ಆರು ತಿಂಗಳಲ್ಲಿ ಬದಲಾದ ನಾಲ್ಕು ಬಿಜೆಪಿ ಮುಖ್ಯಮಂತ್ರಿಗಳು: ವೈಫಲ್ಯ ಮರೆ ಮಾಚುವ ಪ್ರಯತ್ನ-ಕಾಂಗ್ರೆಸ್ ಟೀಕೆ

ಆರು ತಿಂಗಳಲ್ಲಿ ಬದಲಾದ ನಾಲ್ಕು ಬಿಜೆಪಿ ಮುಖ್ಯಮಂತ್ರಿಗಳು: ವೈಫಲ್ಯ ಮರೆ ಮಾಚುವ ಪ್ರಯತ್ನ-ಕಾಂಗ್ರೆಸ್ ಟೀಕೆ

ದೆಹಲಿ: ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಮೂಲಕ ಕಳೆದ ಆರು ತಿಂಗಳಲ್ಲಿ ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿಯ ನಾಲ್ಕನೇ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.

      ಉತ್ತರಾಖಂಡ, ಕರ್ನಾಟಕ ಮತ್ತು ಗುಜರಾತ್ ನಲ್ಲಿ ಕಳೆದ ಆರು ತಿಂಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಿರುವ ಬಿಜೆಪಿ, ನಾಲ್ಕು ನಾಯಕರನ್ನು ಕೆಳಗಿಳಿಸಿದೆ.

      ಈ ವರ್ಷದ ಮಾರ್ಚ್‌ನಲ್ಲಿ ಉತ್ತರಾಖಂಡದ ಆಗಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಬದಲಿಸಿ ಲೋಕಸಭಾ ಸದಸ್ಯ ತಿರತ್ ಸಿಂಗ್ ರಾವತ್ ಅವರನ್ನು ಬಿಜೆಪಿಯು ಮುಖ್ಯಮಂತ್ರಿಯನ್ನಾಗಿ ನೇಮಿಸಿತು. ತಿರತ್‌ ಸಿಂಗ್‌ ರಾವತ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ನಾಲ್ಕು ತಿಂಗಳಾಗಿರಲಿಲ್ಲ. ಅಷ್ಟರಲ್ಲೇ ಅವರನ್ನೂ ಕೆಳಗಿಳಿಸಲಾಯಿತು. ತಿರತ್ ಸಿಂಗ್ ರಾವತ್ ಬದಲಿಗೆ ಎರಡು ಬಾರಿಯ ಶಾಸಕ ಪುಷ್ಕರ್ ಸಿಂಗ್ ಧಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಉತ್ತರಾಖಂಡದ ನಂತರ, ಕರ್ನಾಟಕದಲ್ಲಿ ಬಿಜೆಪಿಯು ಮಹತ್ವದ ಹೆಜ್ಜೆ ಇಟ್ಟು, ಬಿ.ಎಸ್‌.ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆದು ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿತು.

      ಹೊಸ ನಾಯಕತ್ವವನ್ನು ಮುನ್ನೆಲೆಗೆ ತರಲು ಗುಜರಾತ್ ಮತ್ತು ಕರ್ನಾಟಕದಲ್ಲಿ ಮುಖ್ಯಮಂತ್ರಿಗಳನ್ನು ಬದಲಾಯಿಸಲಾಗಿದೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ. ಕರ್ನಾಟಕದಲ್ಲಿ, ಯಡಿಯೂರಪ್ಪ ಮತ್ತು ಅವರ ಮಗನ ವಿರುದ್ಧ ತೀವ್ರ ಅಸಮಾಧಾನವಿತ್ತು. ಅದೇ ರೀತಿ ರೂಪಾನಿಯನ್ನು ತೆಗೆದುಹಾಕಲು ಗುಜರಾತ್ ಘಟಕದಲ್ಲಿ ಬೇಡಿಕೆ ಇತ್ತು. ರೂಪಾನಿ ನಾಯಕತ್ವದಲ್ಲಿ ಮುಂದಿನ ವರ್ಷದ ವಿಧಾನಸಭೆ ಚುನಾವಣೆ ಗೆಲ್ಲುವುದು ಕಷ್ಟ ಎಂದು ಅವರು ಹೇಳಿದರು.

      ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿರುವುದು, ತಮ್ಮ ವೈಪಲ್ಯಗಳನ್ನು ಮರೆಮಾಚಿ, ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಹೈಕಮಾಂಡ್ ಮಾಡುತ್ತಿರುವ ನಾಟಕ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಭರತ್ ಸೋಲಂಕಿ ಆರೋಪಿಸಿದ್ದಾರೆ. ಕೋವಿಡ್ ನಂತರ ಗುಜರಾತ್ ರಾಜ್ಯ ಸಾಕಷ್ಟು ತೊಂದರೆ ಅನುಭವಿಸಿತು. ಆದರೂ ರಾಜ್ಯವನ್ನು ಸಶಕ್ತಗೊಳಿಸಲು ಮುಖ್ಯಮಂತ್ರಿ ರೂಪಾನಿ ಅವರು ಯಾವುದೇ ಪರಿಹಾರ ಕ್ರಮಗಳನ್ನು ಜಾರಿಗೊಳಿಸಲಿಲ್ಲ. ಯಾವುದೇ ನಷ್ಟ ಪರಿಹಾರವನ್ನು ಜನಕ್ಕೆ ನೀಡಲಿಲ್ಲ. ಇದರಿಂದ ಅವರನ್ನು ಕಿತ್ತೊಗೆಯಲಾಗಿದೆ ಎಂದೂ ಹೇಳಿದ್ದಾರೆ.

      ನಾಯಕತ್ವ ಬದಲಾವಣೆಗೂ ಮುನ್ನ ಅದಕ್ಕೆ ಸಂಬಂಧಿಸಿದ ಸುದ್ದಿಗಳು ಇಷ್ಟು ದಿನ ಬಿಜೆಪಿಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದವು. ಆದರೆ, ಗುಜರಾತ್‌ನಲ್ಲಿ ಇದಕ್ಕೆ ವ್ಯತಿರಿಕ್ತವಾದ ಬೆಳವಣಿಗೆ ನಡೆದಿದೆ. ಸದ್ದಿಲ್ಲದೇ ರೂಪಾನಿ ಅವರನ್ನು ಕೆಳಗಿಳಿಸಲಾಗಿದೆ. ಮುಖ್ಯಮಂತ್ರಿಯನ್ನು ಬದಲಿಸಲು ಪಕ್ಷದ ಒಂದು ಬಣದಿಂದ ಚರ್ಚೆ ಮತ್ತು ಬೇಡಿಕೆ ಇದ್ದಿದ್ದು ನಿಜ. ಆದರೆ, ಈ ರೀತಿ ಸುದ್ದಿ ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ರಾಜೀನಾಮೆ ಸಲ್ಲಿಸಿದ ಬಳಿಕವೇ ಆ ಸುದ್ದಿ ತಿಳಿಯಿತು. ಅಲ್ಲಿನವರೆಗೆ ನಮಗೆ ವಿಚಾರವೇ ಗೊತ್ತಿರಲಿಲ್ಲ, ಎಂದು ಗುಜರಾತ್‌ನ ಬಿಜೆಪಿ ನಾಯಕರೊಬ್ಬರು ಹೇಳಿದರು.

      ಸದ್ದಿಲ್ಲದೆ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ರಾಜೀನಾಮೆ ನೀಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಹಲವು ವಿಧದ ಚರ್ಚೆಗೂ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ