ಸಿಡಿಲಾಘಾತ ಬಾಲಕ ಮೃತ್ಯು: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಸಿಡಿಲಾಘಾತ ಬಾಲಕ ಮೃತ್ಯು: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
republicday728
republicday468
republicday234

ಮಂಗಳೂರು, ಎ .21: ಹಳೆಯಂಗಡಿ ಸಮೀಪದ ಇಂದಿರಾನಗರ ಎಂಬಲ್ಲಿ ಆಟವಾಡುತ್ತಿದ್ದ ಬಾಲಕರಿಗೆ ಸಿಡಿಲು ಬಡಿದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ‌ ಇಬ್ಬರಲ್ಲಿ ಓರ್ವ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ . ಮೃತ ಬಾಲಕನನ್ನು ಉಡುಪಿ ಜಿಲ್ಲೆಯ ಹೆಜಮಾಡಿ ನಿವಾಸಿ ಮನ್ಸೂರ್ ಎಂಬವರ ಮಗ ನಿಹಾನ್ (5) ಎಂದು ಗುರುತಿಸಲಾಗಿದೆ .

     ಆಸ್ಪತ್ರೆಯಲ್ಲಿರುವ ಇನ್ನೋರ್ವ ಬಾಲಕ ಉತ್ತರ ಕರ್ನಾಟಕದ ಗಂಗಾವತಿ ಮೂಲದ ದುರ್ಗಪ್ಪ ರವರ ಮಗ ಮಾರುತಿ (6)  ಎಂದು ಗುರುತಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾನೆ . ಮುಲ್ಕಿ ಸಮೀಪದ ಹಳೆಯಂಗಡಿ ಇಂದಿರಾನಗರದ ಬೊಳ್ಳೂರು ಮಸೀದಿ ಹಿಂಭಾಗದಲ್ಲಿರುವ ಮನೆಯ ಅಂಗಳದಲ್ಲಿ ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಐದರಿಂದ ಆರು ಪುಟ್ಟ ಮಕ್ಕಳು ಆಟವಾಡುತ್ತಿದ್ದರು. ಈ ಸಮಯದಲ್ಲಿ ಏಕಾಏಕಿ ಸಿಡಿಲು ಬಡಿದಿದ್ದು , ಈ ಸಂದರ್ಭ ನಿಹಾನ್ ಹಾಗೂ ಮಾರುತಿ ಎಂಬ ಬಾಲಕರಿಗೆ ಸಿಡಿಲಿನಿಂದ ಆಘಾತವಾಗಿದ್ದರೆ, ಉಳಿದ ಮಕ್ಕಳು ಭಯಭೀತರಾಗಿ ಓಡಿ ಹೋಗಿದ್ದರು. ತಕ್ಷಣವೇ ಸ್ಥಳೀಯರ ಸಹಾಯದಿಂದ ಗಾಯಗೊಂಡ ಮಕ್ಕಳಿಬ್ಬರನ್ನು ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ನಿಹಾನ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

      ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಹಾನ್ ಇಂದು (ಬುಧವಾರ, ಎ.21) ಮೃತ ಪಟ್ಟಿದ್ದಾನೆ. ಮೃತ ಬಾಲಕನ ತಂದೆ ಹೆಜಮಾಡಿಯ ಮನ್ಸೂರು ವೃತ್ತಿಯಲ್ಲಿ ಟೈಲರ್ ಆಗಿದ್ದಾರೆ. ಓರ್ವ ಪುತ್ರ ಹಾಗೂ ಪುತ್ರಿ ಇಬ್ಬರು ಮಕ್ಕಳಿದ್ದು ಪುತ್ರ ನಿಹಾನ್ ಪಡುಬಿದ್ರಿ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದನು, ಹಳೆಯಂಗಡಿ ಇಂದಿರಾನಗರದ ಬೊಳ್ಳೂರು ಮಸೀದಿ ಬಳಿಯ ತಮ್ಮ ಪತ್ನಿ ಮನೆಗೆ ರಮಝಾನ್ ಉಪವಾಸದ ನಿಮಿತ್ತ ಬಂದಿದ್ದರು ಎನ್ನಲಾಗಿದೆ. ಬಾಲಕ ನಿಹಾನ್ ಸಾವಿನಿಂದ ಮನೆಯಲ್ಲಿ ಶೋಕ ಮಡುಗಟ್ಟಿದ್ದು ಮನೆಯವರ ಆಕ್ರಂದನ ಮುಗಿಲುಮುಟ್ಟಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ