₹50 ಸಾವಿರ ಲಂಚ ಪಡೆಯುತ್ತಿದ್ದ ಆರೋಪ: ಲೋಕಾಯುಕ್ತ ಬಲೆಗೆ ಬಿದ್ದ ಡಿಸಿಎಫ್

ಮಡಿಕೇರಿ: ತನ್ನ ಅಧೀನ ಅಧಿಕಾರಿಯೊಬ್ಬರಿಂದ ₹ 50 ಸಾವಿರ ಲಂಚ ಪಡೆಯುತ್ತಿದ್ದ ಆರೋಪ ಮೇರೆಗೆ ಇಲ್ಲಿನ ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಪೂರ್ಣಿಮಾ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಇಲಾಖೆಯಿಂದ ₹ 1.60 ಲಕ್ಷ ವೆಚ್ಚದಲ್ಲಿ 2 ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಇದರಲ್ಲಿ ಶೇ 60ರಷ್ಟು ಹಣವನ್ನು ತನಗೆ ನೀಡಬೇಕು ಎಂದು ಆರೋಪಿ ಪೂರ್ಣಿಮಾ ತನ್ನ ಅಧೀನ ಅಧಿಕಾರಿಯನ್ನು ಪೀಡಿಸುತ್ತಿದ್ದರು. ಈ ಕಾಮಗಾರಿಯನ್ನು ಲಂಚ ಪಡೆಯದೇ ಕೈಗೊಂಡಿರುವುದಾಗಿ ಹೇಳಿದರೂ ₹ 1 ಲಕ್ಷ ಹಣ ನೀಡಬೇಕು. ಇಲ್ಲದೇ ಇದ್ದರೆ ಅಮಾನತುಪಡಿಸಲಾಗುವುದು ಎಂದು ಬೆದರಿಕೆಯನ್ನೂ ಅವರು ತನ್ನ ಅಧೀನ ಅಧಿಕಾರಿಗೆ ಒಡ್ಡಿದ್ದರು.
ಇದರ ಮುಂಗಡ ಹಣವಾಗಿ ₹ 50 ಸಾವಿರವನ್ನು ಅರಣ್ಯ ಭವನದ ಮುಂಭಾಗ ಇರುವ ತನ್ನ ಜೀಪಿನಲ್ಲಿ ಹಾಕುವಂತೆ ಪೂರ್ಣಿಮಾ ಸೂಚಿಸಿದ್ದರು. ಅದರಂತೆ ಅಧೀನ ಅಧಿಕಾರಿಯು ಗುರುವಾರ ಸಂಜೆ ಜೀಪಿನಲ್ಲಿ ಲಂಚದ ಹಣ ಹಾಕುತ್ತಿದ್ದಂತೆ ಪೂರ್ಣಿಮಾ ಅವರನ್ನು ಬಂಧಿಸಲಾಯಿತು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಹೊದ್ದೂರು ವೋಟೆಕಾಡು ನರ್ಸರಿಯಲ್ಲಿ ವಾಚರ್ ಒಬ್ಬರನ್ನು ನೇಮಿಸಿಕೊಂಡಂತೆ ದಾಖಲಾತಿ ಸೃಷ್ಟಿಸಿ ವಾಚರ್‌ಗೆ ನೀಡಲಾಗುವ ಮಾಸಿಕ ₹ 15 ಸಾವಿರ ವೇತನವನ್ನು ತನಗೆ ನೀಡುವಂತೆಯೂ ಪೂರ್ಣಿಮಾ ತನ್ನ ಅಧೀನ ಅಧಿಕಾರಿಗೆ ಹೇಳಿದ್ದರು. ಇದಕ್ಕೆ ಒಪ್ಪದಿದ್ದಾಗ ಸಾರ್ವಜನಿಕವಾಗಿ ತನ್ನನ್ನು ನಿಂದಿಸುತ್ತಿದ್ದರು ಎಂದು ಅಧೀನ ಅಧಿಕಾರಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮೈಸೂರು ವಿಭಾಗದ ಲೋಕಾಯುಕ್ತ ಎಸ್.ಪಿ ಸುರೇಶ್‌ಬಾಬು ಅವರ ಮಾರ್ಗದರ್ಶನದಲ್ಲಿ, ಮೈಸೂರಿನ ಡಿವೈಎಸ್‌ಪಿ ಕೃಷ್ಣಯ್ಯ, ಮಡಿಕೇರಿಯ ಡಿವೈಎಸ್‌ಪಿ ಪವನ್‌ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಇನ್‌ಸ್ಪೆಕ್ಟರ್‌ಗಳಾದ ಲೋಕೇಶ್, ಜಯರತ್ನಾ, ಸಿಬ್ಬಂದಿಯಾದ ಲೋಕೇಶ್, ಮಂಜುನಾಥ, ಸಲಾಹುದ್ದೀನ್, ದೀಪಿಕಾ, ಅರುಣ್‌ಕುಮಾರ್, ಶಶಿ, ತ್ರಿವೇಣಿ, ಪ್ರಕಾಶ್, ಲೋಕೇಶ್ ಕಾರ್ಯಾಚರಣೆ ತಂಡದಲ್ಲಿದ್ದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ