ಸುಳ್ಯ ಬಿಜೆಪಿ ಅಧ್ಯಕ್ಷ ಸೇರಿದಂತೆ 14 ಮಂದಿಗೆ ಜೈಲು ಶಿಕ್ಷೆ

ಸುಳ್ಯ ಬಿಜೆಪಿ ಅಧ್ಯಕ್ಷ ಸೇರಿದಂತೆ 14 ಮಂದಿಗೆ ಜೈಲು ಶಿಕ್ಷೆ

ಸುಳ್ಯ: ಬಿಜೆಪಿ ಸುಳ್ಯ ತಾಲೂಕು ಅಧ್ಯಕ್ಷರೂ, ಜಿ.ಪಂ.ಸದಸ್ಯರೂ ಆದ ಹರೀಶ್ ಕಂಜಿಪಿಲಿ ಮತ್ತು 14 ಮಂದಿಗೆ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ.

      2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಂದಿನ ಜಿ.ಪಂ. ಸದಸ್ಯೆ ಸರಸ್ವತಿ ಕಾಮತ್ ಮೇಲೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ ಪ್ರಕರಣದ ಬಗ್ಗೆ ಜೆ.ಎಂ.ಎಫ್.ಸಿ. ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

      ಸುಳ್ಯ ಜೆ.ಎಂ.ಎಫ್.ಸಿ.ಯ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ. ಆರೋಪಿಗಳ ವಿರುದ್ಧದ ಪ್ರಕರಣ ಸೆ.149, 147/149, 341,506, 504, 323, 354 ಸೆಕ್ಷನ್ ಅಡಿಯಲ್ಲಿ ಆರೋಪ ಸಾಬೀತಾಗಿದ್ದು, 14 ಮಂದಿಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ 1. 12 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಲಾಗಿದೆ.

      2014ರ ಲೋಕಸಭಾ ಚುನಾವಣೆಯ ಸಂದರ್ಭ ಅಂದಿನ ಜಿಪಂ ಸದಸ್ಯೆಯಾಗಿದ್ದ ಸರಸ್ವತಿ ಕಾಮತ್ ಅವರು ನೆಲ್ಲೂರು ಕೆಮ್ರಾಜೆಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ಬಿಜೆಪಿಯ ಹರೀಶ್ ಕಂಜಿಪಿಲಿ ಮತ್ತು ಹರೀಶ್, ಈಶ್ವರಪ್ಪ ಗೌಡ, ರವಿಚಂದ್ರ, ಸವಿನ್ ಕೆ.ಬಿ, ದಿವಾಕರ ನಾಯಕ್, ದಿನೇಶ್ ಚೆಮ್ನೂರು, ರಾಮಚಂದ್ರ ಹರ್ಲಡ್ಕ, ಷಣ್ಮುಖ, ಧನಂಜಯ, ಬಾಲಕೃಷ್ಣ ಕಂಜಿಪಿಲಿ, ಮನೋಹರ್, ದೀಪಕ್ ಎಲಿಮಲೆ, ಮನೋಜ್ ಎಂ.ಕೆ., ವಿಕಾಸ್ ಯಾನೆ ವಿಶ್ವನಾಥ ಎಂಬವರನ್ನೊಳಗೊಂಡ 14 ಮಂದಿಯ ತಂಡ ಅವರ ಮೇಲೆ ಹಲ್ಲೆ ನಡೆಸಿ, ಮಾನಭಂಗಕ್ಕೆ ಯತ್ನಿಸಿದ ಆರೋಪ ಎದುರಿಸುತ್ತಿದ್ದರು. ಈ ಬಗ್ಗೆ ಸರಸ್ವತಿ ಕಾಮತ್ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

       ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಗಿನ ದ.ಕ. ಜಿಲ್ಲಾ ಎಸ್ಪಿ ರವಿ ಬಿ.ಎಸ್. ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಈ ಬಗ್ಗೆ ನಮಗೆ ಅಧಿಕೃತ ಆದೇಶ ಪ್ರತಿ ದೊರೆತ ಬಳಿಕ ಮೇಲ್ಮನವಿ ಸಲ್ಲಿಸುತ್ತೇವೆ ಎಂದಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ