ಹಿಜರಿ ಹೊಸ ವರ್ಷಾರಂಭ: ಉಡುಪಿ ರೇಂಜ್ ಮಟ್ಟದ ವಿಶೇಷ ಅಸೆಂಬ್ಲಿ

ಉಡುಪಿ: ಪ್ರತಿಷ್ಠಿತ ಸಮಸ್ತ ಕೇರಳ ಜಂಇಯತುಲ್ ಮುಅಲ್ಲಿಮೀನ್ ಉಡುಪಿ ರೇಂಜ್ ಇದರ ಆಶ್ರಯದಲ್ಲಿ ಹಿಜರಿ ಹೊಸ ವರ್ಷಾರಂಭದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಉಡುಪಿ ರೇಂಜ್ ವ್ಯಾಪ್ತಿಯ ಮದ್ರಸ ಅಧ್ಯಾಪಕರು ಹಾಗೂ ಮದ್ರಸದ ವಿಧ್ಯಾರ್ಥಿ ಸಂಘಟನೆಯಾದ ಎಸ್.ಕೆ.ಎಸ್.ಬಿ.ವಿ. ನಾಯಕರ ವಿಶೇಷ ಅಸೆಂಬ್ಲಿಯು ನಿಟ್ಟೆ ಮದ್ರಸ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸಮಸ್ತ ಕೇರಳ ಜಂ-ಇಯತುಲ್ ಮುಅಲ್ಲಿಮೀನ್ ತರಬೇತುದಾರರಾದ ಮುಫತ್ತಿಷ್ ಉಮರ್ ದಾರಿಮಿ ಸಾಲ್ಮರ ಮಾತನಾಡಿ ಭೂಮಿಯಲ್ಲಿ ಸೃಷ್ಟಿಕರ್ತನ ಪ್ರಾತಿನಿಧ್ಯವನ್ನು ನಿರ್ವಹಿಸುವ ಮನುಷ್ಯರು ತಮ್ಮ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಸತ್ಯ ಮತ್ತು ನ್ಯಾಯದ ಸಂಸ್ಥಾಪಿಸಿ ಅದನ್ನು ಎಲ್ಲೆಡೆಗೆ ವಿಸ್ತರಿಸುವುದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ದರಾಗಬೇಕೆಂಬುವುದೇ ಹಿಜ್ರಾದ ಸಂದೇಶ ಎಂದು ಹೇಳಿದರು.
ಪ್ರವಾದಿ (ಸ,ಅ) ತನ್ನ ಜನ್ಮನಾಡು ಮತ್ತು ಕುಟುಂಬಿಕರಿಗೆ ಭಾವಪೂರ್ಣ ವಿದಾಯ ಹೇಳಿ ಮಕ್ಕಾದಿಂದ ಉತ್ತರಕ್ಕೆ ನಾನೂರ ಐವತ್ತು ಕಿಲೋಮೀಟರ್ ದೂರವಿರುವ ಮದೀನಾಕ್ಕೆ ಹಿಜರಾ ಹೊರಟಾಗಿಂದಲೇ ಹಿಜರಿ ಶಕೆ ಆರಂಭವಾಯಿತು. ಶತ್ರುಗಳ ಕಣ್ಣ ಮುಂದೆಯೇ ಯಶಸ್ವಿಯಾಗಿ ತನ್ನ ಉದ್ಧೇಶಿತ ಗುರಿ ತಲುಪಿದ ಪ್ರವಾದಿಯವರ ದೀರ್ಘ ದೃಷ್ಟಿ ಯೋಜನೆಗಳು ಮತ್ತು ಉಪಾಯಗಳು ಸಹಚರರ ಬೋಧನಾ ಜೀವನದಲ್ಲಿ ಒಂದು ತಿರುವು ನೀಡಿತು. ಅಂತೆಯೇ ವಿಸ್ವಾಸಿಯ ಜೀವನದಲ್ಲಿಯೂ ಸಹ ಪ್ರತೀ ವರ್ಷದ ಆರಂಭದಲ್ಲಿ ಹೊಸ ಚೈತನ್ಯದ ಹುರುಪುಗಳು ಪುಳಕಿತವಾಗಬೇಕು ಹಾಗೂ ಪ್ರಸಕ್ತ ಕಾಲದಲ್ಲಿ ನಾವು ಅನುಭವಿಸುತ್ತಿರುವ ಸಮಸ್ಯೆಗಳಿಂದ ಹೊರ ಬರಲು ನಾಗರಿಕ ವಲಯದಲ್ಲಿ ಐಕ್ಯತೆಯನ್ನು ಗುರಿಯಾಗಿಸಿಕೊಳ್ಳಬೇಕು. ಹಲವು ರೀತಿಯ ಚಿಂತನೆಗಳು, ಧೋರಣೆಗಳು, ಸಿದ್ಧಾಂತಗಳು, ನವೋತ್ಥಾನದ ವಿವಿಧೋನ್ಮುಖ ಯೋಜನೆಗಳು ಮತ್ತು ಚಂಚಲತೆಗಳಿಲ್ಲದ ನಿಲುವುಗಳನ್ನು ರೂಪಿಸಿಕೊಂಡು ಇಹಲೋಕ ಸಂಕುಚಿತತೆಯಿಂದ ಇಹಪರ ಲೋಕದ ವಿಶಾಲತೆಯೆಡೆಗೆ ಮುನ್ನುಗ್ಗಲು ನಮಗೆ ಸಾಧ್ಯವಾಗಬೇಕು ಎಂದು ಅವರು ಭಾವುಕರಾಗಿ ಹೇಳಿದರು.
ನಿಟ್ಟೆ ಮಸೀದಿ ಖತೀಬರಾದ ಫಾರೂಖ್ ಹನೀಫಿ ನಿಟ್ಟೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬೈಲೂರು ಖತೀಬರಾದ ನಿಜಾಮುದ್ದೀನ್ ಬಾಖವಿ, ಪಲಿಮಾರು ಖತೀಬರಾದ ರಿಯಾಝ್ ಫೈಝಿ ಮಲಾರ್ ಉಪಸ್ಥಿತಿಯಿದ್ದರು. ಸಭೆಯನ್ನು ಉಡುಪಿ ರೇಂಜ್ SKJM ಕಾರ್ಯದರ್ಶಿ ಹಂಝ ಫೈಝಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ