ಹಿಂದೂತ್ವವಾದಿಗಳ ಸಟೆನುಡಿ, ವದಂತಿ, ದ್ವೇಷ ಇತ್ಯಾದಿಗಳ ಮೂಲ

ಹಿಂದೂತ್ವವಾದಿಗಳ ಸಟೆನುಡಿ, ವದಂತಿ, ದ್ವೇಷ ಇತ್ಯಾದಿಗಳ ಮೂಲ

ಹಿಂದೂತ್ವವಾದಿಗಳ ಸಟೆನುಡಿ, ವದಂತಿ, ದ್ವೇಷ ಇತ್ಯಾದಿಗಳ ಮೂಲ
ಹಿಂದೂತ್ವವಾದಿಗಳ ಸಟೆನುಡಿ, ವದಂತಿ, ದ್ವೇಷ ಇತ್ಯಾದಿಗಳ ಮೂಲ

ಮೊನ್ನೆ ಫೆಬ್ರವರಿ 7, 2018ರಂದು ರಾಷ್ಟ್ರಪತಿಯವರ ಉಪನ್ಯಾಸಕ್ಕೆ ಧನ್ಯವಾದ ಸಮರ್ಪಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಸುಮಾರು ಒಂದು ಗಂಟೆಗೂ ಮಿಕ್ಕಿ ಮಾತನಾಡಿದರು. ರಾಷ್ಟ್ರಪತಿಗಳ ಭಾಷಣಕ್ಕೆ ಉತ್ತರವಾಗಿ ಪ್ರಧಾನಿಗಳು ತಮ್ಮ ಸರಕಾರದ ಸಾಧನೆಗಳು, ದೇಶದ ಸರ್ವಾಂಗೀಣ ಪ್ರಗತಿ, ಮುಂದಿನ ಯೋಜನೆಗಳು ಮೊದಲಾದ ವಿಷಯಗಳ ಮೇಲೆ ಬೆಳಕು ಚೆಲ್ಲುವುದು ಲಾಗಾಯ್ತಿನಿಂದ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯ. ಇದು ಸಂಸತ್ತಿಗೆ ಸಲ್ಲಿಸುವ ಗೌರವ. ಸಂಸತ್ತು ಅಂದರೆ ಭಾರತದ ಸಮಸ್ತ ಪ್ರಜೆಗಳನ್ನು ಪ್ರತಿನಿಧಿಸುವ ಸಂಸ್ಥೆ. ಆದರೆ ಪ್ರಧಾನಿ ಮೋದಿ ಸಂಸತ್ತಿಗೆ ಅಗೌರವವಾಗುವ ರೀತಿ ಮಾತನಾಡುವ ಮೂಲಕ 130 ಕೋಟಿ ಭಾರತೀಯರಿಗೆ ಅವಮಾನ ಮಾಡಿದ್ದಾರೆ. 2014ರ ಮೇನಲ್ಲಿ ಸಂಸತ್ತಿಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ನಾಟಕೀಯವಾಗಿ ಮೆಟ್ಟಲಿಗೆ ಚುಂಬಿಸಿದ ಪ್ರಚಾರಪ್ರಿಯ ಮೋದಿ ಇಂದು ಅದೇ ಸಂಸತ್ತಿಗೆ ಅವಮಾನ ಮಾಡುವ ರೀತಿಯಲ್ಲಿ ನಡೆದುಕೊಂಡಿರುವುದು ವಾಸ್ತವದಲ್ಲಿ ಸಂಘ ಪರಿವಾರದ ಹಿಡನ್ ಮನಃಸ್ಥಿತಿಯ ಪ್ರತಿಬಿಂಬವೇ ಆಗಿದೆ.

ಸಂಘ ಪರಿವಾರ ಸಾರ್ವಜನಿಕವಾಗಿ ಏನೇ ಹೇಳಲಿ, ಅದಕ್ಕೆ ಸಂವಿಧಾನ, ಸಂಸತ್ತು, ಪ್ರಜಾತಂತ್ರ, ಒಕ್ಕೂಟ ವ್ಯವಸ್ಥೆ, ಜಾತ್ಯತೀತತೆ ಮುಂತಾದ ಜನಪರ ತತ್ವಗಳಲ್ಲಿ ನಂಬಿಕೆ ಇಲ್ಲ ಎನ್ನುವುದು ತೆರೆದ ರಹಸ್ಯ. ಅದಕ್ಕೆ ಬೇಕಿರುವುದು ಮತ್ತು ಅದು ಸ್ಥಾಪಿಸಲು ಹವಣಿಸುತ್ತಿರುವುದು ಏಕ ನಾಯಕನ ಸರ್ವಾಧಿಕಾರಿ ಆಳ್ವಿಕೆಯ ಹಿಂದೂ ರಾಷ್ಟ್ರ. ಫ್ಯಾಸಿಸ್ಟ್ ಮತ್ತು ನಾಜಿ ಪಕ್ಷಗಳಿಂದ ಎರವಲು ಪಡೆದು ರಚಿಸಲಾಗಿರುವ ಅದರ ಘೋಷವಾಕ್ಯವೇ  ಇದನ್ನು ಸ್ಪಷ್ಟಪಡಿಸುತ್ತದೆ: ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತದಿಂದ ಸ್ಪೂರ್ತಿ ಪಡೆಯುತ್ತಿರುವ ಆರೆಸ್ಸೆಸ್ ಈ ಮಹಾನ್ ದೇಶದ ಪ್ರತಿಯೊಂದು ಮೂಲೆಯಲ್ಲೂ ಹಿಂದೂತ್ವದ ಜ್ಯೋತಿಯನ್ನು ಬೆಳಗಿಸುತ್ತಿದೆ (ಎಂ.ಎಸ್.ಗೋಲ್ವಲ್ಕರ್, ಶ್ರೀ ಗುರೂಜಿ ಸಮಗ್ರ ದರ್ಶನ್, ನಾಗಪುರ, ಸಂಪುಟ 1, ಪುಟ 11). ಆರೆಸ್ಸೆಸ್ ಕಾರ್ಯಕರ್ತರಿಗೆ ಕಡ್ಡಾಯವಾಗಿರುವ ಪ್ರಾರ್ಥನೆ ಮತ್ತು ಪ್ರತಿಜ್ಞಾ ವಿಧಿಗಳಲ್ಲಿ ಅವರೆಲ್ಲರೂ ಹಿಂದೂ ರಾಷ್ಟ್ರ ನಿರ್ಮಾಣದ ಕೆಲಸಕ್ಕೆ ಬದ್ಧರಾಗಿರಬೇಕೆಂದು ಹೇಳಲಾಗಿದೆ. ಅವರ ಪ್ರಾರ್ಥನೆಯ ಕೆಲವು ವಾಕ್ಯಗಳು ಹೀಗಿವೆ: ….ಸರ್ವಶಕ್ತನಾದ ಪರಮಾತ್ಮನೇ ಹಿಂದೂ ರಾಷ್ಟ್ರದ ಅಖಂಡ ಭಾಗವಾದ ನಾವು ನಿನಗೆ ಭಕ್ತಿಯಿಂದ ವಂದಿಸುತ್ತೇವೆ/ ನಿನ್ನ ಧ್ಯೇಯ ಸಾಧನೆಗಾಗಿ ನಾವು ಟೊಂಕಕಟ್ಟಿ ನಿಂತಿದ್ದೇವೆ/ ಅದನ್ನು ಸಾಧಿಸುವುದಕ್ಕಾಗಿ ನಿನ್ನ ಆಶೀರ್ವಾದಗಳನ್ನು ನಮಗೆ ನೀಡು. (ಶಾಖಾ ದರ್ಶಿಕಾ, ಜೈಪುರ, 1997)

ಈಗ ಪ್ರಧಾನಿ ಮೋದಿಯವರ ಭಾಷಣಕ್ಕೆ ಮರಳೋಣ. ಇತ್ತೀಚೆಗೆ ಗುಜರಾತ್, ರಾಜಸ್ಥಾನ ಮೊದಲಾದ ಕಡೆಗಳಲ್ಲಿ ನಡೆದ ಚುನಾವಣೆಗಳ ನಂತರ ಸಂಘ ಪರಿವಾರದಲ್ಲಿ ಅಪಾಯದ ಕರೆಗಂಟೆ ಮೊಳಗಿದೆ. ಇದೇ ಪ್ರವೃತ್ತಿ ಮುಂದುವರಿದರೆ 2019ರ ಚುನಾವಣೆಗಳಲ್ಲಿ ಪಕ್ಷದ ಗತಿ ಏನು, 2025ರ ಒಳಗಾಗಿ ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಗುರಿಯ ಕತೆ ಏನು ಎಂಬ ಭಯ ಬಿಜೆಪಿಯನ್ನು ಕಾಡತೊಡಗಿದೆ. ಪ್ರಧಾನಿ ಮೋದಿ ಸಂಸತ್ತಿನ ಸಂಪ್ರದಾಯ ಧಿಕ್ಕರಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಮಟ್ಟಕ್ಕೆ ಇಳಿಯುವುದರ ಹಿಂದೆ ಇದೇ ಭಯ ಮತ್ತು ಅಭದ್ರತೆ ಕೆಲಸಮಾಡಿರುವುದರಲ್ಲಿ ಸಂಶಯವಿಲ್ಲ. ಸಂಸತ್ತನ್ನು ಈ ರೀತಿಯಾಗಿ ಚುನಾವಣಾ ಪ್ರಚಾರಕ್ಕೆ ಮತ್ತು ಪ್ರತಿಪಕ್ಷಗಳ ಹಾಲಿ ಮತ್ತು ಮಾಜಿ ನಾಯಕರ ಮೇಲೆ ಕೆಸರೆರಚುವುದಕ್ಕೆ ದುರ್ಬಳಕೆ ಮಾಡಿಕೊಂಡಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು. ಹಾಗಾದರೆ ನಾಲ್ಕು ರಸ್ತೆ ಕೂಡುವಲ್ಲಿ ಗಂಟಲು ಹರಿಯುವ ಹಾಗೆ ಬೊಬ್ಬಿರಿಯುವ ತುಂಡು ನಾಯಕರಿಗೂ ದೇಶದ ಪ್ರಧಾನಮಂತ್ರಿಗೂ ಏನು ವ್ಯತ್ಯಾಸವೆಂದು ಜನ ಪ್ರಶ್ನಿಸಿದರೆ ಅದರಲ್ಲಿ ಅಚ್ಚರಿಯೇನು ಬಂತು? ಹಿಂದಿನ ಯಾವ ಪ್ರಧಾನಿಯೂ ಸಂಸತ್ತಿನ ಘನತೆಯನ್ನು ಇಷ್ಟೊಂದು ಕೆಳಮಟ್ಟಕ್ಕೆ ಇಳಿಸಿರಲಿಲ್ಲ.

ಮೋದಿಯವರ ಭಾಷಣದಲ್ಲಿ ನೆಹರೂ, ಪಟೇಲ್, ದೇಶ ವಿಭಜನೆ, ಕಾಶ್ಮೀರ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಚಾರಿತ್ರಿಕವಾಗಿ ಹಲವು ತಪ್ಪುಗಳಿದ್ದವು. ಈಗಾಗಲೆ ಇದರ ಕಡೆಗೆ ಗಮನ ಸೆಳೆದಿರುವ ರಾಜಕೀಯ ವಿಶ್ಲೇಷಕರು ಮತ್ತು ಇತಿಹಾಸತಜ್ಞರು ಸತ್ಯಾಂಶಗಳನ್ನು ಜನತೆಯ ಮುಂದಿಟ್ಟಿದ್ದಾರೆ:

(1) ಪಟೇಲರು ದೇಶ ವಿಭಜನೆಯನ್ನು ವಿರೋಧಿಸಿರಲಿಲ್ಲ. (2) ಪಟೇಲರು ಕಾಶ್ಮೀರವನ್ನು ಭಾರತದ ಹೈದರಾಬಾದಿನೊಂದಿಗೆ ವಿನಿಮಯ ಮಾಡಿಕೊಳ್ಳುವ ಪ್ರಸ್ತಾಪವನ್ನು ಪಾಕಿಸ್ಥಾನದ ಮುಂದಿಟ್ಟಿದ್ದರು. (3) ಡಿಸೆಂಬರ್ 1939ರ ಹಿಂದೂ ಮಹಾಸಭಾ ಅಧಿವೇಶನದ ಸಂದರ್ಭದಲ್ಲಿ ದ್ವಿರಾಷ್ಟ್ರ ಕಲ್ಪನೆಗೆ ನಾಂದಿ ಹಾಕಿದಾತ ಸಾವರ್ಕರ್. ಒಂದು ವಿಧದಲ್ಲಿ ನೋಡಿದರೆ ಮೋದಿಯವರ ದಿಕ್ಕು ತಪ್ಪಿಸುವ ಮಾತುಗಳಲ್ಲಿ ಏನೇನೂ ವಿಶೇಷವಿಲ್ಲ. ಏಕೆಂದರೆ ಇದರ ಪ್ರಾರಂಭವನ್ನು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಕಾಲ ಮತ್ತು ಅದಕ್ಕೂ ಮುನ್ನ ಆರೆಸ್ಸೆಸ್ನ ಪದಾಧಿಕಾರಿಯಾಗಿದ್ದ ಕಾಲದಷ್ಟು ಹಿಂದೆಯೇ ಗುರುತಿಸಬಹುದು.

ಉದಾಹರಣೆಗೆ ಸ್ಥಳೀಯ ಚುನಾವಣೆಗಳ ಕಾಲದಲ್ಲಿ ಉಗ್ರರ ಗುಮ್ಮವನ್ನು ಸೃಷ್ಟಿಸಿರುವ ಸಂಗತಿ, ವೈಬ್ರೆಂಟ್ ಗುಜರಾತ್ ಶೃಂಗಸಭೆಗಳಲ್ಲಿ ಬಿಲಿಯಗಟ್ಟಲೆ ಡಾಲರು ಹೂಡಿಕೆಯಾಗಿದೆ ಎಂದು ಪ್ರಚಾರ ಮಾಡಿದ ನಂತರ ಅವುಗಳಲ್ಲಿ ಹೆಚ್ಚಿನಂಶ ಬರೀ ಪ್ರಸ್ತಾಪಗಳಾಗಿಯೇ ಉಳಿದು ಅಂತಿಮವಾಗಿ ಗುಜರಾತ್ ಮಾದರಿ ಠುಸ್ಸಾದ ವಿಚಾರ ಯಾರಿಗೆ ತಾನೆ ಗೊತ್ತಿಲ್ಲ? ಇರಲಿ. ಸದ್ಯಕ್ಕೆ ನಾವು 2014ರ ನಂತರದ ಹೇಳಿಕೆಗಳ ಮೇಲೆ ಕೇಂದ್ರೀಕರಿಸೋಣ. ಪಟ್ಟಿ ಸಾಕಷ್ಟು ದೊಡ್ಡದಿದ್ದು ಅವುಗಳ ಪೈಕಿ ಕೆಲವು ಪ್ರಮುಖ ನಿದರ್ಶನಗಳು ಇಲ್ಲಿವೆ:

ಮೋದಿಜಿ ದಿಲ್ಲಿ ವಿಶ್ವವಿದ್ಯಾನಿಲಯದ ಬಿ.ಎ. ಪದವೀಧರ ಮತ್ತು ಗುಜರಾತ್ ವಿಶ್ವವಿದ್ಯಾನಿಲಯದಿಂದ ಸಕಲ ಸಮಾಜ ವಿಜ್ಞಾನ ವಿಷಯದಲ್ಲಿ ಎಂ.ಎ. ಪಾಸ್ ಆಗಿದ್ದಾರೆ ಎಂಬ ಹೇಳಿಕೆ.

2015ರಲ್ಲಿ ನಾಗಾಲ್ಯಾಂಡಿನ NSCN (IM)  ಬಣದ ಜೊತೆ ಚಾರಿತ್ರಿಕ ಶಾಂತಿ ಒಪ್ಪಂದ ಆಗಿದೆ ಎಂದು ಘೋಷಿಸಲಾಯಿತು. ಆದರೆ ರಕ್ಷಣಾ ಮಂತ್ರಿಗಾಗಲಿ ಸಂಬಂಧಪಟ್ಟ ಯಾವನೇ ಮುಖ್ಯಮಂತ್ರಿಗಾಗಲಿ ಇದರ ಅರಿವಿಲ್ಲ ಮಾತ್ರವಲ್ಲ ಒಪ್ಪಂದದಲ್ಲಿ ಏನಿದೆ ಎಂದೂ ಗೊತ್ತಿಲ್ಲ. ಯುಪಿಎ ಸರ್ಕಾರದ ಯೋಜನೆಗಳ ಹಳೆ ಬಾಟಲಿಗೆ ಹೊಸಾ ಲೇಬಲ್ ಹಚ್ಚಿ ಅವು ಎನ್ಡಿಎ ಸರ್ಕಾರದ ವಿನೂತನ ಯೋಜನೆಗಳೆಂದು ಟಾಂಟಾಂ ಮಾಡಲಾಗುತ್ತಿದೆ.ಭಾರತೀಯ ಸೈನಿಕರು ಲಾಗಾಯ್ತಿನಿಂದ ಮಾಡುತ್ತಾ ಬಂದಿರುವ ಗಡಿ ಸಮೀಪದ ದಾಳಿ ಕಾರ್ಯಾಚರಣೆಗೆ ಕಳೆದ ವರ್ಷ ಸರ್ಜಿಕಲ್ ದಾಳಿ ಎಂಬ ವಿನೂತನ, ಆಕರ್ಷಕ ಹೆಸರು ಕೊಟ್ಟು ಅದು ಮೊದಲ ಬಾರಿಗೆ ಆದುದೆಂಬಂತೆ ಬಿಂಬಿಸಲಾಯಿತು. ಚೀನಾ ಜೊತೆಗಿನ 73 ದಿನಗಳ ದೋಕಾಲಾಂ ಬಿಕ್ಕಟ್ಟು ಬಗೆಹರಿದಿದೆ, ಚೀನೀಯರನ್ನು ಒದ್ದೋಡಿಸಲಾಗಿದೆ ಎಂದು 56 ಇಂಚುಗಳನ್ನುಬ್ಬಿಸಿ ದೇಶಾದ್ಯಂತ ಪ್ರಚಾರ ಮಾಡಲಾಯಿತು. ಆದರೆ ಒಪ್ಪಂದದ ವಿವರಗಳನ್ನು ಸಂಸತ್ತಿಗೆ ತಿಳಿಸಲಾಗಿಲ್ಲ. ಈಗ ನೋಡಿದರೆ ಚೀನೀಯರು ಎಲ್ಲೂ ಹೋಗಿಲ್ಲ, ಅಲ್ಲೇ ಇದ್ದಾರೆ; ಸಾವಿರಾರು ಚೀನೀ ಸೈನಿಕರು ಅಲ್ಲಿ ಬಗೆಬಗೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ ಎಂಬ ಸತ್ಯ ಬಟಾಬಯಲಾಗಿದೆ.

ಇತ್ತೀಚಿನ ಗುಜರಾತ್ ಚುನಾವಣೆಗಳ ವೇಳೆಯಂತೂ ಮೋದಿಯವರ ನಾಲಿಗೆಯಿಂದ ಸಭ್ಯತೆಯ ಎಲ್ಲೆ ಮೀರಿದ, ಹಿಂದೆಂದೂ ಕಂಡುಕೇಳಿರದ ಹಸಿಹಸಿ ಸಟೆನುಡಿಗಳು ಹೊರಹೊಮ್ಮಿವೆ. ಮಣಿ ಶಂಕರ್ ಐಯರ್ ಪಾಕಿಸ್ಥಾನಕ್ಕೆ ಹೋಗಿ ಮೋದಿಯನ್ನು ಕೊಲ್ಲುವ ಪಿತೂರಿ ಹೂಡಿದರು; ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ಸೇನಾ ಮುಖ್ಯಸ್ಥ ದೀಪಕ್ ಕಪೂರ್ ಮೊದಲಾದವರು ಐಯರ್ ಮನೆಯಲ್ಲಿ ಪಾಕಿಸ್ಥಾನದ ಮಾಜಿ ವಿದೇಶ ಮಂತ್ರಿಯನ್ನು ಭೇಟಿಯಾಗಿ ಅಹಮದ್ ಪಟೇಲ್ರನ್ನು ಗುಜರಾತಿನ ಮುಖ್ಯಮಂತ್ರಿಯಾಗಿಸುವ ಷಡ್ಯಂತ್ರ ರೂಪಿಸಿದರು ಎಂದು ಆರೋಪಿಸುವುದು ಪ್ರಧಾನಿಯ ಸ್ಥಾನದಲ್ಲಿರುವವರು ಆಡಬಹುದಾದ ಮಾತುಗಳೇ?

ನೋಟು ರದ್ದತಿಯಿಂದ ಖೋಟಾ ನೋಟು, ಭಯೋತ್ಪಾದನೆ, ಕಪ್ಪುಹಣಗಳ ಹಾವಳಿ ಬಹುತೇಕ ಮಟ್ಟಿಗೆ ಕೊನೆಗೊಳ್ಳುತ್ತದೆ ಎಂಬ ಮಾತು ಇನ್ನೂ ಗಾಳಿಯಲ್ಲೇ ತೇಲಾಡುತ್ತಿದೆ. 15 ತಿಂಗಳುಗಳೇ ಉರುಳಿದರೂ ಹಳೆ ನೋಟುಗಳ ಲೆಕ್ಕ ಇನ್ನೂ ಮುಗಿದಿಲ್ಲ; ಉಗ್ರರ ಹಾವಳಿ ಮೊದಲಿಗಿಂತ ಹೆಚ್ಚೇ ಆಗಿದೆ. ಸರಳ ಮತ್ತು ಉತ್ತಮ ಎಂದು ಘೋಷಿಸಲಾದ ಜಿಎಸ್ಟಿ ಭಾರಿ ಕ್ಲಿಷ್ಟಕರವಾಗಿ ಪರಿಣಮಿಸಿದೆ.

ರೂ 15 ಲಕ್ಷ ಪ್ರಜೆಯ ಕಿಸೆಗೆ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಇವೇ ಮೊದಲಾದ ಚುನಾವಣಾ ಕಾಲದ ಪೊಳ್ಳು ಭರವಸೆಗಳನ್ನು ಜನ ಇನ್ನೂ ಮರೆತಿಲ್ಲ.

ಅಷ್ಟಕ್ಕೂ ನೆಹರೂ ಮೇಲೆ ಯಾಕಿಷ್ಟು ಕೋಪ?
ಮೋದಿಯವರ ಮಾತುಗಳನ್ನು ಕೇಳಿದವರಿಗೆ ಆತನ ಮನದಾಳದಲ್ಲಿ ತುಂಬಿರುವ ರೋಷ, ದ್ವೇಷ ಮತ್ತು ಪ್ರತೀಕಾರದ ಭಾವನೆಗಳ ಧಗಧಗಿಸುವ ಜ್ವಾಲೆಯ ಬಿಸಿ ತಟ್ಟದೆ ಇರದು. ಅದರಲ್ಲೂ ಭಾರತದ ಪ್ರಥಮ ಪ್ರಧಾನಿ ಜವಹರ್ಲಾಲ್ ನೆಹರೂ ಮೇಲಿನ ವಿಶೇಷವಾದ ಸಿಟ್ಟು ಕೇವಲ ಮೋದಿಗಷ್ಟೆ ಸೀಮಿತವಾಗಿಲ್ಲ, ಅದು ಇಡೀ ಪರಿವಾರಕ್ಕೆ ವ್ಯಾಪಿಸುತ್ತದೆ. ಗಾಂಧಿ ಹತ್ಯೆಯ ಬಳಿಕ ಗೃಹಸಚಿವ ಪಟೇಲರ ಸಲಹೆಯ ಮೇರೆಗೆ ಆರೆಸ್ಸೆಸ್ಅನ್ನು ನಿಷೇಧಿಸಿದರು, 1950ರಲ್ಲಿ ಹಿಂದೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದ, ಭಾರತದ ಆದರ್ಶ ಜಾತ್ಯತೀತತೆ ಕುರಿತು ಬಹಳ ಸ್ಪಷ್ಟವಾದ ನಿಲುವನ್ನು ಹೊಂದಿದ್ದ, ಕೋಮುವಾದವನ್ನು ತೀವ್ರವಾಗಿ ವಿರೋಧಿಸಿದ್ದ ನೆಹರೂ ಬಗ್ಗೆ ಸಂಘ ಪರಿವಾರಕ್ಕಿರುವ ದ್ವೇಷ ಅಷ್ಟಿಷ್ಟಲ್ಲ.

ಕೋಮುವಾದದ ಗಂಡಾಂತರವನ್ನು ಅಂದೇ ಮನಗಂಡಿದ್ದ ನೆಹರೂ, ಭಾರತಕ್ಕೆ ಅಪಾಯವಿರುವುದು ಕಮ್ಯೂನಿಸಂನಿಂದ ಅಲ್ಲ, ಬಲ ಪಂಥೀಯ ಕೋಮುವಾದದಿಂದ ಎಂದು ಭಾರತೀಯ ವಿದೇಶ ಸೇವಾ (ಐಎಫ್ಎಸ್) ವಿಭಾಗದ ಅಧಿಕಾರಿಗಳಿಗೆ ಹೇಳಿದ್ದರು (Y.D. Gundevia, Outside the Archives, Sangam Books 1984, p. 210). ನೆಹರೂಗೆ ಹಿಂದೂ ಕೋಮುವಾದದ ವಿಶ್ವಾಸಘಾತುಕತನದ ಬಗ್ಗೆ ಹೆಚ್ಚುಕಮ್ಮಿ ಭವಿಷ್ಯಸೂಚಕ ಎನ್ನಬಹುದಾದ, ಶೀಘ್ರಗ್ರಾಹಿ ಒಳನೋಟವಿತ್ತು. ಇದು ನೆಹರೂ ಭಾರತಕ್ಕೆ ಸಲ್ಲಿಸಿರುವ ಅತ್ಯಂತ ಮಹತ್ತರ ಕೊಡುಗೆಗಳಲ್ಲೊಂದು. ಹಿಂದೂ ಕೋಮುವಾದದ ರೋಗ ತನ್ನ ಪಕ್ಷಕ್ಕೂ ತಗಲಿದುದನ್ನು ಕಂಡ ನೆಹರೂ ಸಪ್ಟಂಬರ್ 6, 1951ರಂದು ಸಾರ್ವಜನಿಕ ಸಭೆಯೊಂದರಲ್ಲಿ ತನ್ನ ಅಸಮಾಧಾನವನ್ನು ಹೊರಹಾಕಿದ್ದರು.

ಅದೇ ವೇಳೆ ಮುಸ್ಲಿಂ ಕೋಮುವಾದವೂ ಆತನ ಗಮನದಲ್ಲಿತ್ತು. ಅಲ್ಪಸಂಖ್ಯಾತರ ಕೋಮುವಾದಕ್ಕಿಂತ ಬಹುಸಂಖ್ಯಾತರ ಕೋಮುವಾದವೇ ಅತಿ ಹೆಚ್ಚು ಅಪಾಯಕಾರಿ ಎಂದು ಮೇ 11, 1958ರಂದು ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಹೇಳಿದ್ದರು. ಜನವರಿ 5, 1961ರಂದು ಕೋಮುವಾದ ನಮ್ಮ ಸಮಾಜದ ಒಂದು ಭಾಗವಾಗಿದೆ ಎಂದ ನೆಹರೂ, ಹಿಂದೂ ಕೋಮುವಾದ ಯಾಕೆ ಹೆಚ್ಚು ಅಪಾಯಕಾರಿ ಎನ್ನುವುದನ್ನು ವಿವರಿಸಿದರು: ಅಲ್ಪಸಂಖ್ಯಾತ ಸಮುದಾಯಗಳು ಕೋಮುವಾದಿಗಳಾದಾಗ ಅದನ್ನು ನೋಡಲು ಸಾಧ್ಯವಿದೆ, ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಬಹುಸಂಖ್ಯಾತ ಸಮುದಾಯವೊಂದರ ಕೋಮುವಾದವು ರಾಷ್ಟ್ರೀಯವಾದವೆಂದು ಪರಿಗಣಿಸಲ್ಪಡುವ ಪ್ರವೃತ್ತಿ ಇರುತ್ತದೆ. ನೆಹರೂರ ಮತ್ತೊಂದು ಹೇಳಿಕೆ ಆತನ ಕಳಕಳಿಯನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ: ನಾನು ಸರಕಾರದ ಮುಖ್ಯಸ್ಥನಾಗಿರುವಾಗ ಮಾತ್ರವಲ್ಲ ಸರಕಾರದಿಂದ ಹೊರಗಿರುವಾಗಲೂ, ಯಾರೊಬ್ಬನಾದರೂ ಧರ್ಮದ ಹೆಸರಿನಲ್ಲಿ ಮತ್ತೊಬ್ಬನ ಮೇಲೆ ಆಕ್ರಮಣ ನಡೆಸಿದರೆ, ನನ್ನ ಕೊನೆಯುಸಿರಿನ ತನಕವೂ ಆತನ ವಿರುದ್ಧ ಹೋರಾಡುವೆ. (RSS and BJP – A Division of Labour, ಎ.ಜಿ.ನೂರಾನಿ)

ಸಂಘ ಪರಿವಾರದ ಈ ರೋಷ ಹಾಗೂ ದ್ವೇಷ ಅವರ ಆದಿ ಗುರು ಸಾವರ್ಕರ್‌ನಿಂದಲೆ ಪ್ರಾರಂಭವಾಗಿದೆ. 1940ರಲ್ಲಿ ಹಿಂದೂ ಮಹಾಸಭಾದ ಮದುರೆಯ ಅಧಿವೇಶನದ ಅಧ್ಯಕ್ಷನಾಗಿದ್ದ ಸಾವರ್ಕರ್, ಭಾರತದಲ್ಲಿ ಫ್ಯಾಶಿಸ್ಟ್ ಮತ್ತು ನಾಜಿ ಸಿದ್ಧಾಂತಗಳನ್ನು ಅಳವಡಿಸುವುದಕ್ಕೆ ಪ್ರತಿರೋಧ ಒಡ್ಡಿದ್ದಕ್ಕಾಗಿ ನೆಹರೂರನ್ನು ತರಾಟೆಗೆ ತೆಗೆದುಕೊಂಡಿದ್ದ. ಆತ ನಾವು ಸರಕಾರದ ಒಂದು ನಿರ್ದಿಷ್ಟ ಸ್ವರೂಪ ಅಥವಾ ಕಾರ್ಯನೀತಿಯನ್ನು ಕೇವಲ ಪಾಂಡಿತ್ಯದ ಆಕರ್ಷಣೆಯಿಂದ ಮೆಚ್ಚುತ್ತಿರುವಾಗ ಆ ಕಾರಣಕ್ಕಾಗಿ ಜರ್ಮನಿ, ಜಪಾನ್ ಅಥವಾ ರಷ್ಯಾ ಅಥವಾ ಇಟೆಲಿ ಕೂಡ ಅದನ್ನೇ ಆಯ್ಕೆ ಮಾಡಿಕೊಳ್ಳಬೇಕೆಂದು ಅವರಿಗೆ ಆದೇಶಿಸಲು ನಾವು ಯಾರು?  ಖಂಡಿತವಾಗಿಯೂ ಜರ್ಮನಿಗೆ ಯಾವುದು ಅತ್ಯುತ್ತಮವಾಗಿ ಸರಿಹೋಗುತ್ತದೆಂದು ಪಂಡಿತ್ ನೆಹರೂಗಿಂತಲೂ ಹೆಚ್ಚು ಚೆನ್ನಾಗಿ ಬಲ್ಲವರು ಹಿಟ್ಲರ್. ನಾಜಿ ಅಥವಾ ಫ್ಯಾಸಿಸ್ಟ್ ಮಂತ್ರದಂಡ ಮುಟ್ಟಿದ ಪರಿಣಾಮವಾಗಿ ಜರ್ಮನಿ ಅಥವಾ ಇಟೆಲಿ ಇಷ್ಟೊಂದು ಅದ್ಭುತವಾಗಿ ಸುಸ್ಥಿತಿಗೆ ಮರಳಿ ಹಿಂದೆಂದೂ ಇಲ್ಲದ ರೀತಿಯಲ್ಲಿ ಇಷ್ಟೊಂದು ಬಲಶಾಲಿಯಾಗಿ ಬೆಳೆದಿರುವ ಸತ್ಯವೇ ಆ ರಾಜಕೀಯ ಸಿದ್ಧಾಂತಗಳು ಅವುಗಳ ಆರೋಗ್ಯಕ್ಕೆ ಅವಶ್ಯವಿದ್ದ ಅತ್ಯಂತ ಹಿತಕರವಾದ ಶಕ್ತಿವರ್ಧಕಗಳೆಂಬುದನ್ನು ಸಾಬಿತುಪಡಿಸುತ್ತದೆ ಎಂದು ಹೇಳಿದ (Know the RSS; ಶಂಶುಲ್ ಇಸ್ಲಾಮ್).

ಸಟೆನುಡಿ, ವದಂತಿ, ದ್ವೇಷ ಇತ್ಯಾದಿಗಳ ಮೂಲಅಸತ್ಯ ಹಾಗೂ ವದಂತಿಗಳನ್ನು ಪ್ರಚಾರ ಮಾಡಿ ವಿವಾದಗಳನ್ನು ಸೃಷ್ಟಿಸುವುದು, ಸಮಾಜದಲ್ಲಿ ದ್ವೇಷದ ವಿಷಬೀಜ ಬಿತ್ತುವುದು ಸಂಘ ಪರಿವಾರದ ನಿತ್ಯವಿಧಿಯಾಗಿದೆ. ಯಾರು ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತಾರೆ ಅರ್ಥಾತ್ ಯಾರ ಭಾಷಣ ಅತ್ಯಧಿಕವಾಗಿ ಬೆಂಕಿ ಉಗುಳುತ್ತದೆ ಎನ್ನುವುದರ ಮೇಲೆ ನಾಯಕರ ಸಾಮರ್ಥ್ಯವನ್ನು ಗುರುತಿಸಿ, ನಾಗಪುರದಲ್ಲಿ ವಿಶೇಷ ತರಬೇತಿ ಕೊಡಿಸಿ, ಅಂಥವರನ್ನು ಸ್ಟಾರ್ ಪ್ರಚಾರಕರನ್ನಾಗಿ ಕಣಕ್ಕಿಳಿಸಲಾಗುತ್ತದೆ. ಮೊದಲ ಎರಡು ಸ್ಥಾನಗಳಲ್ಲಿರುವ ಜೋಡಿ ಯಾರೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! ವಾಸ್ತವವಾಗಿ ಇದರಲ್ಲಿ ಅಚ್ಚರಿಯಾಗುವಂಥದ್ದೇನೂ ಇಲ್ಲ ಏಕೆಂದರೆ ಇದೊಂದು ಹಳೆ ಕೋಮುವಾದಿ ತಂತ್ರವಾಗಿದ್ದು ಇದಕ್ಕೊಂದು ಸುದೀರ್ಘ ಪರಂಪರೆಯೇ ಇದೆ. ಅದನ್ನು ಹುಡುಕುತ್ತಾ ಹೊರಟರೆ ತಲಪುವುದು ಅದೇ ಕಾಂಗ್ರೆಸ್ ದ್ವೇಷಿ, ನೆಹರೂ ದ್ವೇಷಿ, ಅಲ್ಪಸಂಖ್ಯಾತ ದ್ವೇಷಿ, ಹಿಂದೂತ್ವ ಸಿದ್ಧಾಂತದ ಜನಕ ಹಾಗೂ ಕೋಮುವಾದಿಗಳ ಸ್ಟಾರ್ ಗುರುಗಳಲ್ಲೊಬ್ಬನಾದ ತಥಾಕಥಿತ ವೀರ ಸಾವರ್ಕರ್‌ಗೆ. ಸಂಘಿಗಳಿಗೆ ಸುಳ್ಳುಗಳನ್ನು ಪೋಣಿಸುವ ಕಲೆಯನ್ನು ಹೇಳಿಕೊಟ್ಟಾತನೇ ಸಾವರ್ಕರ್. ಗಾಂಧಿ, ನೆಹರೂ ಎಂದೂ ಹೇಳಿರದ ವಿಚಾರಗಳನ್ನು ಅವರೇ ಹೇಳಿರುವುದಾಗಿ ಪ್ರಚಾರ ಮಾಡುವ ಮೂಲಕ ಈ ಪರಂಪರೆಗೆ ನಾಂದಿ ಹಾಕಿದವನೇ ಸಾವರ್ಕರ್. ಸಾವರ್ಕರ್‌ನ ಮರಣಾನಂತರದಲ್ಲಿ ಆತನ ಶಿಷ್ಯಗಣಗಳು ಸಾವರ್ಕರ್ ಮಾತ್ರವಲ್ಲ ಗೋಲ್ವಲ್ಕರ್, ಹೆಡ್ಗೇವಾರ್ ಮೊದಲಾದ ಮಿಕ್ಕೆಲ್ಲಾ ಸಂಘಿ ಗುರುಗಳು ಹಾಕಿಕೊಟ್ಟ  ಮಾರ್ಗವನ್ನು ಚಾಚೂತಪ್ಪದೆ ಅನುಸರಿಸುತ್ತಾ ಬಂದಿದ್ದಾರೆ. ದ್ವೇಷ ಮತ್ತು ಸೇಡಿನ ಮನೋಭಾವನೆಯಿಂದ ಕುದಿಯುತ್ತಿದ್ದ ಸಾವರ್ಕರ್ನ ಅಪ್ಪಟ ಸುಳ್ಳು

ಹೇಳಿಕೆಗಳ ನಾಲ್ಕು ಉದಾಹರಣೆಗಳು ಈ ಕೆಳಗಿನಂತಿವೆ:
ಹಿಂದುಸ್ಥಾನಿ ಭಾರತದ ರಾಷ್ಟ್ರಭಾಷೆಯಾಗಲು ಅತ್ಯಂತ ಸೂಕ್ತ ಎಂದಷ್ಟೆ ಹೇಳುವ ಮೌಲಾನಾ ಅಬುಲ್ ಕಲಾಂ ಆಝಾದ್, ಹಿಂದುಸ್ಥಾನಿ ಉರ್ದು ಭಾಷೆಗೆ ಸಮನಾದುದು ಎಂದು ಖಾತ್ರಿ ನೀಡುತ್ತಾರೆ. ಆದರೆ ಪಂಡಿತ್ ನೆಹರೂರ ಪ್ರಸ್ತಾಪ ಆಝಾದರ ಪ್ರಸ್ತಾಪವನ್ನು ಹಿಂದಿಕ್ಕಿ ಅದೆಷ್ಟೋ ಮುಂದೆ ಸಾಗುತ್ತದೆ. ಪಂಡಿತ್ ನೆಹರೂರ ಅಭಿಪ್ರಾಯದಲ್ಲಿ ಅಲಿಗಢ ಪಂಥದ ಅಥವಾ ಒಸ್ಮಾನಿಯ ವಿಶ್ವವಿದ್ಯಾನಿಲಯ ಪಂಥದ ತೀವ್ರ ಅರಬ್ಬೀಕರಣಗೊಂಡ ಉರ್ದುವೇ ಸುಮಾರು 28 ಕೋಟಿ ಹಿಂದೂಗಳನ್ನು ಒಳಗೊಂಡಿರುವ ಭಾರತದ ರಾಷ್ಟ್ರಭಾಷೆಯಾಗಲು ನಿಸ್ಸಂದೇಹವಾಗಿಯೂ ಅತ್ಯಂತ ಸೂಕ್ತ. (ಹಿಂದೂ ರಾಷ್ಟ್ರ ದರ್ಶನ್, ಪುಟ 110)

ಒಬ್ಬ ಮುಸ್ಲಿಮನಿಗೆ ಮೂರು ವೋಟುಗಳಿರಬೇಕು ಎಂಬ ಮುಸ್ಲಿಂ ಲೀಗ್‌ನ ಬೇಡಿಕೆ ಮಿತಿಮೀರಿ ಕೋಮುವಾದಿಯಾಗಿದೆ. ಅದೇ ವೇಳೆ ಹಿಂದೂಗಳು ಈ ಬೇಡಿಕೆಯನ್ನು ಮನ್ನಿಸಬೇಕು ಮತ್ತು ಮೂವರು ಹಿಂದೂಗಳಿಗೆ ಒಂದು ವೋಟಿನ ಪ್ರಸ್ತಾಪಕ್ಕೆ ಒಪ್ಪಬೇಕೆಂದು ಕರೆಕೊಡುವ ಕಾಂಗ್ರೆಸ್ ಹೇಡಿತನದ ಕೋಮುವಾದಿಯಾಗಿದೆ! (ಹಿಂ.ರಾ.ದ., ಪುಟ 121)

ಅಮೀರ ದೆಹಲಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದಲ್ಲಿ ನಾವು ಸ್ವರಾಜ್ಯ ಗಳಿಸುತ್ತಿದ್ದೆವು ಎಂದು ಸಮರ್ಥಿಸುವ ಈ ಹಿಂದೂ ಮುಖಂಡರು ಆಲಿ ಸಹೋದರರ ಜೋಡಿ, ‘ರಾಷ್ಟ್ರೀಯ’ ಮೌಲಾನಾ ಆಝಾದ್ ಮತ್ತು ಇತರ ಮುಸ್ಲಿಂ ಮುಖಂಡರನ್ನು ಕೂಡಾ ಮೀರಿಸುವುದನ್ನು ನೋಡುವಾಗ ಅತ್ಯಾಶ್ಚರ್ಯವಾಗುತ್ತದೆ – ಏಕೆಂದರೆ ಖಂಡಿತವಾಗಿಯೂ ಅವರು ಅಫಘಾನಿಗಳ ಆಳ್ವಿಕೆಯೇ ಸ್ವರಾಜ್ಯ ಎಂದು ಹೇಳಿದರು. (ಹಿಂ.ರಾ.ದ., ಪುಟ 127) ಪ್ರಥಮ ಮಹಾಯುದ್ಧದ ಕಾಲದಲ್ಲಿ ಅಮಾನುಲ್ಲಾ ಖಾನ್ ಎಂಬ ಮಾಜಿ ಅಮೀರ ಭಾರತದಲ್ಲಿ ಇಸ್ಲಾಮಿನ ದೈವನಿಯಾಮಕ ವಿಮೋಚಕನ ಪಾತ್ರವನ್ನು ವಹಿಸಲಿದ್ದರು. ಮಹಾನ್ ‘ರಾಷ್ಟ್ರೀಯವಾದಿ’ಗಳಾದ ಆಲಿ ಸಹೋದರರ ಜೋಡಿ ಗಾಂಧೀಜಿಯ ವಿಶ್ವಾಸಘಾತುಕ ಮೌನಸಮ್ಮತಿಯೊಂದಿಗೆ ಅಮಾನುಲ್ಲಾ ಖಾನ್ರನ್ನು ದೆಹಲಿಗೆ ಕರೆತಂದು ಭಾರತದ ಭಾವೀ ಅಭಿಷಿಕ್ತ ಚಕ್ರವರ್ತಿಯಾಗಿಸುವ ಸಂಚನ್ನು ರೂಪಿಸಿತ್ತು. (ಹಿಂ.ರಾ.ದ., ಪುಟ 237)ಸರ್ದಾರ್ ಪಟೇಲರ ನಿಷ್ಠುರ ಮಾತುಗಳು ಇಂದಿಗೂ ಪ್ರಸ್ತುತ ನೆಹರೂ ಸಂಪುಟದಲ್ಲಿ ಗೃಹಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರು ಆರೆಸ್ಸೆಸ್ ಬಗ್ಗೆ ಮೃದು ಧೋರಣೆ ತಳೆದಿದ್ದರೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗಲೂ ಮೋದಿಜಿ ಸೇರಿದಂತೆ ಇಡೀ ಸಂಘ ಪರಿವಾರಕ್ಕೆ ಪಟೇಲರು ತುಂಬಾ ಅಚ್ಚುಮೆಚ್ಚಿನ ವ್ಯಕ್ತಿ.

ಆದರೆ ಗಾಂಧೀಜಿ ಹತ್ಯೆಯಾದ ಸಂದರ್ಭದಲ್ಲಿ ಆರೆಸ್ಸೆಸ್‌ನ ರಕ್ಷಣೆಗೆ ನಿಲ್ಲುವುದು ಕಷ್ಟಕರ ಎಂಬ ಸನ್ನಿವೇಶ ಎದುರಾದಾಗ ಪಟೇಲರು ಸಪ್ಟೆಂಬರ್ 11, 1948ರಂದು ಅಂದಿನ ಸರಸಂಘಚಾಲಕ ಗೋಲ್ವಲ್ಕರ್‌ಗೆ ಹೀಗೆ ಬರೆದಿದ್ದರು: ಹಿಂದೂಗಳನ್ನು ಒಂದುಗೂಡಿಸಿ ಅವರಿಗೆ ಸಹಾಯ ಮಾಡುವುದು ಒಂದು ವಿಷಯ, ಆದರೆ ಅವರ ಪಡಿಪಾಟಲುಗಳಿಗಾಗಿ ನಿರಪರಾಧಿ, ಅಸಹಾಯಕ ಸ್ತ್ರೀ, ಪುರುಷರು ಮತ್ತು ಮಕ್ಕಳ ಮೇಲೆ ಸೇಡು ತೀರಿಸಲು ಹೊರಡುವುದು ಬೇರೆಯೇ ವಿಷಯ…… ಇದಲ್ಲದೆ ಅವರು ವ್ಯಕ್ತಿತ್ವ, ಸಭ್ಯತೆ ಅಥವಾ ನಯವಿನಯಗಳ ಪರಿಗಣನೆಯೇ ಇಲ್ಲದೆ ಕಾಂಗ್ರೆಸ್ಗೆ ತೋರಿಸುತ್ತಿರುವ ಪ್ರತಿರೋಧ, ಅದು ಕೂಡ ಅಷ್ಟೊಂದು ವಿಷಪೂರಿತ ಪ್ರತಿರೋಧ, ಜನರಲ್ಲಿ ಒಂದು ರೀತಿಯ ಅಶಾಂತಿ ಸೃಷ್ಟಿಸಿದೆ. ಅವರ ಭಾಷಣಗಳೆಲ್ಲವೂ ಕೋಮು ವಿಷದಿಂದ ತುಂಬಿವೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ