ಸಮುದಾಯದ ಸಬಲೀಕರಣಕ್ಕಾಗಿ ಧಾರ್ಮಿಕ ಶಿಕ್ಷಣದ ಫಲವತ್ತತೆ ಕೂಡ ಅನಿವಾರ್ಯ: ಮುಫತ್ತಿಶ್ ಸಾಲ್ಮರ ಉಮರ್ ದಾರಿಮಿ

ಸಮುದಾಯದ ಸಬಲೀಕರಣಕ್ಕಾಗಿ ಧಾರ್ಮಿಕ ಶಿಕ್ಷಣದ ಫಲವತ್ತತೆ ಕೂಡ ಅನಿವಾರ್ಯ: ಮುಫತ್ತಿಶ್ ಸಾಲ್ಮರ ಉಮರ್ ದಾರಿಮಿ
republicday728
republicday468
republicday234

ಮಂಗಳೂರು: ರಾಷ್ಟ್ರಗಳ ಪುನರುಜ್ಜೀವನ ಮತ್ತು ಪ್ರಗತಿಯ ರಹಸ್ಯಗಳಲ್ಲಿ ಗುಣಮಟ್ಟದ ಶಿಕ್ಷಣವು ಒಂದಾಗಿರುವಂತೆ ಸಮುದಾಯದ ಸಬಲೀಕರಣಕ್ಕಾಗಿ ಧಾರ್ಮಿಕ ಶಿಕ್ಷಣದ ಫಲವತ್ತತೆ ಕೂಡ ಅನಿವಾರ್ಯವಾಗಿದೆ.  ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್ -19 ಶೈಕ್ಷಣಿಕವಾಗಿಯೂ ಧಾರ್ಮಿಕವಾಗಿಯೂ ನಮಗೆ ಹಲವು ನೀತಿ ಪಾಠಗಳನ್ನು ನೀಡಿದೆ. ಆರ್ಥಿಕ ಏರುಪೇರುಗಳಂತೆ ಆರೋಗ್ಯ ಸುರಕ್ಷತೆ ಮತ್ತು ಶಿಕ್ಷಣದ ಸಂರಕ್ಷಣೆ ಇವೆರಡು ಈ ಕಾಲದಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದ ವಿಷಯಗಳಾಗಿದ್ದವು ಎಂದು ಸಮಸ್ತ ಮುಫತ್ತಿಸ್ ಉಮರ್ ದಾರಿಮಿ  ಸಾಲ್ಮರ ಹೇಳಿದರು. ಅವರು ಮಂಗಳೂರು ರೇಂಜ್ ತಂಶೀತ್-2020 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

      ಸುರಕ್ಷಿತ ಅಂತರ ಎಂಬ ಬೆದರು ಗೊಂಬೆಗೆ ಬೆದರಿ ಮುಚ್ಚಲಾದವುಗಳೆಲ್ಲಾ ತೆರೆದು ಸಾಮಾನ್ಯ ಸ್ಥಿತಿಗೆ ಬಂದರೂ ಶಾಲೆಗಳು ಮಾತ್ರ ಕೊರೋನಾ ಉತ್ಪಾದನಾ ತಾಣಗಳೆಂಬಂತೆ ಬಿಂಬಿತವಾಗಿ ಇನ್ನು ಕೂಡ ಅದರ ಬಾಗಿಲು ತೆರೆಯುವ ಭಾಗ್ಯ ಲಭಿಸಿಲ್ಲ. ಸರಕಾರಗಳು ಶಾಲೆಗಳಿಗೆ ರಜೆ ನೀಡಿದ ತುರ್ತು ಸಂದರ್ಭಗಳಲ್ಲಿ ಮದರಸಗಳಿಗೂ  ರಜೆ ಆಗಿರುತ್ತದೆ ಎಂಬ ಸಮಸ್ತದ ಸಂವಿಧಾನಬದ್ಧವಾದ  ಶಿಕ್ಷಣ ವ್ಯವಸ್ಥೆಯಂತೆ ಮದರಸಗಳು ಮುಚ್ಚಲಾದರೂ ಧಾರ್ಮಿಕ ಶಿಕ್ಷಣದಿಂದ ನಮ್ಮ ಮಕ್ಕಳು ವಂಚಿತರಾಗಬಾರದು ಎಂಬ ಜವಾಬ್ದಾರಿಯನ್ನರಿತ  ನಮ್ಮ ಸಮಸ್ತ ಒಂದರಿಂದ ಹನ್ನೆರಡು  ತನಕದ ಎಲ್ಲಾ ತರಗತಿಗಳಿಗೂ ಅತ್ಯಂತ ಸಮಯೋಚಿತವಾಗಿ ಸುಂದರ, ಸರಳ ರೀತಿಯಲ್ಲಿ ಆನ್ಲೈನ್ ತರಗತಿಗಳನ್ನು ನಡೆಸಿಕೊಟ್ಟಿದೆ. ಈ ಮೂಲಕ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಜನಸಾಮಾನ್ಯರ ಮೆಚ್ಚುಗೆಗೂ ಪಾತ್ರವಾಯಿತು. 

     ಆನ್ಲೈನ್ ತರಗತಿಗೆ ಹೊಂದಿಕೊಂಡಿರುವ ಮತ್ತು ಅದರಿಂದ ಆಕರ್ಷಿತರಾಗಿರುವ ವಿದ್ಯಾರ್ಥಿಗಳು ಅದೇ ರೀತಿಯ ಅಥವಾ  ಅದಕ್ಕಿಂತ ಹೆಚ್ಚಿನ ಆನಂದಕರವಾದ ಶಿಕ್ಷಣ ವ್ಯವಸ್ಥೆಯನ್ನು ಬಯಸುವುದು ಖಂಡಿತ. ಇದರಿಂದಾಗಿ ಶಿಕ್ಷಕರು ಶಿಕ್ಷಣದ ಅಪೇಕ್ಷಿತ ಫಲವನ್ನು ನೀಡಲು  ಜ್ಞಾನದ ಯುಗ ಮತ್ತು ತಾಂತ್ರಿಕ ಕ್ರಾಂತಿಗಳೊಂದಿಗೆ ಬೆರೆತು  ಅದರ ವೇಗವನ್ನು ಕಾಯ್ದುಕೊಳ್ಳುವ ಅವಶ್ಯಕತೆಯಿದೆ ಮತ್ತು ವಿದ್ಯಾರ್ಥಿಗಳ ಪಾಲಿಗೆ   ಕಲಿಕೆಯು ಕಲಿ-ನಲಿ ಎಂಬಂತೆ ಆನಂದಕರ ಜೀವನದ ಸಕ್ರಿಯ ಭಾಗವಾಗಬೇಕಿದೆ.

     ಶಿಕ್ಷಕನ ಯೋಗ್ಯತೆಯು ಅದ್ಭುತವಾಗಿದೆ. ಏಕೆಂದರೆ ಅವನು ತಲೆಮಾರುಗಳನ್ನು ರಚಿಸುವವನು. ಮನಸ್ಸನ್ನು ನಿರ್ಮಿಸುವವನು  ವಿದ್ಯಾರ್ಥಿಗಳ ಪಾಲಿಗೆ ಜ್ಞಾನವನ್ನು ಹೀರಲ್ಪಡುವ ಮಹಾ ಸಮುದ್ರ. ನೈತಿಕತೆಯೊಂದಿಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳು ಆಳವಾದ ಆ ಸಮುದ್ರದ ಅಲೆಗಳಿಗಾಗಿ ಹಾತೊರೆಯುತ್ತಿರುತ್ತಾರೆ. ಸೃಷ್ಟಿಕರ್ತ, ಅವನ ದೇವದೂತರು, ಆಕಾಶ, ಭೂಮಿ, ಜನರು,  ಇರುವೆ ಮತ್ತು ಮೀನುಗಳು  ಕೂಡ ಒಳ್ಳೆಯ ಶಿಕ್ಷಕನ ಮೇಲೆ ಪ್ರಾರ್ಥಿಸುತ್ತಿರುತ್ತದೆ. ಎಂಬ ಪುಣ್ಯ ಪ್ರವಾದಿವರ್ಯರ ವಚನವು ಶಿಕ್ಷಕ ಹುದ್ದೆಯ ಪಾವಿತ್ರತೆಯನ್ನು ಎತ್ತಿ ತೋರಿಸುತ್ತಿದೆ. ಶಿಕ್ಷಣವು ಪ್ರವಾದಿಗಳು ಮತ್ತು  ಸಂದೇಶವಾಹಕರ ಧ್ಯೇಯವಾಗಿದ್ದು ಎಲ್ಲವನ್ನೂ ಸರಳಗೊಳಿಸುವ ಅಧ್ಯಾಪಕನಾಗಿ ನನ್ನನ್ನು ಕಳುಹಿಸಲಾಗಿದೆ ಎಂಬ ಪುಣ್ಯ ಪ್ರವಾದಿಯವರ ಅಧ್ಯಾಪನ ರೀತಿಯನ್ನು ನಮಗೆ ನಾವು ಮಾರ್ಗಸೂಚಿ ಯಾಗಿ ಇಟ್ಟುಕೊಳ್ಳಬೇಕು.

     ಮಂಗಳೂರು ರೇಂಜ್ ಜಂ-ಇಯ್ಯತುಲ್ ಮುಅಲ್ಲೀಮೀನ್ ಅಧ್ಯಕ್ಷರಾದ ಸಲೀಂ ಅರ್ಷದಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಆರಂಭದಲ್ಲಿ ಕೆ.ಎಸ್ ಅಹ್ಮದ್  ದಾರಿಮಿ ದುಆ ನೆರವೇರಿಸಿದರು. ಸಭೆಯಲ್ಲಿ ಬೋಳಾರ ಮುಸ್ಲಿಂ ಜಮಾಅತ್   ಕಾರ್ಯದರ್ಶಿ ಬಿ.ಎಸ್. ಮುಹಮ್ಮದ್ ಹುಸೇನ್ ಹಾಜಿ ಬೋಳಾರ ಹಾಗೂ ಉದ್ದಬೆಟ್ಟು ಜಮಾಅತ್ ಕಾರ್ಯದರ್ಶಿ ಉಮರ್ ಉದ್ದಬೆಟ್ಟು ಶುಭ ಹಾರೈಸಿ ಮಾತನಾಡಿದರು. ಮಂಗಳೂರು ರೇಂಜ್ ಪ್ರಧಾನ ಕಾರ್ಯದರ್ಶಿ ಕೆ.ಕೆ. ರಫೀಕ್ ಫೈಝಿ ಸ್ವಾಗತಿಸಿ, ಸಹ ಕಾರ್ಯದರ್ಶಿ ಅಬ್ದುಲ್ ಖಾದರ್ ಯಮಾನಿ ವಂದಿಸಿದರು.

     ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಕರು ಪ್ರೀತಿಯ ಮಿತ್ರರಾಗಬೇಕು. ಮತ್ತು ಅದಕ್ಕಾಗಿ, ಅವನ ಆಕರ್ಷಕ  ಮತ್ತು ಆಸಕ್ತಿದಾಯಕ ವಿಧಾನಗಳಿಗೆ ವಿದ್ಯಾರ್ಥಿಗಳು ಹಂಬಲಿಸಬೇಕು. ಹೋಂವರ್ಕ್ ಗಳನ್ನು ಮಾಡಲು,  ಅವನ ತರಗತಿಯಲ್ಲಿ ಭಾಗವಹಿಸಲು, ಅವನ  ಮೆಚ್ಚುಗೆಯ ಮಾತುಗಳು  ಪ್ರೇರಣೆ ಮತ್ತು ಪ್ರೋತ್ಸಾಹ ನೀಡುವಂತಿರಬೇಕು. ಜೂನ್ ನಿಂದ ಏಳು ತಿಂಗಳುಗಳಾಗಿ ಆನ್ಲೈನ್ ತರಗತಿಗಳನ್ನು ಮೆಚ್ಚಿಕೊಂಡ ವಿದ್ಯಾರ್ಥಿಗಳ ಪಾಲಿಗೆ ತಮ್ಮ ಮದರಸದ ಅಧ್ಯಾಪಕರು ಕೂಡ ಅದೇ ರೀತಿ ಆಕರ್ಷಣೀಯ ವ್ಯಕ್ತಿತ್ವದ ಸ್ನೇಹಸಾಗರವಾಗಬೇಕು. ಒಂದನೇ ತರಗತಿಯ ಆನ್ಲೈನ್ ಮದರಸ ಅಧ್ಯಾಪಕರ ಬೋಧನಾ ಶೈಲಿಯಿಂದ ಆಕರ್ಷಿತಳಾದ ಕಾಸರಗೋಡಿನ ಪುಟಾಣಿ ವಿದ್ಯಾರ್ಥಿನಿಯೊಬ್ಬಳು ತನ್ನ ಪಾಲಕರೊಂದಿಗೆ ಅಧ್ಯಾಪಕರ ಮಲಪುರಂ ಜಿಲ್ಲೆಯಲ್ಲಿರುವ ಮನೆಯನ್ನು ಹುಡುಕಿಕೊಂಡು ಹೋಗಿ ಅವರಿಗೆ ಸನ್ಮಾನ ನೀಡಿ ಅವರೊಂದಿಗೆ ಕುಶಲೋಪರಿ ನಡೆಸಿ ಸಂತೋಷವನ್ನು ಹಂಚಿಕೊಂಡದ್ದು ನಮಗೆಲ್ಲ ಪಾಠವಾಗಬೇಕು. ಅಧ್ಯಾಪಕರು  ಪ್ರಯೋಗಿಸುವ ಪ್ರತಿಯೊಂದು ಪದವು ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಮತ್ತು ಇದು ಶಿಕ್ಷಕನು ಸಕಾರಾತ್ಮಕ ಪರಿಣಾಮವೆಂದು ಗ್ರಹಿಸುವದನ್ನು ಮೀರಿ ವಿದ್ಯಾರ್ಥಿಯ ಆತ್ಮದ ಮೇಲೆ ಪರಿಣಾಮ ಬೀರಬಹುದು.

     ವಿದ್ಯಾರ್ಥಿಗಳು ತಮ್ಮಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಶಿಕ್ಷಕನು ಗ್ರಹಿಸಿಕೊಂಡರೆ   ಅವನು ಅವರಿಗೆ ಉತ್ತಮವಾಗಿ ಕಲಿಸಲು ತನ್ನ ಅತ್ಯುತ್ತಮ ಪ್ರಯತ್ನಗಳನ್ನು ವ್ಯಯಿಸುತ್ತಾನೆ ಮತ್ತು ಅವರು ತನಗಾಗಿ ಬರುವದರಲ್ಲಿ ತಮ್ಮ ಸಮಯವನ್ನು ವಿನಿಯೋಗಿಸುತ್ತಾನೆ. ಆದ್ದರಿಂದ ಅವರು ಹೊಸ ಜ್ಞಾನ ಮತ್ತು ತಿಳುವಳಿಕೆಯನ್ನು ಗಳಿಸದ ಹೊರತು ಅವರನ್ನು ಬಿಡುವುದಿಲ್ಲ.  ತಮ್ಮ ಮನಸ್ಸನ್ನು ಬೆಳೆಸಿಕೊಂಡು, ತಿಳುವಳಿಕೆಯನ್ನು ಬೆಳೆಸಿಕೊಂಡು  ಮಕ್ಕಳು ಮನೆಗೆ ಬಂದಾಗ ಅವರ ಶಿಕ್ಷಕರ ಬಗ್ಗೆ ಕಾಳಜಿ ವಹಿಸಲು  ರಕ್ಷಕರು ಮುಂದೆ ಬರುತ್ತಾರೆ. ರಕ್ಷಕರನ್ನೊಳಗೊಂಡ ಮದರಸ ಆಡಳಿತ ಸಮಿತಿ ಕೂಡ ಯಾವುದೇ ಕಷ್ಟ ಸಂದರ್ಭದಲ್ಲಿಯೂ ಶಿಕ್ಷಕರನ್ನು ಕೈಬಿಡುವುದಿಲ್ಲ. ಕೋವಿಡ್ ಕಷ್ಟ ಕಾಲದಲ್ಲಿಯೂ ಅಧ್ಯಾಪಕರಿಗೆ ಸಂಪೂರ್ಣ ವೇತನ ಹಾಗೂ ವಿಶೇಷ ಕಿಟ್ ಗಳನ್ನು ನೀಡಿದ ಮದರಸಾ ಆಡಳಿತ ಸಮಿತಿಯವರನ್ನು  ಅಭಿನಂದಿಸಲೇಬೇಕು. ಸೇವೆಯಿಂದ ವಜಾಗೊಳಿಸಿದ ಅಥವಾ ವೇತನ ನಿರಾಕರಣೆ ಮಾಡಿದ ಆಡಳಿತ ಸಮಿತಿಯೊಂದಿಗೆ ಅದರ ಗೌರವನ್ನು ಅರ್ಥಮಾಡಿಕೊಡುವುದರಲ್ಲಿ ನಾವು  ಎಡವಿದ್ದು ಕೂಡಾ ಪ್ರಮುಖ ಕಾರಣಗಳಲ್ಲೊಂದಾಗಿದೆ.

     ಆಧುನಿಕ ಯುಗವು ಶಿಕ್ಷಕನು ತನ್ನ ಶಕ್ತಿಯನ್ನು ನಿರ್ದೇಶಿಸಲು ಮನಸ್ಸುಗಳನ್ನು ಬೆಳೆಸಲು ಮತ್ತು ವಿದ್ಯಾರ್ಥಿಗಳಲ್ಲಿ ಸೃಜನಶೀಲ, ನವೀನ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕೆಂದು ನಿರ್ದೇಶಿಸುತ್ತದೆ. ಇದರಿಂದಾಗಿ ವಿದ್ಯಾರ್ಥಿಯು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಕೇವಲ ಸ್ವೀಕರಿಸುವವನು ಮಾತ್ರವಾಗಿರದೆ ಪಾಲುದಾರನಾಗುತ್ತಾನೆ. ಈ ಉದ್ದೇಶವನ್ನು ಸಾಧಿಸಲು ಶಿಕ್ಷಕನು ತನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿರುತ್ತದೆ. ಏಕೆಂದರೆ ಯಶಸ್ವಿ ಶಿಕ್ಷಕನು ತನ್ನನ್ನು ತಾನು ನಿರಂತರವಾಗಿ ಅಭಿವೃದ್ಧಿಪಡಿಸಲು ಮತ್ತು ತನ್ನ ವಿಧಾನಗಳನ್ನು ಸುಧಾರಿಸಲು ಪ್ರಯತ್ನಿಸುತ್ತಾನೆ.  ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದದ್ದನ್ನು ಒದಗಿಸುವುದಕ್ಕಾಗಿ  ಅವನು ಈ ಗುರಿಯನ್ನು ಸಾಧಿಸುವ ಎಲ್ಲವನ್ನೂ ಪಡೆಯುತ್ತಾನೆ. ಮದ್ರಸ ಶಿಕ್ಷಣ ನಿರೀಕ್ಷಕರಾದ ಗೌರವಾನ್ವಿತ ಮುಫತ್ತಿಶುಗಳ ಸಲಹೆ ಸೂಚನೆ ಮತ್ತು ನಿರ್ದೇಶಗಳನ್ನು ಪಾಲಿಸುತ್ತಾನೆ. ಮತ್ತು ಅನುಸರಿಸುತ್ತಾನೆ.  

     ಶಿಕ್ಷಕರ  ಘನತೆಗೆ ಧಕ್ಕೆ  ಉಂಟಾಗುವುದು. ಸೇವಾಭದ್ರತೆ ಇಲ್ಲದಿರುವುದು, ಕಾಲೋಚಿತ ವೇತನ /ಪ್ರತಿಫಲ ಲಭ್ಯವಾಗದೇ ಇರುವುದು ಮೊದಲಾದವು ಶೈಕ್ಷಣಿಕ ಅಭಿವೃದ್ಧಿಗೆ ತಡೆಯಾಗಿ ನಿಲ್ಲುತ್ತದೆ. ವಿದ್ಯಾರ್ಥಿಗಳು ಪೋಷಕರು ಮತ್ತು ಆಡಳಿತ ಸಮಿತಿಯವರು ಶಿಕ್ಷಕರೊಂದಿಗೆ ಜೊತೆಯಾಗಿ ನಿಲ್ಲುವಂತಹ ವಾತಾವರಣ ಸೃಷ್ಟಿ ಮಾಡುವುದು ಸಮುದಾಯದ ಕರ್ತವ್ಯವಾಗಿದೆ. 

     ತಾಂತ್ರಿಕ ಅಭಿವೃದ್ಧಿ, ತಂತ್ರಜ್ಞಾನಗಳ ಕ್ರಾಂತಿ,  ಮತ್ತು ಪಠ್ಯಕ್ರಮವನ್ನು ಜ್ಞಾನದ ಯುಗದಲ್ಲಿ ಜೀವನಕ್ಕೆ ಜೋಡಿಸುವುದು. ಇದಕ್ಕೆ ವಿದ್ಯಾರ್ಥಿಗಳ ಸಾಮರ್ಥ್ಯಗಳನ್ನು ನಿರ್ವಹಿಸುವುದು ಮತ್ತು ಅವರಿಗೆ ಹೆಚ್ಚಿನ ಆಲೋಚನಾ ಕೌಶಲ್ಯಗಳನ್ನು ಬೆಳೆಸುವುದು ಶಿಕ್ಷಣದ  ಪ್ರಗತಿಗೆ ಅಗತ್ಯವಾಗಿರುತ್ತದೆ. ಇದಕ್ಕಾಗಿ  ಮೊದಲು ಶಿಕ್ಷಕನನ್ನು ಅರಿವಿನಿಂದ ಮತ್ತು ವೃತ್ತಿಪರವಾಗಿ ಸಿದ್ಧಪಡಿಸುವ ಅಗತ್ಯವಿರುತ್ತದೆ.ಆದ್ದರಿಂದಲೇ ಸಮಸ್ತ ಪ್ರತಿ ಮುಅಲ್ಲಿಮರಿಗೆ ಎಂ.ಎಸ್.ಆರ್ (ಮುಅಲ್ಲಿಂ ಸರ್ವಿಸ್ ರೆಜಿಸ್ಟರ್) ನೀಡಿ ಉದ್ಯೋಗ ಪರವಾನಿಗೆ ಕೊಟ್ಟು ತಜ್ವೀದ್,  ಟ್ರೈನಿಂಗ್, ಲೋವರ್  ಹೈಯರ್ ಸೆಕೆಂಡರಿ ಯೋಗ್ಯತೆಗಳನ್ನು ಒದಗಿಸಿ ರಿಲೀಫ್ ಹಾಗೂ ಭತ್ಯೆಗಳ ವ್ಯವಸ್ಥೆ ಮಾಡಿ  ಅರ್ಹತೆ ಮತ್ತು ಹುರುಪಿನೊಂದಿಗೆ  ಸೇವೆ ಸಲ್ಲಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಮುಅಲ್ಲಿಂ, ಸ್ಟೂಡೆಂಟ್, ಮ್ಯಾನೇಜ್ಮೆಂಟ್, ಪೇರೆಂಟ್ಸ್ ಮತ್ತು ವಿದ್ಯಾಭ್ಯಾಸ ಬೋರ್ಡ್ ನ  ನಡುವಿನ ಸ್ನೇಹ ಸೇತುವೆಯಾಗಿ ಎಲ್ಲರನ್ನು ಜೊತೆಯಾಗಿ ಮುನ್ನಡೆಸುವ ಸಮರ್ಥ ಮುಫತ್ತಿಶರು ಕೂಡಾ ಕ್ರಾಂತಿಕಾರಿ ಶಿಕ್ಷಣಕ್ಕಾಗಿ ಮಿಡಿಯುತಿದ್ದು  ಕೂಡಾ ಎಲ್ಲರೂ ಸದುಪಯೋಗಪಡಿಸಿಕೊಳ್ಳಬಹುದು. 

     ಸಮಸ್ತ ವಿದ್ಯಾಭ್ಯಾಸ ಬೋರ್ಡ್  ಶಿಕ್ಷಣದ ಬಗ್ಗೆ ಹೆಚ್ಚಿನ ಗಮನ ಹರಿಸಿದೆ.ಇದರಿಂದಾಗಿ ಅದು ನಿರಂತರ ಅಭಿವೃದ್ಧಿ, ನಿರಂತರ ಪುನರುಜ್ಜೀವನ ಮತ್ತು ಆಧುನಿಕ ಬದಲಾವಣೆಗಳಿಗೆ ತಕ್ಕಂತೆ ಹೊಳೆಯುವ ದಾರಿದೀಪವಾಗಿ ಮಾರ್ಪಟ್ಟಿದೆ ಮತ್ತು  ಶಿಕ್ಷಕರ ಬಗ್ಗೆಯೂ ಹೆಚ್ಚಿನ ಗಮನವನ್ನು ನೀಡಿದೆ. ಏಕೆಂದರೆ ಅವರು ಶೈಕ್ಷಣಿಕ ಪ್ರಕ್ರಿಯೆಯ ಆಧಾರ ಮತ್ತು ಅದರ ಬೆನ್ನೆಲುಬು  ಹಾಗೂ ದೀನೀ ದಅವತ್ತಿಗೆ ನಿಯೋಜನೆಗೊಂಡ ಅಂಬಿಯಾಗಳ ವಾರಸುದಾರರಾಗಿದ್ದಾರೆ. 

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ