ಮೇ 31ರಂದು ಎಸ್ಐಟಿ ವಿಚಾರಣೆಗೆ ಹಾಜರಾಗುವೆ: ವಿಡಿಯೊ ಹಂಚಿಕೊಂಡ ಪ್ರಜ್ವಲ್ ರೇವಣ್ಣ
ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಮೇ 31ರಂದು ಎಸ್ಐಟಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಹಲವು ದಿನಗಳಿಂದ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರು ಸೋಮವಾರ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಗಿದೆ ಎಂದು ದೂರಿದ್ದಾರೆ.
ಕುಟುಂಬದವರು, ಜೆಡಿಎಸ್ ಕಾರ್ಯಕರ್ತರು ಹಾಗೂ ರಾಜ್ಯದ ಜನರ ಕ್ಷಮೆ ಯಾಚಿಸುತ್ತಾ ಮಾತು ಆರಂಭಿಸಿರುವ ಪ್ರಜ್ವಲ್, 'ಲೋಕಸಭಾ ಚುನಾವಣೆಗೆ ಮತದಾನ ನಡೆದ ದಿನ (ಏಪ್ರಿಲ್ 26ರಂದು) ನನ್ನ ವಿರುದ್ಧ ಯಾವುದೇ ರೀತಿಯ ಪ್ರಕರಣಗಳು ಇರಲಿಲ್ಲ. ಎಸ್‌ಐಟಿಯೂ ರಚನೆಯಾಗಿರಲಿಲ್ಲ. ಏ. 26ರಂದು ನಾನು ವಿದೇಶಕ್ಕೆ ಹೋಗುವುದು ಮೊದಲೇ ನಿಗದಿಯಾಗಿತ್ತು. ಅದಾಗಿ ಮೂರ್ನಾಲ್ಕು ದಿನಗಳ ಬಳಿಕ ಯುಟ್ಯೂಬ್ ಮೂಲಕ ಈ (ಲೈಂಗಿಕ ದೌರ್ಜನ್ಯ ಪ್ರಕರಣದ) ವಿಚಾರ ತಿಳಿಯಿತು' ಎಂದಿದ್ದಾರೆ.
'ಪ್ರಕರಣ ಸಂಬಂಧ ಎಸ್‌ಐಟಿ ನೀಡಿರುವ ನೋಟಿಸ್‌ಗೆ ವಕೀಲರ ಮೂಲಕ 7 ದಿನ ಸಮಯಾವಕಾಶ ಕೋರಿದ್ದೆ. ಆದರೆ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರು ನನ್ನ ವಿರುದ್ಧ ಸಾರ್ವಜನಿಕ ವೇದಿಕೆಗಳಲ್ಲಿ ಪ್ರಚಾರ ಮಾಡಲಾರಂಭಿಸಿದರು. ನನ್ನ ವಿರುದ್ಧ ರಾಜಕೀಯ ಪಿತೂರಿ ಆರಂಭಿಸಿದರು. ಇದರಿಂದ ಖಿನ್ನತೆಗೊಳಗಾದ ನಾನು ಅಜ್ಞಾತವಾಗಿ ಉಳಿಯಬೇಕಾಯಿತು. ಅದಕ್ಕಾಗಿ ಕ್ಷಮೆ ಕೋರುತ್ತೇನೆ' ಎಂದು ಹೇಳಿದ್ದಾರೆ.
'ಹಾಸನದಲ್ಲಿಯೂ ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡಲಾಗುತ್ತಿದೆ. ರಾಜಕೀಯವಾಗಿ ನನ್ನನ್ನು ಕುಗ್ಗಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ನಾನು ಮತ್ತಷ್ಟು ಆಘಾತಕ್ಕೊಳಗಾದೆ. ಇದರ ಬಗ್ಗೆ ಯಾರೂ ತಪ್ಪು ತಿಳಿಯುವುದು ಬೇಡ' ಎಂದು ಮನವಿ ಮಾಡಿದ್ದಾರೆ.
'ಶುಕ್ರವಾರ (ಮೇ 31ರಂದು) ಬೆಳಗ್ಗೆ 10ಕ್ಕೆ ಖುದ್ದಾಗಿ ಎಸ್‌ಐಟಿ ಎದುರು ಹಾಜರಾಗುತ್ತೇನೆ. ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ. ಈ ಸುಳ್ಳು ಪ್ರಕರಣದಿಂದ ನ್ಯಾಯಾಲಯದ ಮೂಲಕವೇ ಹೊರಬರುತ್ತೇನೆ. ದೇವರು, ಜನರು ಹಾಗೂ ಕುಟುಂಬದ ಆಶೀರ್ವಾದ ನನ್ನ ಮೇಲಿರಲಿ' ಎಂದು ಕೋರಿದ್ದಾರೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ