ರಸ್ತೆಯುದ್ದಕ್ಕೂ ಘನತ್ಯಾಜ್ಯ : ಬಂಟ್ವಾಳ ಪುರಸಭೆ ಕೃತ್ಯ ಖಂಡನೆ- ಆಲ್ ಇಂಡಿಯಾ ಮುಸ್ಲಿಂ ಡೆವೆಲಪ್ಮೆಂಟ್ ಫೋರಂ

ರಸ್ತೆಯುದ್ದಕ್ಕೂ ಘನತ್ಯಾಜ್ಯ : ಬಂಟ್ವಾಳ ಪುರಸಭೆ ಕೃತ್ಯ ಖಂಡನೆ- ಆಲ್ ಇಂಡಿಯಾ ಮುಸ್ಲಿಂ ಡೆವೆಲಪ್ಮೆಂಟ್ ಫೋರಂ

ಬಂಟ್ವಾಳ : ಸಜೀಪನಡು ಕಂಚಿನಡ್ಕ ಪದವಿನಲ್ಲಿ ಪರಿಸರ ಹಾಗೂ ವಾಯುಮಾಲಿನ್ಯ ಇಲಾಖೆ ವಿಧಿಸಿರುವ ನಿಬಂಧನೆಗಳಿಗೆ ವಿರುದ್ಧವಾಗಿ ಘನತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಬಂಟ್ವಾಳ ಪುರಸಭೆಯ ಕ್ರಮವನ್ನು ಆಲ್ ಇಂಡಿಯಾ ಮುಸ್ಲಿಂ ಡೆವೆಲಪ್ಮೆಂಟ್ ಫೋರಂ ತೀವೃವಾಗಿ ಖಂಡಿಸಿದೆ.

      ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿದದ್ದೇ ಆದಲ್ಲಿ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ರಾಜ್ಯಸಮಿತಿ ಕಾರ್ಯಾಧ್ಯಕ್ಷ ಎಸ್. ಅಬೂಬಕ್ಕರ್  ಎಚ್ಚರಿಸಿದ್ದಾರೆ. ಸಜೀಪನಡು ಕಂಚಿನಡ್ಕ ಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಪರಿಸರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲಾ ನಿಬಂಧನೆಗಳನ್ನು ಧಿಕ್ಕರಿಸಿ ಊರ ನಾಗರಿಕರ ವಿರೋಧದ ನಡುವೆಯೂ ಅಧಿಕಾರ ಬಲ ಹಾಗೂ ಪೊಲೀಸ್ ಬಲ ಪ್ರಯೋಗವನ್ನು ಬಳಸಿ ಬಂಟ್ವಾಳ ಪುರಸಭೆಯ ಘನತ್ಯಾಜ್ಯವನ್ನು ತಂದು ಸುರಿಯುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಬಂಟ್ವಾಳ ಹಾಗೂ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರುಗಳ ಸಭೆಯನ್ನು ಕರೆದು ಚರ್ಚಿಸಲಾಗಿತ್ತು. ಉದ್ಧೇಶಿತ ಕಂಚಿನಡ್ಕ ಪದವಿನ ಘನತ್ಯಾಜ್ಯ ಘಟಕದಲ್ಲಿ ಒಣ ಕಸವನ್ನು ಮಾತ್ರ ಹಾಕಬೇಕೆಂದು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಗಳಿಗೆ ತಾಕೀತು ಕೂಡಾ ಮಾಡಲಾಗಿತ್ತು. ಇದೀಗ ಇವೆಲ್ಲವನ್ನು ಧಿಕ್ಕರಿಸಿ ಕಳೆದ ಎರಡು,ಮೂರು ತಿಂಗಳಿನಿಂದ ಕೊಳೆತು ನಾರುತ್ತಿರುವ ಘನತ್ಯಾಜ್ಯವನ್ನು ಕಂಚಿನಡ್ಕ ಪದವಿನಲ್ಲಿ ಸುರಿಯುತ್ತಿದ್ದಾರೆ. ಘನತ್ಯಾಜ್ಯ ವಿಲೇವಾರಿಯ ವಾಹನದಲ್ಲಿ ಬರುವ ಕೊಳೆತು ನಾರುತ್ತಿರುವ ಘನತ್ಯಾಜ್ಯವನ್ನು ಸಜೀಪನಡುವಿನಿಂದ ಕಂಚಿನಡ್ಕ ಪದವಿಗೆ ಹೋಗುವ ರಸ್ತೆಯುದ್ದಕ್ಕೂ ಚೆಲ್ಲಿಕೊಂಡು ಹೋಗಲಾಗುತ್ತಿದೆ. ಬಂಟ್ವಾಳ ಪುರಸಭೆಯ ಅಧಿಕಾರಿಗಳ ಈ ಬೇಜವಾಬ್ದಾರಿತನದಿಂದ ಊರಿನ ರಸ್ತೆಯುದ್ದಕ್ಕೂ ಚೆಲ್ಲಿದ ವಾಸನೆಯಿಂದ ಕೂಡಿದ ಘನತ್ಯಾಜ್ಯದಿಂದಾಗಿ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ನಡೆದಾಡಲು ಕಷ್ಟಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಬಂಟ್ವಾಳ ಪುರಸಭೆ ತಕ್ಷಣ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಅವರು ಆಗ್ರಹಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ