ರೈತರ ಪರ ಕಾಂಗ್ರೆಸ್; ರಾಜಭವನ ಚಲೋ ಇಂದು - ಡಿಕೆಶಿ

ಬೆಂಗಳೂರು: ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಮತ್ತು ರಾಜ್ಯ ಸರಕಾರದ ಜನ ವಿರೋಧಿ ನೀತಿಗಳಾದ ಕೊರೊನಾ ಪರಿಹಾರ ಹಣ ನೀಡದಿರುವುದು, ಬೆಲೆ ಏರಿಕೆ, ತೆರಿಗೆ ಏರಿಕೆಯಂಥ ಕ್ರಮಗಳನ್ನು ಪ್ರತಿಭಟಿಸಿ ಕಾಂಗ್ರೆಸ್ ಪಕ್ಷವು ಬುಧವಾರ (ಜ. 20) ರಾಜಭವನ ಚಲೋ ಹಮ್ಮಿ ಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ನಾವು ರೈತರ ಪರವಾಗಿ ನಿಲ್ಲುತ್ತೇವೆ. ಮೂರು ಕರಾಳ ಕಾಯ್ದೆ ಕಿತ್ತುಹಾಕಬೇಕು ಎಂಬುದು ರೈತರ ಬೇಡಿಕೆ. ಅವರ ಬೇಡಿಕೆ ಈಡೇರುವವರೆಗೆ ನಾವು ಅವರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ಎಲ್ಲಾ ವಾಹನಗಳು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಬಂದು, ಅಲ್ಲಿಂದ ನಮ್ಮ ಕಾರ್ಯಕರ್ತರು ಶಿಸ್ತಿನಿಂದ ಸ್ವಾತಂತ್ರ್ಯ ಉದ್ಯಾನವನಕ್ಕೆ ಹೋಗಲಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿದ್ದೇವೆ ಎಂದರು.
ಉದ್ಧವ್ ಠಾಕ್ರೆ ಹೇಳಿಕೆ ರಾಜಕೀಯ ಪ್ರೇರಿತ. ರಾಜ್ಯದ ಗಡಿ ವಿಚಾರ ಮುಗಿದ ಅಧ್ಯಾಯ. ಎಲ್ಲವೂ ಸರಿಯಾಗಿ ಇತ್ಯರ್ಥವಾಗಿದೆ. ರಾಜ್ಯ ಸರ್ಕಾರ ಅನಗತ್ಯವಾಗಿ ವಿವಾದವನ್ನು ಸೃಷ್ಟಿ ಮಾಡಿದೆ. ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ತೀರ್ಮಾನಿಸಿದ್ದೆ ಠಾಕ್ರೆ ಹೇಳಿಕೆಗೆ ಪ್ರೇರಣೆಯಾಗಿದೆ ಎಂದು ಶಿವಕುಮಾರ್ ಆರೋಪಿಸಿದರು.
ಸಚಿವ ಯೋಗೇಶ್ವರ್ ವಿರುದ್ಧ ಬಿಜೆಪಿ ನಾಯಕರು ಮಾಡಿರುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ಈ ವಿಚಾರದಲ್ಲಿ ಅವರು ಮಾಹಿತಿ ಇಟ್ಟುಕೊಂಡೇ ಮಾತನಾಡುತ್ತಿದ್ದಾರೆ. ನನಗೂ ಕೆಲವು ವಿಚಾರಗಳು ಗೊತ್ತಿವೆ. ಆ ಬಗ್ಗೆ ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ ಎಂದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ