ವಿಶ್ವ ವಿಧವೆಯರ ದಿನ

ವಿಶ್ವ ವಿಧವೆಯರ ದಿನ

      ವಿಧವೆಯರೂ ಕೂಡ ತಮ್ಮ ಇಚ್ಛೆಯಂತೆ ಜೀವನ ಸಾಗಿಸಬೇಕು, ಅವರ ಹಕ್ಕುಗಳನ್ನು ರಕ್ಷಿಸಬೇಕು, ಅವರಿಗೆ ಸುಗಮ ಜೀವನಕ್ಕೆ ದಾರಿ ಮಾಡಿಕೊಡಬೇಕು, ಗೌರವ ನೀಡಬೇಕು ಎಂಬ ಉದ್ಧೇಶದೊಂದಿಗೆ ಪ್ರತಿ ವರ್ಷವೂ ಜೂನ್ 23 ರಂದು ‘ಅಂತರರಾಷ್ಟ್ರೀಯ ವಿಧವೆಯರ ದಿನ’ ಎಂದು ಆಚರಿಸಲಾಗುತ್ತಿದೆ.

      ವಿಧವಾ ಮಹಿಳೆಯರಿಗೆ ನ್ಯಾಯ ಸಿಗಬೇಕು, ಅವರ ಮೇಲೆ ದೌರ್ಜನ್ಯಗಳು ನಿಲ್ಲಬೇಕು, ಸಮಾಜದ ಮುಖ್ಯವಾಹಿನಿಯಲ್ಲಿ ವಿಧವೆ ಎನಿಸಿಕೊಂಡವರೂ ಕೂಡ ಘನತೆಯಿಂದ ಬಾಳಿ ಬದುಕಲು ಎಲ್ಲಾ ಸಮಾಜಗಳು ಅವಕಾಶ ಮಾಡಿಕೊಡಬೇಕು ಎಂದು 2011 ರಲ್ಲಿ ವಿಶ್ವಸಂಸ್ಥೆಯು ಜೂನ್‌ 23ನ್ನು ಅಂತರರಾಷ್ಟ್ರಿಯ ವಿಧವೆಯರ ದಿನವನ್ನಾಗಿ ಘೋಷಣೆ ಮಾಡಿತು.

      ‘ಸ್ತ್ರೀ’ ಅಬಲೆಯಲ್ಲ, ಸಬಲೆ ಎಂಬ ಘೋಷಣೆಗಳು ಆಗಾಗ ಮೊಳಗುತ್ತಿದ್ದರೂ, ಕೆಲ ವಿಧವೆಯರು ಅನುಭವಿಸುತ್ತಿರುವ ನೋವು ಅಸಹನೀಯ. ಅವರನ್ನು ಸಮಾಜವು ತುಚ್ಛವಾಗಿ ಕಾಣುತ್ತಿದೆ. ಅವರನ್ನು ಅಪಶಕುನಗಳು, ಅಮಂಗಳಕರ, ಅಶುಭಕರ ಮುಂತಾದ ರೀತಿಯಲ್ಲಿ ಚಿತ್ರಿಸಲಾಗುತ್ತದೆ. ಶುಭ ಕಾರ್ಯಗಳ ಸಂದರ್ಭದಲ್ಲಿ ಆಕೆಯನ್ನು ಕಾರ್ಯಕ್ರಮಗಳಿಂದ ಪ್ರತ್ಯೇಕಿಸಲಾಗುತ್ತದೆ. ಇದು  ಶತ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ.

      ಪತ್ನಿಯಾಗಿ, ತಾಯಿಯಾಗಿ, ಸಹೋದರಿಯಾಗಿ ಕುಟುಂಬವನ್ನು ಸಲಹುವ ಸ್ತ್ರೀ, ಆಕಸ್ಮಿಕವಾಗಿ ಗಂಡನನ್ನು ಕಳೆದುಕೊಂಡರೆ ಅವಳು ಈ ಸಮಾಜದಲ್ಲಿ ವಿಧವೆ ಎನ್ನುವ ಪಟ್ಟ ಹೊತ್ತು ಬಿಡುತ್ತಾಳೆ. ಇದರಿಂದ ಅದೆಷ್ಟೊ ಮಹಿಳೆಯರು ಅನುಭವಿಸುವ ನೋವು ಸಮಾಜವನ್ನು ತಲ್ಲಣಗೊಳಿಸುತ್ತದೆ.

      ಹೆಣ್ಣು ವಿಧವೆ ಆದ ಮೇಲೆ ಅನುಭವಿಸುವ ಸಂಕಷ್ಟಗಳನ್ನು ಅವಳು ಯಾರ ಮುಂದೆಯೂ ಹೇಳಿಕೊಳ್ಳುವುದಿಲ್ಲ. ಪ್ರಪಂಚದ ಅನೇಕ ದೇಶಗಳ, ಅನೇಕ ಸಮಾಜಗಳಲ್ಲಿ ವಿಧವೆ ಪಟ್ಟ ಹೊತ್ತ ಮಹಿಳೆಯನ್ನು ಇಂದಿಗೂ ಕೂಡ ನಿಕೃ‌ಷ್ಟವಾಗಿ ನೋಡಿಕೊಂಡು ಬರಲಾಗುತ್ತಿದೆ. ಇವೆಲ್ಲದರೆ ವಿರುದ್ಧವಾಗಿ ವಿಧವೆಯರಲ್ಲಿ ಧೈರ್ಯ ತುಂಬುವ ಸಲುವಾಗಿ ವಿಶ್ವಸಂಸ್ಥೆ ಕೈಗೋಮಡ ಕ್ರಮವೇ ವಿಶ್ವ ವಿಧವೆಯರ ದಿನ

      ‘ಲೂಂಬಾ ಫೌಂಡೇಶನ್‌’ ಎಂಬುದು ವಿಶ್ವಸಂಸ್ಥೆಯಿಂದ ಮನ್ನಣೆ ಪಡೆದ, ಲಂಡನ್‌ನಲ್ಲಿ ಅನಿವಾಸಿ ಭಾರತೀಯರಿಂದ ಸ್ಥಾಪಿಸಲ್ಪಟ್ಟ ಅಂತರರಾಷ್ಟ್ರೀಯ ಎನ್‌ಜಿಒ. ಈ ಸಂಸ್ಥೆಯ ಕಾಳಜಿಯಿಂದ ಅಂತರರಾಷ್ಟ್ರೀಯ ವಿಧವೆಯರ ದಿನ ಆಚರಣೆಗೆ ಬಂತು. ಲೂಂಬಾ ಫೌಂಡೇಶನ್‌ ಮುಖ್ಯಸ್ಥ ಲಾರ್ಡ್ ಲೂಂಬಾ ಪಂಜಾಬ್‌ನವರು. ಲಾರ್ಡ್ ಲೂಂಬಾ ತಾಯಿ ಪುಷ್ಪವತಿ ಲೂಂಬಾ ಅವರು 1953ರ ಜೂನ್ 23 ರಂದು ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಲೂಂಬಾ ಅವರು ಗಂಡನನ್ನು ಕಳೆದುಕೊಂಡ ಮಹಿಳೆಯರ ಸಂಕಷ್ಟಗಳಿಗೆ ಸ್ಪಂದಿಸಲು ಮುಂದಾದರು. ಇದರ ಫಲವಾಗಿ ಅವರು 1954 ರಿಂದ ವಿಧವೆಯರ ದಿನವನ್ನು ಆಚರಣೆ ಮಾಡಲು ಪ್ರಾರಂಭಿಸಿದರು.

      ಭಾರತದಲ್ಲಿ ವಿಧವೆಯರ ಬಗ್ಗೆ ಇರುವ ಹಳೆ ಕಾಲದ ಭಾವನೆಗಳು ಇನ್ನೂ ಬದಲಾಗಿಲ್ಲ. ಹಳೆಯ ಕಾಲದ ಪ್ರಭಾವ ಇನ್ನೂ ಗಾಢವಾಗಿ ಮುಂದುವರಿಯುತ್ತಿರುವುದರಿಂದ ಗಂಡನನ್ನು ಕಳೆದುಕೊಂಡ ಅನೇಕ ಮಹಿಳೆಯರು ಏಕಾಂಗಿತನವನ್ನು ಅನುಭವಿಸುತ್ತಾ, ಸಮಾಜದ ಮುಖ್ಯ ವಾಹಿನಿಯಿಂದ ದೂರ ಉಳಿಯುತ್ತಿದ್ದಾರೆ.

      ಉತ್ತರ ಪ್ರದೇಶ ಮಥುರಾದಲ್ಲಿ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬೃಂದಾವನದ ವಿಧವೆಯರು ಎಂಬ ಆಚರಣೆಯನ್ನೇ ಮಾಡಿಕೊಂಡು ಬರಲಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ