ರಹಸ್ಯವಾಗಿ ಜಾರಿಯಾಗುತ್ತಿರುವ CAA ಪೌರತ್ವ ಖಾಯಿದೆ: ಸುಪ್ರೀಂ ಕೋರ್ಟ್ ಮೆಟ್ಟಲೇರಿದ ಮುಸ್ಲಿಂ ಲೀಗ್

ರಹಸ್ಯವಾಗಿ ಜಾರಿಯಾಗುತ್ತಿರುವ CAA ಪೌರತ್ವ ಖಾಯಿದೆ: ಸುಪ್ರೀಂ ಕೋರ್ಟ್ ಮೆಟ್ಟಲೇರಿದ ಮುಸ್ಲಿಂ ಲೀಗ್

ನವದೆಹಲಿ, ಜೂನ್1: ದೇಶವು ಕೋವಿಡ್-19 ಮಾರಕ ವೈರಸ್ ನ ಹೊಡೆತಕ್ಕೆ ಸಿಕ್ಕಿ ತತ್ತರಿಸುತ್ತಿರುವಾಗ ಕೇಂದ್ರ ಸರಕಾರವು ರಹಸ್ಯವಾಗಿ ತನ್ನ ವಿವಾದಿತ ಪೌರತ್ವ ಖಾಯಿದೆಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಇದರ ವಿರುದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ. ಮುಸ್ಲಿಮೇತರ ನಿರಾಶ್ರಿತರ ಪೌರತ್ವಕ್ಕಾಗಿ ಅರ್ಜಿಗಳನ್ನು ಆಹ್ವಾನಿಸುವ ಕೇಂದ್ರದ ಅಧಿಸೂಚನೆಯ ವಿರುದ್ಧ ಮುಸ್ಲಿಂ ಲೀಗ್ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. 

      ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರ ನಿರಾಶ್ರಿತರಿಂದ ಪೌರತ್ವಕ್ಕಾಗಿ ಅರ್ಜಿ ಕೋರಿ ಇತ್ತೀಚಿನ ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆಯನ್ನು ಪ್ರಶ್ನಿಸಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ

      ಪೌರತ್ವ ಕಾಯ್ದೆ 1955ರ ಸೆಕ್ಷನ್ 16ರ ಅಡಿಯಲ್ಲಿ (1955 ರ 57) ನೀಡಲಾದ ಅಧಿಕಾರವನ್ನು ಚಲಾಯಿಸಿ, ಸೆಕ್ಷನ್ 5ರಡಿಯಲ್ಲಿ ಭಾರತದ ಪ್ರಜೆಯಾಗಿ ನೋಂದಾಯಿಸಲು ಅಥವಾ ಸೆಕ್ಷನ್ 6ರಡಿಯಲ್ಲಿ ನೈಸರ್ಗೀಕರಣದ ಪ್ರಮಾಣಪತ್ರವನ್ನು ನೀಡಲು ಕೇಂದ್ರ ಸರಕಾರವು ಈ ಮೂಲಕ ಅಧಿಕಾರ ಚಲಾಯಿಸುವಂತೆ ನಿರ್ದೇಶಿಸುತ್ತದೆ. ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಯಾವುದೇ ವ್ಯಕ್ತಿಗಳಿಗೆ ಸಂಬಂಧಿಸಿದಂತೆ, ಅಂದರೆ ಹಿಂದೂ, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರು ಸೇರಿದಂತೆ ಗುಜರಾತ್, ರಾಜಸ್ಥಾನ, ಛತ್ತೀಸ್ ಘಡ, ಹರಿಯಾಣ ಮತ್ತು ಪಂಜಾಬ್‌ನ 13 ಜಿಲ್ಲೆಗಳಲ್ಲಿ ನೆಲೆಸಿರುವ ಮುಸ್ಲಿಮೇತರ ನಿರಾಶ್ರಿತರನ್ನು ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಕೇಂದ್ರವು ಶುಕ್ರವಾರ ಅಧಿಸೂಚನೆಯನ್ನು ಹೊರಡಿಸಿತ್ತು.

      2019 ರಲ್ಲಿ ಜಾರಿಗೆ ತರಲಾದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯ ನಿಯಮಗಳನ್ನು ಇನ್ನೂ ಪೂರ್ಣ ರೂಪದಲ್ಲಿ ರೂಪೀಕರಣವಾಗಿಲ್ಲದಿದ್ದರೂ, ಪೌರತ್ವ ಕಾಯ್ದೆ 1955 ಮತ್ತು 2009 ರ ಕಾನೂನಿನಡಿಯಲ್ಲಿ ರೂಪಿಸಲಾದ ನಿಯಮಗಳನ್ನು ತಕ್ಷಣ ಜಾರಿಗೆ ತರಲು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆಯನ್ನು ಹೊರಡಿಸಿದೆ.

      2019 ರಲ್ಲಿ ಸಿಎಎ ಜಾರಿಗೆ ಬಂದಾಗ, ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಮತ್ತು 2020 ರ ಆರಂಭದಲ್ಲಿ ದೆಹಲಿಯಲ್ಲಿ ಘರ್ಷಣೆಗಳು ಮತ್ತು ಗಲಭೆಗಳಿಗೆ ಸಹ ಕಾರಣವಾಗಿದ್ದವು.

      ಸಿಎಎ ಪ್ರಕಾರ, 2014 ರ ಡಿಸೆಂಬರ್ 31 ರವರೆಗೆ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಬಂದ ಮುಸ್ಲಿಮೇತರ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಅಲ್ಪ ಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡಲಾಗುವುದು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ