ಹೋರಾಟದಲ್ಲೇ ಅಂತ್ಯವಾಯಿತು ಹೋರಾಟಗಾರನ ಬದುಕು: ದೊರೆಸ್ವಾಮಿ ಇನ್ನಿಲ್ಲ

ಹೋರಾಟದಲ್ಲೇ ಅಂತ್ಯವಾಯಿತು ಹೋರಾಟಗಾರನ ಬದುಕು: ದೊರೆಸ್ವಾಮಿ ಇನ್ನಿಲ್ಲ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ (103) ಹೃದಯಾಘಾತದಿಂದ‌ ಜಯದೇವ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ನಿಧನರಾದರು.

      ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರು  1918 ಏಪ್ರಿಲ್ 10 ರಂದು ಜನಿಸಿದರು. ಹುಟ್ಟು ಹೋರಾಟಗಾರನಾಗಿದ್ದ ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿಯವರು ತನ್ನ ಮುಪ್ಪಿನ ಕಾಲದಲ್ಲೂ ಹೋರಾಟವನ್ನು ಕೈ ಬಿಟ್ಟವರಲ್ಲ.

      ಹಾರೋಹಳ್ಳಿಯಲ್ಲಿ ಹುಟ್ಟಿ, ನಂತರ ಬೆಂಗಳೂರು ಸೇರಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ದೊರೆಸ್ವಾಮಿ ನಂದಿಬೆಟ್ಟದಲ್ಲಿ ಗಾಂಧಿ ಅವರನ್ನು ಮೊದಲ ಬಾರಿಗೆ ಕಂಡರು. ಅದಕ್ಕೂ ಮುನ್ನ ಐದನೆಯ ಕ್ಲಾಸಿನಲ್ಲಿದ್ದಾಗಲೇ ಗಾಂಧಿಯವರ ‘ಮೈ ಅರ್ಲಿ ಲೈಫ್ಪುಸ್ತಕದ ಪ್ರಭಾವಕ್ಕೊಳಗಾಗಿದ್ದರು.

      ಗಾಂಧೀ ಸ್ಪರ್ಶದಿಂದ ಹುಟ್ಟಿದ ಸಾಮಾಜಿಕ ಬದ್ಧತೆ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರಿಂದ ಬಂದ ನಿರ್ಭೀತಿ, ನಿರಂತರ ಎಚ್ಚರ, ಸರ್ವೋದಯ ಚಳವಳಿಯಿಂದ ಬಂದ ಭೂಹಂಚಿಕೆಯ ಬಗೆಗಿನ ಕಾಳಜಿ, ರಚನಾತ್ಮಕ ಕಾರ್ಯಕ್ರಮಗಳು, ಭೂಗಳ್ಳರು ಕಬಳಿಸಿದ ಲಕ್ಷಗಟ್ಟಲೆ ಎಕರೆ ಸರ್ಕಾರಿ ಜಮೀನನ್ನು ಉಳಿಸಲು ಮಾಡಿದ ಹೋರಾಟ ಹೀಗೆ ಅವರು ಸದಾ ಚಟುವಟಿಕೆಯಲ್ಲಿದ್ದವರು.

      ದೊರೆಸ್ವಾಮಿಯವರು ಅಧಿಕಾರ ರಾಜಕಾರಣದತ್ತ ಹೋಗದಿದ್ದರೂ, ನಾನು ಸಕ್ರಿಯ ರಾಜಕೀಯದಲ್ಲಿದ್ದೇನೆ ಎನ್ನುತ್ತಿದ್ದ ದೊರೆಸ್ವಾಮಿಯವರು ಸಕ್ರಿಯ ರಾಜಕಾರಣ ಎಂದರೇನು ಎಂಬುದನ್ನು ತಮ್ಮ ಹೋರಾಟಗಳಿಂದಲೇ ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದರು. ದಬ್ಬಾಳಿಕೆ ಹಾಗೂ ಸರ್ವಾಧಿಕಾರದ ರಾಜಕಾರಣವನ್ನು ಚುನಾವಣೆಯಲ್ಲಿ ಹಿಮ್ಮೆಟ್ಟಿಸುವುದು ಮುಖ್ಯ ಎಂಬ ಅವರ ಮಾತು ಕೇಳುತ್ತಿದ್ದರೆ, ಒಳ್ಳೆಯ ರಾಜಕಾರಣವೆನ್ನುವುದು ಕೇವಲ ಆದರ್ಶಗಳ ಆರಾಧನೆಯಲ್ಲ, ನಿರಂತರವಾಗಿ ತಕ್ಷಣ ಎದುರಾಗುವ ಸವಾಲುಗಳಿಗೆ ಸ್ಪಂದಿಸುವುದು ಎಂದು ಅರಿವಾಗುತ್ತಿತ್ತು.

      ಹೋರಾಟಗಳ ನಡುವೆ ಬರವಣಿಗೆಯನ್ನೂ ಬಿಡದ ದೊರೆಸ್ವಾಮಿಯವರು ತಮ್ಮ 98ನೆಯ ವಯಸ್ಸಿನಲ್ಲಿ ‘ಭೂಗಳ್ಳರು ಕಬಳಿಸಿದ ಸರ್ಕಾರಿ ಜಮೀನನ್ನು ಉಳಿಸಿದ ಹೋರಾಟಎಂಬ ಪುಸ್ತಕವನ್ನೂ ಬರೆದಿದ್ದರು. ಈ ಪುಸ್ತಕ ದೊರೆಸ್ವಾಮಿಯವರ ಹರೆಯದ ದಿನಗಳ ದಿಟ್ಟ ಪತ್ರಿಕೋದ್ಯಮ ಹಾಗೂ ಅವರಲ್ಲಿ ಈ ಇಳಿ ವಯಸ್ಸಿನಲ್ಲೂ ಉಳಿದಿರುವ ನೇರ, ನಿರ್ಭೀತ, ಸತ್ಯನಿಷ್ಠ ಬರವಣಿಗೆಯ ಸಾಕ್ಷಿಯಂತಿತ್ತು.

      ಪತ್ರಿಕೆ ವಹಿಸಿಕೊಂಡ ದೊರೆಸ್ವಾಮಿ ಮೈಸೂರಿನಲ್ಲಿ ಸ್ವಾತಂತ್ರ್ಯ ಘೋಷಣೆಗೆ ಅಡ್ಡಿಯಾಗಿದ್ದ ಆರ್ಕಾಟ್ ರಾಮಸ್ವಾಮಿ ನೇತೃತ್ವದ ಮಂತ್ರಿಮಂಡಲದ ಸರ್ಕಾರವನ್ನು ವಜಾಗೊಳಿಸಿ ಜವಾಬ್ದಾರಿ ಸರ್ಕಾರವನ್ನು ಸ್ಥಾಪಿಸಲು ಒತ್ತಾಯಿಸುವ ಲೇಖನಗಳನ್ನು ಪ್ರಕಟಿಸಲಾರಂಭಿಸಿದರು. ಆರ್ಕಾಟ್ ಸರ್ಕಾರದ ವಿರುದ್ಧ ಎಂಟು ದಿನಗಳ ಕಾಲ ತಿ.ತಾ. ಶರ್ಮರ ಹರಿತವಾದ ಬರಹಗಳನ್ನು ‘ಪೌರವಾಣಿಪ್ರಕಟಿಸತೊಡಗಿದಾಗ, ಸರ್ಕಾರ ಈ ಪತ್ರಿಕೆಯ ಲೇಖನಗಳನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗೆ ತೋರಿಸಿ ಪ್ರಕಟಿಸಬೇಕೆಂಬ ನಿರ್ಬಂಧ ಹೇರಿತು.

      ಅದಕ್ಕೆಲ್ಲ ಜಗ್ಗದ ದೊರೆಸ್ವಾಮಿ ತಿ.ತಾ.ಶರ್ಮರ ಉಳಿದ ಎರಡು ಲೇಖನಗಳನ್ನೂ ಪ್ರಕಟಿಸಿ, ಆರ್ಕಾಟ್ ರಾಮಸ್ವಾಮಿ ಮೊದಲಿಯಾರರ ನೇತೃತ್ವದ ಸರ್ಕಾರದ ಈ ನಿರಂಕುಶ ನೀತಿಯನ್ನು ಪ್ರತಿಭಟಿಸಲು ನಾಳೆಯಿಂದ ಪತ್ರಿಕೆಯನ್ನು ಹೊರತರಬಾರದೆಂದು ನಿರ್ಧರಿಸಿದ್ದೇವೆ ಎಂದು ಘೋಷಿಸಿದರು.

      ಆರ್ಕಾಟ್ ನೇತೃತ್ವದ ಸರ್ಕಾರ ‘ಪೌರವಾಣಿʼ ಪತ್ರಿಕೆಯನ್ನು ಮುಟ್ಟುಗೋಲು ಹಾಕಿಕೊಂಡಿತು. ಆರ್ಕಾಟ್ ನೇತೃತ್ವದ ಸರ್ಕಾರದ ವಿರುದ್ಧ ಸತ್ಯಾಗ್ರಹಕ್ಕೆ ಜನರನ್ನು ಅಣಿಗೊಳಿಸಲು ಪತ್ರಿಕೆ ಇರಲೇಬೇಕೆಂಬುದನ್ನು ಮನಗಂಡ ದೊರೆಸ್ವಾಮಿ ಆಗ ಮದ್ರಾಸು ಪ್ರಾಂತದಲ್ಲಿದ್ದ ಹಿಂದೂಪುರದಿಂದ ಪತ್ರಿಕೆಯನ್ನು ಹೊರತಂದರು.

      ಸರ್ಕಾರ ತರಲೆ ಮಾಡಿದರೆ ಅದಕ್ಕೂ ಟಾಂಗ್ ಕೊಡಲು, ‘ಪೌರವಾಣಿಯ ಜೊತೆಗೇ, ‘ಪೌರವೀರʼ ‘ಪೌರ ಮಾರ್ತಾಂಡʼ  ‘ಪೌರದೂತʼ ‘ಪೌರ ಭಾಸ್ಕರಹೀಗೆ ಒಟ್ಟು ಐದು ಪತ್ರಿಕೆಗಳ ಸಂಪಾದಕರಾಗಿ ನೋಂದಾಯಿಸಿಕೊಂಡರು!

      ಮುಂದೆ ‘ಪೌರವಾಣಿಮೈಸೂರು ಸಂಸ್ಥಾನದೊಳಗೆ ಬರಬಾರದೆಂದು ಮೈಸೂರು ಸರ್ಕಾರ ಆದೇಶ ಹೊರಡಿಸಿದ ತಕ್ಷಣ ಅದೇ ಪತ್ರಿಕೆ ‘ಪೌರವೀರʼ ಆಗಿ ಹೊರಬಂತು! 1947ರ ಅಕ್ಟೋಬರ್ 24ರಂದು ಕೆ.ಸಿ.ರೆಡ್ಡಿಯವರ ನಾಯಕತ್ವದಲ್ಲಿ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರ ಅಸ್ತಿತ್ವಕ್ಕೆ ಬಂತು. ‘ಪೌರವಾಣಿʼಯ ಜೊತೆ ದೊರೆಸ್ವಾಮಿ ಮತ್ತೆ ಬೆಂಗಳೂರಿಗೆ ಬಂದರು.

      ಗಾಂಧೀಜಿ ಕಾಲದ ರಾಜಕಾರಣದಲ್ಲಿ ತಯಾರಾದ ದೊರೆಸ್ವಾಮಿ ಅಧಿಕಾರ ರಾಜಕಾರಣಕ್ಕಿಂತ ಗಾಂಧೀಜಿಯ ರೀತಿಯ ರಚನಾತ್ಮಕ ಕಾರ್ಯಗಳ ಹಾದಿಯಲ್ಲೇ ಮುಂದುವರಿದವರು. ಸ್ವತಂತ್ರವಾಗಿ ಬದುಕಲು ಬಯಸಿದ್ದ ದೊರೆಸ್ವಾಮಿ ಬರವಣಿಗೆ ಮಾಡಿ, ಪುಸ್ತಕಗಳನ್ನು ಪ್ರಕಟಿಸಿ ಮಾರಾಟ ಮಾಡಿ, ತಮ್ಮ ಪುಟ್ಟ ಸಂಸಾರವನ್ನು ಸಾಗಿಸಿದರು. ಅದರಲ್ಲಿ ಮೂವತ್ತು ರೂಪಾಯಿ ಬಂದರೆ ಹಿಟ್ಟು ಸೊಪ್ಪು, ಮುನ್ನೂರು ರೂಪಾಯಿ ಬಂದರೆ ಒಳ್ಳೆಯ ಊಟಹೀಗೇ ನಡೆಯಿತು ಜೀವನ.

      ಕರ್ನಾಟಕ ಏಕೀಕರಣ ಚಳವಳಿಯ ಸಂದರ್ಭದಲ್ಲಿ ದೆಹಲಿಗೆ ಹೋದ ನಿಯೋಗದಲ್ಲಿ ದೊರೆಸ್ವಾಮಿಯವರೂ ಇದ್ದರು. ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್, ಪ್ರಧಾನಿ ನೆಹರೂ ಅವರನ್ನು ಭೇಟಿ ಮಾಡಿದ ನಿಯೋಗ ಗೃಹಮಂತ್ರಿ ಸರ್ದಾರ್ ಪಟೇಲರನ್ನೂ ಭೇಟಿ ಮಾಡಿ ಏಕೀಕರಣದ ಬೇಡಿಕೆ ಇಟ್ಟಿತು.

      ಯಾರೆದುರೇ ಆದರೂ, ನೇರವಾಗಿ, ದಿಟ್ಟವಾಗಿ ನುಡಿಯಬಲ್ಲ ದಿಟ್ಟತನ ದೊರೆಸ್ವಾಮಿಯವರಿಗೆ ಸ್ವಾತಂತ್ರ್ಯ ಚಳವಳಿಯಿಂದ ಬಂದದ್ದು. ಹಾಗಾಗಿಯೇ, 1975ರ ತನಕ ಕಾಂಗ್ರೆಸ್ಸಿನಲ್ಲಿದ್ದ ಅವರು ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿ ವಿರುದ್ಧ ಬಂಡೆದ್ದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಜೈಲಿನಲ್ಲಿ ದೊರೆಸ್ವಾಮಿ ಆರೆಸ್ಸೆಸ್ ‌ನವರ ಜೊತೆಗಿದ್ದರೂ ಅವರ ರಾಜಕಾರಣ, ತತ್ವ ಎರಡನ್ನೂ ವಿರೋಧಿಸಿದವರು.

      ಸ್ವಾತಂತ್ರ್ಯ ಚಳವಳಿಯ ಕಾಲದಲ್ಲೂ, ಸ್ವಾತಂತ್ರ್ಯೋತ್ತರದಲ್ಲೂ ಸೆರೆಮನೆವಾಸ ಅನುಭವಿಸಿರುವ ದೊರೆಸ್ವಾಮಿ, ಹರಿಹರದಲ್ಲಿ ನೀಲಗಿರಿ ಬೆಳೆಸಿ ನೆಲವನ್ನು ಬಂಜರು ಮಾಡಿದ್ದ ಬಿರ್ಲಾ ಪಾಲಿ ಫೈಬರ್ಸ್ ಕಂಪೆನಿ ವಿರುದ್ಧ, ಕರ್ನಾಟಕದ ಗಣಿ ಲೂಟಿಯ ವಿರುದ್ಧ, ನೈಸ್ ಕಾರಿಡಾರ್ ರಸ್ತೆಯ ವಿರುದ್ಧ ಹೋರಾಡಿದ್ದಾರೆ. ರೈತ ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ, ರೈತ ಶಿಬಿರಗಳಲ್ಲಿ ಪಾಠ ಹೇಳಿದ್ದಾರೆ.

      ದಲಿತರ ದೇವಾಲಯ ಪ್ರವೇಶದ ಪರವಾಗಿ ನಿಂತಿದ್ದಾರೆ. ಕೋಮು ಬೆಂಕಿ ಹಚ್ಚಿದ ಊರುಗಳಲ್ಲಿ ಶಾಂತಿ ನೆಲೆಸಲು ದುಡಿದಿದ್ದಾರೆ. ಕರ್ನಾಟಕದ ಬಹುತೇಕ ಭಾಗಗಳಲ್ಲಿ ಪಾದಯಾತ್ರೆ ಮಾಡಿದ್ದಾರೆ. ಸರ್ವೋದಯದ ಭೂದಾನ ಚಳವಳಿಯ ಕಾಲದಲ್ಲಿ ಜನರಿಂದ ನಡೆದ ಭೂದಾನದಲ್ಲಿ ಪಾಲ್ಗೊಂಡಿದ್ದಾರೆ. ಕೇಂದ್ರ ಸರಕಾರವು ಜಾರಿಗೆ ತರಲು ಉದ್ಧೇಶಿಸಿದ್ದ ಇತ್ತೀಚೆಗಿನ ಸಿಎಎ, ಎನ್.ಆರ್.ಸಿ ವಿರುದ್ದದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಒಟ್ಟಿನಲ್ಲಿ ಜೀವಮಾನ ಪೂರ್ತಿ ಹೋರಾಟದ ಬದುಕನ್ನೇ ನಡೆಸಿ, ಅನ್ಯಾಯ, ಅಕ್ರಮ, ದೌರ್ಜನ್ಯ, ಕೋಮುವಾದಗಳನ್ನು ಎದುರಿಸುತ್ತಾ ಬಂದವರು. ದೊರೆಸ್ವಾಮಿಯವರ ಆಶಯ, ಆದರ್ಶಗಳು ಹೋರಾಟಗಾರರಿಗೆ ಸ್ಪೂರ್ತಿಯಾಗಲಿ ಎಂದು ಆಶಿಸೋಣ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ