ಶುಕ್ರವಾರದ ಜುಮುಅ ನಮಾಝ್ ಅನುಮತಿ ರದ್ದುಗೊಳಿಸಿದ ಹರ್ಯಾಣ: ನಮಾಝ್‌ಗಾಗಿ ಬಾಗಿಲು ತೆರೆದಿಟ್ಟ ಸಿಖ್ಕರ ಗುರುದ್ವಾರಗಳು

ಗುರುಗ್ರಾಮ (ಹರಿಯಾಣ): ಗುರುಗ್ರಾಮ್‌ನಲ್ಲಿರುವ ಸಿಖ್ಖರು ತಮ್ಮ ಅತ್ಯಂತ ಪವಿತ್ರ ಸ್ಥಳವಾದ ಗುರುದ್ವಾರವನ್ನು ಮುಸ್ಲಿಮರ ಶುಕ್ರವಾರದ ಜುಮುಅ ನಮಾಝಿಗಾಗಿ ಬಿಟ್ಟುಕೊಟ್ಟು ಸಂಘ ಪರಿವಾರದ ತಂತ್ರಗಳಿಗೆ ಸೆಡ್ಡು ಹೊಡೆಯುವ ಮೂಲಕ ದೇಶದ ಜಾತ್ಯಾತೀತತೆಗೆ ಮಾದರಿಯಾಗಿದ್ದಾರೆ.
ಇದರೊಂದಿಗೆ ಗುರುಗ್ರಾಮದ ಸಿಖ್ ಸಹೋದರರ ಕಾವಲಿನಲ್ಲಿ ಮುಸ್ಲಿಂ ಸಮುದಾಯದವರು ಯಾವುದೇ ಪ್ರತಿಭಟನೆಗಳಿಲ್ಲದೆ, ಧಿಕ್ಕಾರದ ಘೋಷಣೆಗಳ ಭಯವಿಲ್ಲದೆ, ಬೆದರಿಕೆಗಳಿಲ್ಲದೆ ಮುಂದಿನ ಶುಕ್ರವಾರ ಜುಮಾ ಆಚರಿಸಲು ಸಾಧ್ಯವಾಗಲಿದೆ.
ಕಳೆದ ಶುಕ್ರವಾರ ಒಬ್ಬ ಹಿಂದೂ ಯುವಕ ತನ್ನ ಅಂಗಡಿ ಕೋಣೆಯನ್ನೇ ಜುಮುಅ ನಮಾಝ್‌ಗಾಗಿ ಬಿಟ್ಟುಕೊಟ್ಟಿದ್ದರು. ಇದರ ಬೆನ್ನಲ್ಲೇ ಸಿಖ್ಖರು ತಮ್ಮ ಪವಿತ್ರ ಗುರುದ್ವಾರವನ್ನೇ ಮುಸ್ಲಿಮರಿಗೆ ಬಿಟ್ಟುಕೊಡಲು ತೀರ್ಮಾನಿಸಿದ್ದಾರೆ. ಏಕ ಕಾಲದಲ್ಲಿ 2000 ರಿಂದ 2500 ಜನರು ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸುವ ವಿಶಾಲವಾದ ಐದು ಗುರುದ್ವಾರಗಳನ್ನು ಮುಸ್ಲಿಮರ ಶುಕ್ರವಾರದ ಜುಮುಅ ನಮಾಝ್ ನಿರ್ವಹಿಸಲು ಮುಕ್ತವಾಗಿ ನೀಡಲಾಗಿದೆ.
ಮುಸ್ಲಿಮರು ಗುರುದ್ವಾರದಲ್ಲಿ ನಮಾಝ್ ನಿರ್ವಹಿಸಲು ಆಹ್ವಾನ ನೀಡಿರುವುದು ಸಿಖ್ ಸಮುದಾಯದ ಗುರು ಸಿಂಗ್ ಸಭಾ. ಗುರು ಸಿಂಗ್ ಸಭಾದ ಅಧೀನದಲ್ಲಿ ಪ್ರಮುಖ ಮತ್ತು ಚಿಕ್ಕ ಐದು ಗುರುದ್ವಾರಗಳಿವೆ. ಇಲ್ಲಿ ಪ್ರಾರ್ಥನೆ ಸಲ್ಲಿಸಲು ಎಲ್ಲಾ ವರ್ಗದ ಜನರನ್ನೂ ಆಹ್ವಾನಿಸಲಾಗುವುದು ಎಂದು ಗುರುದ್ವಾರದ ಅಧಿಕೃತ ಮೂಲಗಳು ತಿಳಿಸಿವೆ. ಗುರುದ್ವಾರಗಳ ಅಂಗಳವನ್ನು ಪ್ರಾರ್ಥನೆಗಾಗಿ ಬಳಸಬಹುದು. ಅದರಲ್ಲೇನಾದರೂ ಸಮಸ್ಯೆಯಾಗುವುದಿದ್ದರೆ ಗುರುದ್ವಾರವನ್ನೇ ಪ್ರಾರ್ಥನೆಗೆ ಬಳಸಿಕೊಳ್ಳಬಹುದು ಎಂದು ಗುರು ಸಿಂಗ್ ಸಭಾದ ಅಧ್ಯಕ್ಷ ಶೆರ್ದಿಲ್ ಸಿಂಗ್ ಸಂಧು ಹೇಳಿದ್ದಾರೆ. ಎಲ್ಲಾ ಧರ್ಮೀಯರು ಪ್ರಾರ್ಥನೆಗಾಗಿ ಆವರಣವನ್ನು ಬಳಸಲು ಅನುಮತಿಸಲಾಗುವುದು. ಎಲ್ಲಾ ಧರ್ಮಗಳು ಒಂದೇ, ನಾವು ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳನ್ನು ನಂಬುತ್ತೇವೆ ಎಂದು ಅವರು ಹೇಳಿದರು.
ಗುರುಸಿಂಗ್ ಸಭಾದ ಹಿರಿಯ ಉಪಾಧ್ಯಕ್ಷ ಜೆ.ಪಿ.ಸಿಂಗ್ ಮಾತನಾಡಿ, ತಾವು ದೇವರ ಏಕತೆಯನ್ನು ನಂಬುತ್ತೇವೆ ಮತ್ತು ಸಿಖ್ ಸಮುದಾಯವು ಎಲ್ಲರಿಗೂ ಸಹಾಯ ಮಾಡಲು ಯಾವಾಗಲೂ ಸಿದ್ಧವಾಗಿದೆ. ಗುರುದ್ವಾರ ಪರಿಸರದಲ್ಲಿ ಅವರವರ ನಂಬಿಕೆಗೆ ಅನುಗುಣವಾಗಿ ಪ್ರಾರ್ಥನೆ ಸಲ್ಲಿಸಲು ಎಲ್ಲರಿಗೂ ಸ್ವಾಗತವಿದೆ ಎಂದು ಅವರು ಹೇಳಿದರು. ಗುರುಸಿಂಗ್ ಸಭಾದ ಐದು ಗುರುದ್ವಾರಗಳಲ್ಲಿ ಒಂದೇ ಬಾರಿಗೆ 2,000 ರಿಂದ 2,500 ಜನರು ಪ್ರಾರ್ಥನೆ ಸಲ್ಲಿಸಲು ಸಾಧ್ಯವಿದೆ ಎಂದು ಸಭಾದ ಪದಾಧಿಕಾರಿಗಳು ತಿಳಿಸಿದರು.
ಹರಿಯಾಣದಲ್ಲಿ ಸಾಕಷ್ಟು ಮಸೀದಿಗಲು ಇಲ್ಲದ ಕಾರಣ ಶುಕ್ರವಾರದ ಜುಮುಅ ನಮಾಝ್ ನಿರ್ವಹಿಸಲು ಜಿಲ್ಲಾ ಅಧಿಕಾರಿಗಳು ನಿರ್ದಿಷ್ಟ ಸ್ಳಗಳನ್ನು ಗುರುತಿಸಿ ಅನುಮತಿಯನ್ನು ನೀಡಲಾಗಿತ್ತು. ಆದರೆ ಅಧಿಕಾರಿಗಳು ಅನುಮತಿ ನೀಡಿದ ಸ್ಥಳಗಳಲ್ಲಿ ಮುಸ್ಲಿಮರು ಶುಕ್ರವಾರದ ನಮಾಜು ನಿರ್ವಹಿಸುವುದನ್ನು ಬಿಜೆಪಿ ನಾಯಕರು ಸೇರಿದಂತೆ ಉಗ್ರ ಹಿಂದುತ್ವವಾದಿಗಳ ಪ್ರತಿಭಟಿಸಿದಾಗ, ಪ್ರತಿಭಟನೆಗೆ ಮಣಿದ ಸರಕಾರ ಅನುಮತಿಯನ್ನು ಹಿಂದಕ್ಕೆ ಪಡೆದಿತ್ತು. ಕಳೆದ ಎರಡು ತಿಂಗಳಿನಿಂದ, ಬಿಜೆಪಿ ನಾಯಕರ ನೇತೃತ್ವದ ಹಿಂದುತ್ವ ಗುಂಪುಗಳು ಸೆಕ್ಟರ್ 12 ರಲ್ಲಿ ಪ್ರಾರ್ಥನೆಯನ್ನು ತಡೆಯುತ್ತಿವೆ. ನಮಾಝ್ ನಡೆಸುತ್ತಿದ್ದ ಸ್ಥಳದಲ್ಲಿ ಸೆಗಣಿಯನ್ನು ಸಾರಿಸಿ, ಜೋರಾದ ಶಬ್ದಗಳಲ್ಲಿ ಭಜನೆ, ಪೂಜೆಗಳನ್ನು ನಡೆಸಲು ಮೂಲಕ ಜುಮುಅ ನಾಮಾಝಿಗೆ ಅಡ್ಡಿ ಪಡಿಸುತ್ತಿದ್ದವು. ಬಿಜೆಪಿ ನಾಯಕ ಕಪಿಲ್ ಮಿಶ್ರಾ ನೇತೃತ್ವದಲ್ಲಿ ಗೋವರ್ಧನ ಪೂಜೆ ಕೂಡಾ ನಡೆಸಲಾಗಿತ್ತು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ