363 ಸಂದದರು, ಶಾಸಕರ ವಿರುದ್ಧ ಅಪರಾಧ ಪ್ರಕರಣ: ಮೊದಲ ಸ್ಥಾನದಲ್ಲಿ ಬಿಜೆಪಿ

363 ಸಂದದರು, ಶಾಸಕರ ವಿರುದ್ಧ ಅಪರಾಧ ಪ್ರಕರಣ: ಮೊದಲ ಸ್ಥಾನದಲ್ಲಿ ಬಿಜೆಪಿ

ನವದೆಹಲಿ: 67 ಸಂಸದರು, 296 ಶಾಸಕರು ಸೇರಿದಂತೆ 363 ಜನಪ್ರತಿನಿಧಿಗಳ ವಿರುದ್ಧ ಅಪರಾಧ ಪ್ರಕರಣಗಳಿದ್ದು, ಅಪರಾಧವು ಸಾಬೀತಾದರೆ ಇವರೆಲ್ಲರೂ ಜನಪ್ರಾತಿನಿಧ್ಯ ಕಾಯ್ದೆ 1951ರ ಪ‍್ರಕಾರ ಅನರ್ಹಗೊಳ್ಳಲಿದ್ದಾರೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಅಧ್ಯಯನವು ಹೇಳಿದೆ.

      ಇಂತಹ ಅಪರಾಧ ಪ್ರಕರಣಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ 39 ಸಚಿವರೂ ಸೇರಿದ್ದಾರೆ. ಇವೆಲ್ಲವೂ ಜನಪ್ರಾತಿನಿಧ್ಯ ಕಾಯ್ದೆ 1951ರ ಅಡಿಯಲ್ಲಿ ಅನರ್ಹತೆಗೆ ಕಾರಣ ಆಗಬಹುದಾದ ಅಪರಾಧಗಳೇ ಆಗಿವೆ ಎಂದು ಎಡಿಆರ್‌ ವರದಿಯಲ್ಲಿ ಹೇಳಿದೆ. ಕಾಯ್ದೆಯ 8ನೇ ಸೆಕ್ಷನ್‌ನ (1),(2), ಮತ್ತು (3)ನೇ ಉಪ ಸೆಕ್ಷನ್‌ ಅಡಿಯಲ್ಲಿ ಪಟ್ಟಿ ಮಾಡಲಾದ ಅಪರಾಧ ಕೃತ್ಯಗಳು ಸಾಬೀತಾದರೆ, ಅಂತಹ ಜನಪ್ರತಿನಿಧಿಗಳು ತೀರ್ಪಿನ ದಿನಾಂಕದಿಂದ ಆರು ವರ್ಷಗಳ ವರೆಗೆ ಅನರ್ಹಗೊಳ್ಳುತ್ತಾರೆ.

      ಅಪರಾಧ ಹಿನ್ನೆಲೆಯ ಜನಪ್ರತಿನಿಧಿಗಳ ಪಟ್ಟಿಯಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದ್ದು, ಪಕ್ಷದ 83 ಮಂದಿ ಪಟ್ಟಿಯಲ್ಲಿದ್ದಾರೆ.

      ಅಪರಾಧ ಹಿನ್ನೆಲೆ ಇರುವವರಲ್ಲಿ 24 ಸಂಸದರು ಮತ್ತು 111 ಶಾಸಕರ ವಿರುದ್ಧ ಇನ್ನೂ ದಾವೆಗಳು ಚಾಲ್ತಿಯಲ್ಲಿದ್ದು, ಇವು ಸುಮಾರು 10 ವರ್ಷಗಳ ಹಿಂದೆ ದಾಖಲಾದ ಪ್ರಕರಣಗಳಾಗಿವೆ ಎಂದು ಅಧ್ಯಯನವು ತಿಳಿಸಿದೆ.

      ಒಟ್ಟಾರೆ 542 ಸಂಸದರು, 1,953 ಶಾಸಕರು ಸಲ್ಲಿಸಿದ ಚುನಾವಣಾ ಪ್ರಮಾಣಪತ್ರಗಳನ್ನು ವಿಶ್ಲೇಷಿಸಿರುವ ಎಡಿಆರ್‌, 67 ಸಂಸದರು, 296 ಶಾಸಕರ ವಿರುದ್ಧ ಪ್ರಕರಣಗಳಿವೆ ಎಂದು ವಿವರ ನೀಡಿದೆ.

      ಸಂಸದರ ವಿರುದ್ಧ ಸರಾಸರಿ ಆರು ವರ್ಷಗಳು ಹಾಗೂ ಶಾಸಕರ ವಿರುದ್ಧ ಸರಾಸರಿ ಏಳು ವರ್ಷಗಳಿಂದ  ಪ್ರಕರಣಗಳು ಬಾಕಿ ಉಳಿದಿವೆ. ಒಟ್ಟು 9 ಮಂದಿ ಜನಪ್ರತಿನಿಧಿಗಳ ವಿರುದ್ಧ ಸುಮಾರು 25 ವರ್ಷದ ಹಿಂದೆ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿಯನ್ನೂ ಈ ಸಮೀಕ್ಷೆ ಹೊರಹಾಕಿದೆ.

      ಬಿಜೆಪಿ ಶಾಸಕ, ಬಿಹಾರದ ರಾಮನಾರಾಯಣ ಮಂಡಲ್‌ ವಿರುದ್ಧ 31 ವರ್ಷದಿಂದ ಪ್ರಕರಣ ಬಾಕಿ ಇದೆ. 1989ರಲ್ಲಿ ಪ್ರಕರಣ ದಾಖಲಾಗಿದೆ. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕ ಮನೋರಂಜನ್ ಬ್ಯಾಪಾರಿ ವಿರುದ್ಧವೂ 31 ವರ್ಷದ ಹಿಂದೆ ಪ್ರಕರಣ ದಾಖಲಾಗಿದ್ದರೂ, 2019ರ ಡಿಸೆಂಬರ್‌ನಲ್ಲಿ ಆರೋಪಗಳ ಪಟ್ಟಿ ಮಾಡಲಾಗಿದೆ. ಜೆಎಂಎಂನ ಮಿಥಿಲೇಶ್‌ ಕುಮಾರ್ ಠಾಕೂರ್‌, ಸೌಮ್ಯ ರಂಜನಾ ಪಟ್ನಾಯಿಕ್‌ ವಿರುದ್ಧ 29 ವರ್ಷಗಳಿಂದ ಪ್ರಕರಣ ಬಾಕಿ ಇದೆ.

      ಎಡಿಆರ್‌ನ ವರದಿ ಅನುಸಾರ, ಕ್ರಿಮಿನಲ್‌ ಹಿನ್ನೆಲೆಯ ಜನಪ್ರತಿನಿಧಿಗಳಲ್ಲಿ ಬಿಜೆಪಿಯ ನಂತರದ ಸ್ಥಾನದಲ್ಲಿ ಕಾಂಗ್ರೆಸ್‌ ಇದ್ದು, ಆ ಪಕ್ಷದ ಸಂಸದರು ಮತ್ತು ಶಾಸಕರು ಸೇರಿ 47 ಮಂದಿಯ ವಿರುದ್ಧ ಪ್ರಕರಣಗಳಿವೆ. ತೃಣಮೂಲ ಕಾಂಗ್ರೆಸ್‌ನ 25, ಬಿಜೆಡಿ, ವೈಎಸ್‌ಆರ್ ಕಾಂಗ್ರೆಸ್‌, ಸಿಪಿಎಂನ ತಲಾ 22 ಜನಪ್ರತಿನಿಧಿಗಳು ಇದ್ದಾರೆ. ಉಳಿದಂತೆ ಡಿಎಂಕೆ 14, ಆರ್‌ಜೆಡಿ 14 ಮತ್ತು ಎಎಪಿ ಹಾಗೂ ಶಿವಸೇನಾದ ತಲಾ 12 ಜನಪ್ರತಿನಿಧಿಗಳಿದ್ದಾರೆ.

      2019ರ ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಅಂದರೆ 67 ರಾಜ ಕಾರಣಿಗಳು ತಮ್ಮ ವಿರುದ್ಧ ಅಪರಾಧ ಪ್ರಕರಣಗಳಿವೆ ಎಂದು ಘೋಷಿಸಿ ಕೊಂಡಿದ್ದರು. 2020ರ ಬಿಹಾರ ಚುನಾವಣೆಯಲ್ಲಿ 54, 2021ರ ಕೇರಳ ವಿಧಾನಸಭೆ ಚುನಾವಣೆಯಲ್ಲಿ 42 ಮಂದಿ ತಮ್ಮ ವಿರುದ್ಧ ಕ್ರಿಮಿನಲ್‌ ಆರೋಪಗಳಿರುವುದನ್ನು ಘೋಷಿಸಿಕೊಂಡಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ