ಪ್ರಧಾನಿ ವಿರುದ್ಧ ಟ್ವೀಟ್‌ : ದಲಿತ ನಾಯಕ ಶಾಸಕ ಜಿಗ್ನೇಶ್‌ ಮೇವಾನಿ ಬಂಧನ

ಪ್ರಧಾನಿ ವಿರುದ್ಧ ಟ್ವೀಟ್‌ : ದಲಿತ ನಾಯಕ ಶಾಸಕ ಜಿಗ್ನೇಶ್‌ ಮೇವಾನಿ ಬಂಧನ

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟ್ವೀಟ್‌ ಮಾಡಿದ ಆರೋಪದಲ್ಲಿ ವಡಗಾಮ್ ಕ್ಷೇತ್ರದ ಶಾಸಕ ಮತ್ತು ದಲಿತ ನಾಯಕ ಜಿಗ್ನೇಶ್‌ ಮೆವಾನಿ ಅವರನ್ನು ಅಸ್ಸಾಂ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

      'ಗೋಡ್ಸೆಯನ್ನು ದೇವರಾಗಿ ಕಾಣುವ' ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಕೋಮು ಸಂಘರ್ಷ ಕೊನೆಗೊಂಡು ಶಾಂತಿ ಮತ್ತು ಸೌಹಾರ್ದತೆ ನೆಲೆ ನಿಲ್ಲುವಂತೆ ಮನವಿ ಮಾಡಬೇಕು ಎಂಬರ್ಥದ ಟ್ವೀಟ್‌ಗಳನ್ನು ಜಿಗ್ನೇಶ್‌ ಮಾಡಿದ್ದಾರೆ. ಈ ಬಗ್ಗೆ ದಾಖಲಾಗಿರುವ ದೂರಿನ ಅನ್ವಯ ಪೊಲೀಸರು ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.

      ಅಸ್ಸಾಂನ ನಾಲ್ವರು ಪೊಲೀಸರನ್ನು ಒಳಗೊಂಡ ತಂಡವು ಬುಧವಾರ ರಾತ್ರಿ 11.30ರ ಸುಮಾರಿಗೆ ಬನಾಸಕಾಂಠಾದ ಪಾಲನ್ಪುರ್‌ನ ಅತಿಥಿ ಗೃಹದಿಂದ ಜಿಗ್ನೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಜಿಗ್ನೇಶ್‌ ಅವರ ವಿರುದ್ಧದ ಆರೋಪಗಳ ಕುರಿತು ಪೊಲೀಸರು ವಿವರ ನೀಡಲಿಲ್ಲ. ಸ್ಪಷ್ಟವಾದ ಯಾವುದೇ ಕಾರಣಗಳನ್ನು ನೀಡದೆ ಪೋಲಿಸರು ಮೇವಾನಿಯನ್ನು ಬಂಧಿಸಿದ್ದಾರೆ ಎಂದು ಅವರ ಗೆಳೆಯ ತಿಲಿಸಿದ್ದಾರೆ. 

      ಅಸ್ಸಾಂ ಕೋಕರಾಝಾರ್‌ ಜಿಲ್ಲೆಯಲ್ಲಿ ಅನುಪ್‌ ಕುಮಾರ್‌ ಡೇ ಎಂಬುವವರು ಜಿಗ್ನೇಶ್‌ ಅವರ ವಿರುದ್ಧ ದೂರು ನೀಡಿದ್ದಾರೆ. ಸೆಕ್ಷನ್‌ 120ಬಿ (ಅಪರಾಧ ಸಂಚು), ಸೆಕ್ಷನ್‌ 153 (ಎ) (ಎರಡು ಸಮುದಾಯಗಳ ನಡುವೆ ದ್ವೇಷ ಹಂಚುವುದು), 295 (ಎ) (ಧಾರ್ಮಿಕ ಭಾವನೆಗೆ ಧಕ್ಕೆ ತರಲು ಪ್ರಾರ್ಥನಾ ಸ್ಥಳಕ್ಕೆ ಕಳಂಕ ಉಂಟು ಮಾಡುವುದು), 506 (ಅಪರಾಧದ ಬೆದರಿಕೆ) ಹಾಗೂ ಐಟಿ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

      ಏಪ್ರಿಲ್‌ 18ರಂದು ಜಿಗ್ನೇಶ್‌ ಅವರು ಮಾಡಿರುವ ಟ್ವೀಟ್‌ಗಳ ವಿರುದ್ಧ ಈ ಪ್ರಕರಣ ದಾಖಲಾಗಿದೆ. 'ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಗೋಡ್ಸೆಯನ್ನು ದೇವರಾಗಿ ಕಾಣುತ್ತಾರೆ ಹಾಗೂ ಪೂಜಿಸುತ್ತಾರೆ. ಕೋಮು ಗಲಭೆ ನಡೆದಿರುವ ಹಿಮ್ಮತ್‌ನಗರ, ಕಂಭಾತ್‌ ಹಾಗೂ ವೆರಾವಲ್‌ನಲ್ಲಿ ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ನಡೆದುಕೊಳ್ಳುವಂತೆ ಪ್ರಧಾನಿ ಏಪ್ರಿಲ್‌ 20ಕ್ಕೆ ಗುಜರಾತ್‌ಗೆ ಭೇಟಿ ನೀಡಿದಾಗ ಆಗ್ರಹಿಸಬೇಕು' ಎಂದು ಟ್ವೀಟಿನಲ್ಲಿ ಕಂಡಿರುವುದಾಗಿ ದೂರುದಾರ ಅನುಪ್‌ ಕುಮಾರ್‌ ಡೇ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

      ಈ ಟ್ವೀಟ್‌ಗಳಿಂದಾಗಿ ಸಾರ್ವಜನಿಕರ ನೆಮ್ಮದಿಗೆ ಹಾನಿಯಾಗಲಿದೆ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಗುಂಪು ಮತ್ತೊಂದು ಸಮುದಾಯ ಮೇಲೆ ಯಾವುದೇ ದುಷ್ಕೃತ್ಯ ನಡೆಸುವ ಬಗ್ಗೆ ಉತ್ತೇಜಿಸುವಂತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

      ಜಿಗ್ನೇಶ್ ಮೆವಾನಿ (@jigneshmevani80) ಅವರು ಮಾಡಿರುವ ಎರಡು ಟ್ವೀಟ್‌ಗಳನ್ನು ಟ್ವಿಟರ್‌, ಭಾರತದಲ್ಲಿ ತಡೆಹಿಡಿದಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ