21ರ ಕಾಲೇಜು ವಿದ್ಯಾರ್ಥಿನಿ ಇನ್ನು ದೇಶದ ಅತೀ ಕಿರಿಯ ಮೇಯರ್

ತಿರುನಂತಪುರಂ: ಕೇರಳದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆಗೆ ಮೇಯರ್ ಆಗಿ 21 ವರ್ಷದ ಕಾಲೇಜು ವಿದ್ಯಾರ್ಥಿನಿ ಆರ್ಯ ರಾಜೇಂದ್ರನ್ ಆಯ್ಕೆಯಾಗಿದ್ದಾರೆ. ಇದು ದೇಶದಲ್ಲೇ ಅತೀ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಎಲ್ಲರನ್ನೂ ಜೊತೆಯಾಗಿ ಕೊಂಡುಹೋಗುವುದು ನನ್ನ ಉದ್ಧೇಶವೇ ಹೊರತು ಯಾರನ್ನೂ ನಿಯಂತ್ರಿಸುವುದು ಅಲ್ಲ ಎಂದು ದೇಶದ ಅತೀ ಕಿರಿಯ ಮೇಯರ್ ಆರ್ಯ ಪ್ರತಿಕ್ರಿಯಯಿಸಿದರು. ಮುಡವನಮುಗಲ್ ನ ತನ್ನ ಬಾಡಿಗೆ ಮನೆಯಿಂದ ತಂದೆ ಜೊತೆ ಬೈಕಿನಲ್ಲಿ ಮಹಾನಗರ ಪಾಲಿಕೆಗೆ ಆಗಮಿಸಿದ ಆರ್ಯ ಮೇಯರ್ ರ ಅಧಿಕೃತ ಕಾರಿನಲ್ಲಿ ಹಿಂದಿರುಗಿದರು.
ಸೋಮವಾರ ಮೇಯರ್ ಹುದ್ದೆಗೆ ನಡೆದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಸಿಪಿಐ-ಎಂ ಸದಸ್ಯೆಯಾಗಿರುವ ಆರ್ಯ 54 ಮತಗಳನ್ನು ಪಡೆದು ಗೆದ್ದು ಮೇಯರ್ ಸ್ಥಾನ ಅಲಂಕರಿಸಿದರು. ಬಿಜೆಪಿ ನೇತೃತ್ವದ ಎನ್.ಡಿ.ಎ. ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೂಡಾ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇಬ್ಬರು ಕಾಂಗ್ರೆಸ್ ಬಂಡುಕೋರರ ಮತವನ್ನೂ ಪಡೆದ ಆರ್ಯ ನಿರೀಕ್ಷೆಗಿಂತ ಎರಡು ಹೆಚ್ಚುವರಿ ಮತಗಳನ್ನು ಪಡೆದು ಒಟ್ಟು 54 ಮತಗಳನ್ನು ಪಡೆದರು. ಬಿಜೆಪಿ 35 ಮತಗಳನ್ನೂ, ಯುಡಿಎಫ್ 9 ಮತಗಳನ್ನೂ ಪಡೆಯಿತು. ಸಿಪಿಎಂನ ಒಂದು ಮತ ಅಸಿಂಧುವಾಯಿತು.
ತಿರುವನಂತಪುರಂನ ಆಲ್ ಸೇಂಟ್ಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ಗಣಿತ ವಿದ್ಯಾರ್ಥಿನಿಯಾಗಿರುವ ಆರ್ಯ, ಇತ್ತೀಚೆಗೆ ನಡೆದ ತಿರುವನಂತಪುರಂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಡವನಮುಗಲ್ ವಾರ್ಡ್ನಿಂದ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. ಅವರು ತನ್ನ ಎದುರಾಳಿ ಕಾಂಗ್ರೆಸ್ ಗಿಂತ 549 ಹೆಚ್ಚುವರಿ ಮತಗಳನ್ನು ಪಡೆದು ಒಟ್ಟು 2,872 ಮತಗಳನ್ನು ಪಡೆದಿದ್ದರು. ಚುನಾವಣೆಯಲ್ಲಿ ಸಿಪಿಐ-ಎಂ ನೇತೃತ್ವದ ಎಲ್ ಡಿಎಫ್ 51 ಸ್ಥಾನಗಳನ್ನೂ, ಬಿಜೆಪಿ 34 ಸ್ಥಾನಗಳನ್ನೂ, ಕಾಂಗ್ರೆಸ್ ನೇತೃತ್ವದ ಯುಡಿಎಫ್ 10 ಸ್ಥಾನಗಳನ್ನೂ ಮತ್ತು ಪಕ್ಷೇತರರು 5 ಸ್ಥಾನಗಳನ್ನೂ ಗಳಿಸಿದ್ದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ