ಲಕ್ಷದ್ವೀಪ ರಕ್ಷಿಸಿ; ಆಡಳಿತಾಧಿಕಾರಿ ತೊಲಗಿಸಿ: SYSನಿಂದ ಫ್ಯಾಮಿಲಿ ಚೈನ್

ಲಕ್ಷದ್ವೀಪ ರಕ್ಷಿಸಿ; ಆಡಳಿತಾಧಿಕಾರಿ ತೊಲಗಿಸಿ:  SYSನಿಂದ ಫ್ಯಾಮಿಲಿ ಚೈನ್

ಮಂಗಳೂರು: ಲಕ್ಷದ್ವೀಪದ ಜನತೆಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಮೇ 27 ಗುರುವಾರ 3 ಗಂಟೆಗೆ ಎಲ್ಲಾ ಮನೆಗಳಲ್ಲೂ ಕುಟುಂಬ ಸದಸ್ಯರನ್ನು ಸೇರಿಸಿಕೊಂಡು ಫ್ಯಾಮಿಲಿ ಚೈನ್ ನಿರ್ಮಿಸಲು ಸಮಸ್ತ SYS ಕರೆ ನೀಡಿದೆ ಎಂದು SYS ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಲ್ ಉಮರ್ ದಾರಿಮಿ ಪಟ್ಟೋರಿ ತಿಳಿಸಿದ್ದಾರೆ. 
      ಪ್ರಕೃತಿ ರಮಣೀಯ ಸೌಂದರ್ಯ ಮತ್ತು ಪ್ರಶಾಂತತೆಗೆ ಹೆಸರಾದ  ಲಕ್ಷದ್ವೀಪ ಇದೀಗ ರಾಜಕೀಯ ವಿವಾದವೊಂದರ ಬಗ್ಗೆ ದೊಡ್ಡ ಸುದ್ದಿಯಲ್ಲಿದೆ.
      ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರನ್ನು ತೆಗೆದುಹಾಕುವಂತೆ ಒತ್ತಾಯಿಸಿ #ಸೇವ್ ಲಕ್ಷದ್ವೀಪ್ ಎಂಬ ಹ್ಯಾಸ್ ಟ್ಯಾಗ್ ಪೋಸ್ಟ್‌ಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜನಸಾಮಾನ್ಯರು, ವಿವಿಧ ನೇತಾರರು ರಂಗಕ್ಕಿಳಿದಿದ್ದಾರೆ.
      ಸಮಸ್ತ ನೇತಾರರು ಈಗಾಗಲೇ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಕೋಡಾ ಪಟೇಲ್ ರನ್ನು ವಾಪಾಸ್ಸು ಕರೆಸುವಂತೆ ಆಗ್ರಹಿಸಿದೆ. ಸಮಸ್ತ ನೇತಾರರ ನಿರ್ದೇಶನದಂತೆ SYS ಕೇಂದ್ರ ಸಮಿತಿಯು ಮೇ 27, ಗುರುವಾರದಂದು ಲಕ್ಷದ್ವೀಪ್ ಡೇ ಆಚರಿಸಲು ಕರೆ ನೀಡಿದೆ. ಕರೆಯಂತೆ ಪ್ರತೀ ಮನೆಯಲ್ಲಿ, ಕೋವಿಡ್ ನಿಯಮಗಳನ್ನು ಪಾಲಿಸಿ ಕುಟುಂಬ ಸದಸ್ಯರೊಂದಿಗೆ ಲಕ್ಷದ್ವೀಪದ ಶಾಂತಿಪ್ರಿಯ ಜನತೆಗಾಗಿ ಫ್ಯಾಮಿಲಿ ಚೈನ್ ನಿರ್ಮಿಸಿ ಬೆಂಬಲ ಘೋಷಿಸಬೇಕಾಗಿದೆ.
      ಅಭಿವೃದ್ಧಿಯ ಹೆಸರಲ್ಲಿ ದಿನನಿತ್ಯ ಹೊಸ ಹೊಸ ಕರಾಳ ಕಾನೂನನ್ನು ಹೇರುವ ಮೂಲಕ ಅಮಾಯಕ ಲಕ್ಷದ್ವೀಪ ನಿವಾಸಿಗಳನ್ನು ಕೇಂದ್ರ ಸರಕಾರವು ಮಾನಸಿಕವಾಗಿ ಹಿಂಸಿಸುತ್ತಿದೆ. ಸಾಮಾಜಿಕ ಅಶಾಂತಿ ಸೃಷ್ಟಿಸುತ್ತಿರುವ ಆಡಳಿತಾಧಿಕಾರಿ ಪ್ರಫುಲ್ ಕೋಡಾ ಪಟೇಲರನ್ನು ವಾಪಸ್ಸು ಕರೆಸುವಂತೆ ಆಗ್ರಹಿಸಿ, ಆಡಳಿತಾಧಿಕಾರಿಯನ್ನು ನೇಮಿಸಲು ಅಧಿಕಾರವಿರುವ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಒಂದು ಲಕ್ಷ ಇಮೈಲ್ ಕಳುಹಿಸಿ ಒತ್ತಡ ಹೇರುವ ಕಾರ್ಯಕ್ರಮವೂ ಇದೆ. ಆದ್ದರಿಂದ ಎಲ್ಲಾ ಶಾಂತಿಪ್ರಿಯ, ನ್ಯಾಯಪರ ನಾಗರಿಕರು 'ಲಕ್ಷದ್ವೀಪ ಉಳಿಸಿ, ಆಡಳಿತಾಧಿಕಾರಿಯನ್ನು ವಾಪಾಸ್ಸು ಕರೆಸಿ' ಪ್ರತಿಭಟನಾ ಅಭಿಯಾನದಲ್ಲಿ ಭಾಗವಹಿಸಿ ರಾಷ್ಟ್ರಪತಿಯವರಿಗೆ ಇಮೈಲ್ ಕಳುಹಿಸುವ ಮೂಲಕ ಲಕ್ಷದ್ವೀಪ ಜನತೆಗೆ ಬೆಂಬಲ ಸೂಚಿಸುವಂತೆ SYS ಜಿಲ್ಲಾಧ್ಯಕ್ಷ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮನವಿ ಮಾಡಿದ್ದಾರೆ.
      ಲಕ್ಷದ್ವೀಪದಲ್ಲಿ ಕೋವಿಡ್-19ರ ಉಲ್ಬಣಕ್ಕೆ ಪ್ರಫುಲ್ ಖೋಡಾ ಪಟೇಲ್ ಅವರನ್ನೇ ದೂಷಿಸಲಾಗುತ್ತಿದೆ. ಭಾರತದ ಅತ್ಯಂತ ಸಣ್ಣ ಕೇಂದ್ರಾಡಳಿತ ಪ್ರದೇಶದವಾದ ಲಕ್ಷದ್ವೀಪದಲ್ಲಿ ಸಾಮಾಜಿಕ ಉದ್ವಿಗ್ನತೆಯನ್ನು ಸೃಷ್ಟಿಸಿದ ಆರೋಪವೂ ಪಟೇಲ್ ಅವರ ಮೇಲಿದೆ.
      ಸಾಮಾಜಿಕ ಮಾಧ್ಯಮ ವೇದಿಕೆಗಳು ಸೇರಿದಂತೆ ಅಂತರ್ಜಾಲದಲ್ಲಿ ಗೋಚರಿಸುವ ಪ್ರತಿಭಟನೆಯಲ್ಲಿ ಕೇಂದ್ರಬಿಂದುಗಳಾದ ಅನೇಕ ನಾಯಕರು ಭಾಗವಹಿಸುತ್ತಿದ್ದಾರೆ. ಪ್ರಫುಲ್ ಖೋಡಾ ಪಟೇಲ್ ವಿರುದ್ಧ ಧ್ವನಿ ಎತ್ತಿದವರಲ್ಲಿ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್, ಸಮಸ್ತದ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಯ ಆಲಿಕುಟ್ಟಿ ಮುಸ್ಲಿಯಾರ್, ಪಾಣಕ್ಕಾಡ್ ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್, ಲಕ್ಷದ್ವೀಪದ  ಸ್ಥಳೀಯ ನಿವಾಸಿಗಳು, ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಮುಸ್ಲಿಂ ಲೀಗ್ ನೇತಾರರಾದ ಸಂಸದ ಇ.ಟಿ.ಬಶೀರ್, ಅಬ್ದುಸ್ಸಮದ್ ಸಮದಾನಿ, ಫುಟ್ಬಾಲ್ ಆಟಗಾರ ಸಿಕೆ ವಿನೀತ್, ಮತ್ತು ನಟ ಪೃಥ್ವಿರಾಜ್ ಸುಕುಮಾರ್ ಸೇರಿದಂತೆ ಹಲವಾರು ಧಾರ್ಮಿಕ, ಸಾಮಾಜಿಕ, ರಾಜಕೀಯ ನೇತಾರರು ಸೇರಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ