲ್ವರು ಮತಗಟ್ಟೆ ಅಧಿಕಾರಿಗಳನ್ನು ಅಮಾನತು ಮಾಡಿದೆ.

     ಗುರುವಾರ ಎರಡನೇ ಹಂತದ ಮತದಾನ ಮುಕ್ತಾಯವಾದ ಬಳಿಕ ಮತಗಟ್ಟೆ ಅಧಿಕಾರಿಗಳು ಇವಿಎಂ ಯಂತ್ರಗಳನ್ನು ಅಧಿಕೃತ ವಾಹನದಲ್ಲಿ ಸಾಗಿಸುವಾಗ ಅವರ ಕಾರು ಕೆಟ್ಟು ಮಾರ್ಗ ಮಧ್ಯೆ ನಿಂತಿತು ಎಂದು ಹೇಳಲಾಗಿದೆ. ಅಧಿಕಾರಿಗಳು ಹಿಂದೆ ಬರುತ್ತಿದ್ದ ವಾಹನದ ಸಹಾಯ ಕೋರಿ, ಆ ವಾಹನದಲ್ಲಿ ಸಂಚಾರ ಮುಂದುವರಿಸಿದ್ದರು ಎಂದು ವರದಿಯಾಗಿದೆ.

     ನಿನ್ನೆ ರಾತ್ರಿಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊ ಹರಿದಾಡುತ್ತಿದ್ದು, ಪಥರ್‌ಕಾಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಪೌಲ್‌ ಅವರಿಗೆ ಸೇರಿದ ಕಾರಿನಲ್ಲಿ ಇವಿಎಂಗಳನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಕಾರನ್ನು ತಡೆದು ಸ್ಥಳೀಯ ಜನರ ಗುಂಪು  ಚಾಲಕನ್ನು ಪ್ರಶ್ನಿಸಿತ್ತು. ಘಟನೆಯಲ್ಲಿ ಇವಿಎಂಗಳಿಗೆ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

      ಸಾರಿಗೆ ಶಿಷ್ಟಾಚಾರದ ಉಲ್ಲಂಘನೆಗಾಗಿ ಮತಗಟ್ಟೆ ಅಧಿಕಾರಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ಮತಗಟ್ಟೆ ಅಧಿಕಾರಿ ಮತ್ತು ಇತರೆ ಮೂವರು ಸಿಬ್ಬಂದಿಯನ್ನು ಅಮಾನತಿನಲ್ಲಿಡಲಾಗಿದೆ. ಇವಿಎಂಗಳಿಗೆ ಯಾವುದೇ ಹಾನಿಯಾಗದಿದ್ದರೂ, ಮತಗಟ್ಟ ಸಂಖ್ಯೆ 149ರಲ್ಲಿ ಮರುಮತದಾನ ನಡೆಸಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.

ಅಧಿಕಾರಿಗಳ ಸ್ಪಷ್ಟೀಕರಣ: ಚುನಾವಣಾ ಆಯೋಗಕ್ಕೆ ಸೇರಿದ್ದ ಕಾರು ಕೆಟ್ಟಿತ್ತು ಹಾಗೂ ಅಧಿಕಾರಿಗಳು ಬೇರೊಂದು ವಾಹನದ ಸಹಕಾರ ಕೋರಿದ್ದರು. ಅದು ಬಿಜೆಪಿ ಅಭ್ಯರ್ಥಿಗೆ ಸೇರಿದ ಕಾರು ಎಂಬುದು ನಂತರವಷ್ಟೇ ತಿಳಿಯಿತು ಎನ್ನಲಾಗಿದೆ. ರಾತ್ರಿ ಸುಮಾರು 9.20ರ ಸಮಯದಲ್ಲಿ ಅಧಿಕಾರಿಗಳು  ಕಾರೊಂದನ್ನು ನಿಲ್ಲಿಸಿ ಸಹಾಯ ಕೇಳಿದ್ದರು. ಇವಿಎಂಗಳು ಮತ್ತು ಇತರೆ ವಸ್ತುಗಳನ್ನು ತೆಗೆದುಕೊಂಡು ಆ ವಾಹನದಲ್ಲಿ ಪ್ರಯಾಣಿಸಿದ್ದಾರೆ. ಆ ವಾಹನ ಯಾರಿಗೆ ಸೇರಿದ್ದು ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿರಲಿಲ್ಲ.

     ಮತಗಟ್ಟೆ 149–ಇಂದಿರಾ ಎಂವಿ ಸ್ಕೂಲ್‌ ಎಲ್‌ಎಸಿ 1 ರತಾಬಾರಿ (ಎಸ್‌ಸಿ) ವಲಯದಲ್ಲಿ ನಿಯೋಜನೆಯಾಗಿದ್ದ ಅಧಿಕಾರಿಗಳು ಅಮಾನತಗೊಂಡಿದ್ದಾರೆ. ಮತಗಟ್ಟೆ ಅಧಿಕಾರಿ ಮತ್ತು ಮೂವರು ಮತಗಟ್ಟೆ ಸಿಬ್ಬಂದಿ ಜೊತೆಗೆ ಪೊಲೀಸ್‌ ಕಾನ್‌ಸ್ಟೆಬಲ್‌ ಮತ್ತು ಹೋಂಗಾರ್ಡ್‌ ಇದ್ದರು ಎಂದು ಚುನಾವಣಾ ಆಯೋಗ ತಿಳಿಸಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ