ಮುಸ್ಲಿಮನ ದೋಸಾ ಅಂಗಡಿಗೆ ಹಿಂದೂ ದೇವರ ಹೆಸರು: ಹಲ್ಲೆ, ಓರ್ವನ ಬಂಧನ

ಮುಸ್ಲಿಮನ ದೋಸಾ ಅಂಗಡಿಗೆ ಹಿಂದೂ ದೇವರ ಹೆಸರು: ಹಲ್ಲೆ, ಓರ್ವನ ಬಂಧನ

ಮಥುರಾ: ಮಧ್ಯಪ್ರದೇಶದ ಇಂದೋರ್‌ನಲ್ಲಿ ಮುಸ್ಲಿಂ ಬಳೆ ಮಾರಾಟಗಾರನನ್ನು ಥಳಿಸಿದ ಕೆಲವೇ ದಿನಗಳ ನಂತರ, ಉತ್ತರ ಪ್ರದೇಶದ ಮಥುರಾ ಪಟ್ಟಣದಲ್ಲಿ ಮುಸ್ಲಿಂ ಯುವಕನೊಬ್ಬ ತನ್ನ 'ದೋಸೆ' ಅಂಗಡಿಗೆ ಹಿಂದೂ ದೇವರ ಹೆಸರಿಟ್ಟಿದ್ದಾನೆಂಬ ನೆಪದಲ್ಲಿ, ಆತನ ಮೇಲೆ ಹಲ್ಲೆ ನಡೆಸಲಾಗಿದೆ.

      ವರದಿಗಳ ಪ್ರಕಾರ, ಇರ್ಫಾನ್ ಎಂದು ಗುರುತಿಸಲ್ಪಟ್ಟ ಯುವಕ ಪಟ್ಟಣದ ವಿಕಾಸ್ ನಗರ ಪ್ರದೇಶದಲ್ಲಿ ದೋಸೆ ಅಂಗಡಿಯನ್ನು ತೆರೆದಿದ್ದರು.. ಅವನು ತನ್ನ ದೋಸ ಅಂಗಡಿಗೆ ಹಿಂದೂ ದೇವರಾದ 'ಶ್ರೀನಾಥಜೀ' (ಇದು ಶ್ರೀಕೃಷ್ಣನ ಇನ್ನೊಂದು ಹೆಸರು) ಎಂದು ಹೆಸರಿಟ್ಟಿದ್ದ.

     ಈ ಪ್ರದೇಶದ ಕೆಲವು ಯುವಕರು ಇರ್ಫಾನ್ ಅವರ ಅಂಗಡಿಯಾದ 'ಶ್ರೀನಾಥಜಿ ದೋಸೆ ಕಾರ್ನರ್'ಗೆ ಬಂದಿದ್ದರು. ಮತ್ತು ಆತ ಮುಸ್ಲಿಂ ಎಂದು ತಿಳಿದ ನಂತರ ಆತನ ಮೇಲೆ ಹಲ್ಲೆ ನಡೆಸಿ ಆತನ ಅಂಗಡಿಯ ಬ್ಯಾನರ್ ಹರಿದು ಹಾಕಿದ್ದಾರೆ ಎಂದು ವರದಿಗಳು ಹೇಳಿವೆ. ಈ ಕುರಿತಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿತ್ತು. ಘಟನೆಯು ಆಗಸ್ಟ್‌ 18ರಂದು ನಡೆದಿತ್ತು

      ಮುಸ್ಲಿಮನಾಗಿದ್ದರೂ ತನ್ನ ಅಂಗಡಿಗೆ ಹಿಂದೂ ದೇವರ ಹೆಸರಿಟ್ಟಿದ್ದಕ್ಕಾಗಿ ಯುವಕರು ನನ್ನ ಮೇಲೆ ಕೋಪಗೊಂಡಿದ್ದರು ಎಂದು ಇರ್ಫಾನ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

      ಈ ಬಗ್ಗೆ ಮಥುರಾದಲ್ಲಿ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರಕರಣ ದಾಖಲಾಗಿದೆ, ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ'' ತಪ್ಪಿತಸ್ಥರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ'' ಎಂದು ಅಧಿಕಾರಿ ತಿಳಿಸಿದ್ದಾರೆ. ಶ್ರೀಕಾಂತ್ ಎಂಬಾತನ್ನು ಬಂಧಿಸಲಾಗಿದ್ದು, ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಕೊತ್ವಾರಿ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಬಂಧಿತ ಶ್ರೀಕಾಂತ್ ಇಲ್ಲಿನ ಚಂದ್ರಲೋಕ ಬಡಾವಣೆಯ ನಿವಾಸಿ.

     ಘಟನೆಯ ನಂತರ, ಸಂತ್ರಸ್ತನ ಸಹಾಯಕರು ಸೇರಿಕೊಂಡು ಅಂಗಡಿಯ ಹೆಸರನ್ನು 'ಅಮೇರಿಕನ್ ದೋಸೆ ಕಾರ್ನರ್' ಎಂದು ಬದಲಾಯಿಸಿದ್ದಾರೆ.
     ಕೆಲವು ದಿನಗಳ ಹಿಂದೆ ಇಂದೋರ್ ಪಟ್ಟಣದಲ್ಲಿ ಕೆಲವು ಯುವಕರು ಬಳೆಗಳನ್ನು ಮಾರಾಟ ಮಾಡುತ್ತಿದ್ದ ಉತ್ತರಪ್ರದೇಶದ ಹರ್ಡೋಯ್ ಜಿಲ್ಲೆಯ ನಿವಾಸಿ ತಸ್ಲೀಮ್ ಅಲಿ ಮೇಲೆ ಹಲ್ಲೆ
ಮಾಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

      


 

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ