ಸಮಸ್ತ: 10,291 ಮದರಸಗಳಲ್ಲಿ ಹೊಸ ಶೈಕ್ಷಣಿಕ ವರ್ಷಾರಂಭ ಇಂದು

ಸಮಸ್ತ: 10,291 ಮದರಸಗಳಲ್ಲಿ ಹೊಸ ಶೈಕ್ಷಣಿಕ ವರ್ಷಾರಂಭ ಇಂದು

ಮಂಗಳೂರು, ಜೂನ್.2: ಅದಬ್ (ಶಿಸ್ತು) ನಿಂದ ಆರಂಭವಾಗುವ ಮದರಸ ಶಿಕ್ಷಣದ ಮೊದಲಕ್ಷರ ಅಲಿಫ್ ನೊಂದಿಗೆ ಧಾರ್ಮಿಕ ಜ್ಞಾನಾರ್ಜನೆಗಾಗಿ ಸಾವಿರಾರು ಪುಟಾಣಿ ಪ್ರತಿಭೆಗಳು ಇಂದು ಮದರಸಗಳಲ್ಲಿ ಒಟ್ಟು ಸೇರಲಿದ್ದಾರೆ. ಜ್ಞಾನ ದ್ವಾರದ ಮೂಲಕ ವಿಶ್ವ ಶಾಂತಿಗಾಗಿ ಹಾದಿ ತೋರಲು ರಂಝಾನ್ ಬಿಡುವಿನ ನಂತರ ಮದ್ರಸಾಗಳು ಮತ್ತೆ ಸಕ್ರಿಯವಾಗುತ್ತಿದೆ. ಕೋವಿಡ್ ಮುಂಜಾಗರೂಕತೆಯ ಭಾಗವಾಗಿ ಮದರಸಾಗಳ ಬಾಗಿಲು ತೆರೆಯದ ಕಾರಣ, ಈ ಬಾರಿಯ ಶೈಕ್ಷಣಿಕ ವರ್ಷವೂ ಆನ್‌ಲೈನ್‌ನಲ್ಲಿ ಪ್ರಾರಂಭವಾಗಲಿದೆ.

      ಇಂದು ಬೆಳಿಗ್ಗೆ 7.30 ಕ್ಕೆ ಸಮಸ್ತ ಆನ್‌ಲೈನ್ ಚಾನೆಲ್ ಜ್ಞಾನದ ಬಾಗಿಲು ತೆರೆಯುವುದರೊಂದಿಗೆ, ವಿದ್ಯಾರ್ಥಿಗಳು ಮನೆಯಲ್ಲಿ ಕಲಿಕೆಯ ಪ್ರಕ್ರಿಯೆಯಲ್ಲಿ ಸಕ್ರಿಯರಾಗುತ್ತಾರೆ. ಆನ್‌ಲೈನ್ ಅಧ್ಯಯನ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಪ್ರವಾಸಿಗಳು ಸೇರಿದಂತೆ ಲಕ್ಷಾಂತರ ಜನರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

      ಸಮಸ್ಥ ಕೇರಳ ಇಸ್ಲಾಮಿಕ್ ಶಿಕ್ಷಣ ಮಂಡಳಿಯ ಅಧೀನದಲ್ಲಿರುವ 10,291 ಮದರಸಾಗಳಲ್ಲಿಯೂ ನಾಳೆ ಧಾರ್ಮಿಕ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ.  ಮಿಹ್ರಜಾನುಲ್ ಬಿದಾಯಾ ಎಂಬ ಹೆಸರಿನಲ್ಲಿ ವಿಶೇಷ ಪರಿಚಯಾತ್ಮಕ ಕಾರ್ಯಕ್ರಮಗಳೂ ನಡೆಯಲಿವೆ.  ನಿನ್ನೆ ಬೆಳಿಗ್ಗೆ 9.30 ಕ್ಕೆ ಸಮಸ್ತ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯಾ ತಂಙಳ್ ಉದ್ಭೋದನಾ ಸಂದೇಶವನ್ನು ನೀಡಿದರು.

      ಇಂದು ಬೆಳಿಗ್ಗೆಯಿಂದ ವಾರದ ಆರು ದಿನಗಳಲ್ಲಿ ಒಂದನೇ ತರಗತಿಯಿಂದ ಹೈಯರ್ ಸೆಕೆಂಡರಿವರೆಗಿನ ತರಗತಿಗಳು ಆನ್‌ಲೈನ್ ಮೂಲಕ ನಡೆಯಲಿವೆ.  ಇದಲ್ಲದೆ ವೆಬ್‌ಸೈಟ್, ಅಪ್ಲಿಕೇಶನ್ ಮತ್ತು ದರ್ಶನ ಟಿವಿ ಮೊದಲಾದವುಗಳಲ್ಲಿಯೂ ತರಗತಿಗಳ ಪ್ರಸಾರ ನಡೆಯಲಿದೆ. ಪ್ರತಿನಿತ್ಯ ನಡೆಯುವ ಕ್ಲಾಸುಗಳ ಲಿಂಕ್ ಗಳನ್ನು ತರಗತಿ ಅಧ್ಯಾಪಕರುಗಳ ಮುಖಾಂತರ ಎಲ್ಲಾ ವಿದ್ಯಾರ್ಥಿಗಳಿಗೂ ಆಯಾಯ ದಿನ ತಲುಪಿಸಲಾಗುವುದು. ಕಲಿಕೆಯ ಪರಿಶೀಲನೆಗೆ ಮದ್ರಸ  ಅಧ್ಯಾಪಕರುಗಳು ನೇತೃತ್ವ ನೀಡಲಿದ್ದಾರೆ.

      ಕಳೆದ ವರ್ಷ ಪ್ರಾರಂಭವಾದ ಮದ್ರಸ ಆನ್‌ಲೈನ್ ಕಲಿಕಾ ಪದ್ಧತಿಯು ಶೈಕ್ಷಣಿಕ ರಂಗದಲ್ಲಿ ಅತೀ ಹೆಚ್ಚು ಪ್ರಶಂಸೆಗೆ ಪಾತ್ರವಾಗಿತ್ತು. ಈ ಬಾರಿಯ ಹೊಸ ಶೈಕ್ಷಣಿಕ ವರ್ಷಕ್ಕೆ ನವೀನ ಅಧ್ಯಯನ ಮತ್ತು ತಾಂತ್ರಿಕ ಶ್ರೇಷ್ಠತೆಯೊಂದಿಗೆ ತರಗತಿಗಳನ್ನು ಆಯೋಜಿಸಲಾಗುತ್ತಿದೆ. ತರಗತಿಗಳ ಆರಂಭಕ್ಕೆ ಮುಂಚಿತವಾಗಿ, ಮುಫತ್ತಿಷ್ ಗಳ (ಶಿಕ್ಷಣ ನಿರೀಕ್ಷಕರು) ನೇತೃತ್ವದಲ್ಲಿ ರೇಂಜ್ ಮಟ್ಟದ ಮುಅಲ್ಲಿಂ ಮತ್ತು ಮ್ಯಾನೇಜ್ಮೆಂಟ್ ಕಮಿಟಿ ತರಬೇತಿ ಕಾರ್ಯಕ್ರಮಗಳು ಈಗಾಗಲೇ ಪೂರ್ಣಗೊಂಡಿವೆ.  ಕುರ್'ಆನ್ ಪಾರಾಯಣ  ನಿಯಮಗಳನ್ನು ಒಳಗೊಂಡಿರುವ ಮುಷ್'ಹಫ್‌ಗಳನ್ನು ಈ ಶೈಕ್ಷಣಿಕ ವರ್ಷದಲ್ಲಿ ಮದರಸಾಗಳಿಗಾಗಿಯೇ ವಿಶೇಷವಾಗಿ ಮುದ್ರಿಸಲಾಗಿದೆ.  ಮುಷಾಫ್, ಪಠ್ಯಪುಸ್ತಕಗಳು ಮತ್ತು ನೋಟ್‌ಬುಕ್‌ಗಳ ವಿತರಣೆ ಕೋಝಿಕ್ಕೋಡ್ ಸಮಸ್ತ ಬುಕ್ ಡಿಪೋದಲ್ಲಿ ನಡೆಯುತ್ತಿದೆ.

      ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿರುವ ಅಲ್-ಬಿರ್ರ್ ಇಸ್ಲಾಮಿಕ್ ಶಾಲೆಗಳು, ಸಮಸ್ತ ಮಹಿಳಾ ಇಸ್ಲಾಮಿಕ್ ಕಾಲೇಜು ಮತ್ತು ಸಮಸ್ತ ಶಿಕ್ಷಣ ಮಂಡಳಿ ವ್ಯಾಪ್ತಿಯ ಅಸ್ಮಿ ಶಾಲೆಗಳು ಸಹ ಹೊಸ ಶೈಕ್ಷಣಿಕ ವರ್ಷಕ್ಕೆ ಸಜ್ಜಾಗಿವೆ.  ಅಲ್ ಬಿರ್ರ್ ಅಧ್ಯಯನ ವರ್ಷದ ಉದ್ಘಾಟನೆ ಜೂನ್ ಒಂದರಂದು ನಡೆಯಿತು.  ಫಾಲಿಲಾ ಕೋರ್ಸ್ ಎರಡನೇ ಶೈಕ್ಷಣಿಕ ವರ್ಷದ ತರಗತಿಗಳು ಈ ತಿಂಗಳ 10ರಂದು ಪ್ರಾರಂಭವಾಗಲಿವೆ.

      ಹೊಸ ವರ್ಷದಲ್ಲಿ ವಿದ್ಯಾರ್ಜನೆಗಾಗಿ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ  ಪಾಣಕ್ಕಾಡ್ ಸೈಯದ್ ಹೈದರ್ ಅಲಿ ಶಿಹಾಬ್ ತಂಙಲ್, ಸಮಸ್ತ ಪ್ರೆಸಿಡೆಂಟ್ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯಾ ತಂಙಲ್, ಪ್ರಧಾನ ಕಾರ್ಯದರ್ಶಿ ಪ್ರೊಫೆಸರ್  ಕೆ.ಅಲಿ ಕುಟ್ಟಿ ಮುಸ್ಲಿಯಾರ್, ಸಮಸ್ತ ಶಿಕ್ಷಣ ಮಂಡಳಿ ಅಧ್ಯಕ್ಷ ಪಿಕೆಪಿ ಅಬ್ದುಸ್ಸಲಾಮ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್, ಎಸ್ಕೆಎಸ್ಎಸ್ಎಫ್ ದ.ಕ.ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಮುಫತ್ತಿಷ್ ಉಮರ್ ದಾರಿಮಿ ಸಾಲ್ಮರ ಮುಂತಾದವರು ಶುಭ ಹಾರೈಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ