ಮೀಸಲಾತಿ ಮಿತಿ ಹೆಚ್ಚಳ: ಬಿಹಾರದ ಕ್ರಮ ರದ್ದುಗೊಳಿಸಿದ HC, ತಡೆ ನೀಡಲು SC ನಕಾರ

ಮೀಸಲಾತಿ ಮಿತಿ ಹೆಚ್ಚಳ: ಬಿಹಾರದ ಕ್ರಮ ರದ್ದುಗೊಳಿಸಿದ HC, ತಡೆ ನೀಡಲು SC ನಕಾರ

ನವದೆಹಲಿ: ಹಿಂದುಳಿದ ವರ್ಗ, ದಲಿತರು ಹಾಗೂ ಬುಡಕಟ್ಟು ಸಮುದಾಯದವರಿಗೆ ಈಗಿರುವ ಶೇ 50ರಷ್ಟು ಮೀಸಲಾತಿಯನ್ನು ಶೇ 65ಕ್ಕೆ ಹೆಚ್ಚಿಸುವ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ಪ್ರಸ್ತಾವವನ್ನು ತಿರಸ್ಕರಿಸಿದ್ದ ಪಟ್ನಾ ಹೈಕೋರ್ಟ್ ತೀರ್ಪಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

     ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾ. ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠದ ಎದುರು ಸಲ್ಲಿಕೆಯಾದ ಸುಮಾರು 10 ಅರ್ಜಿಗಳ ವಿಚಾರಣೆ ಸೋಮವಾರ ನಡೆಯಿತು.

     ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು, ಹೈಕೋರ್ಟ್‌ ತೀರ್ಪಿಗೆ ತಡೆ ನೀಡುವಂತೆ ಪೀಠವನ್ನು ಕೋರಿದರು. ಛತ್ತೀಸಗಡದ ಇಂಥದ್ದೇ ಪ್ರಕರಣದಲ್ಲಿ ಹೈಕೋರ್ಟ್‌ನ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದನ್ನು ಉಲ್ಲೇಖಿಸಿದರು.

      ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ‘ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು. ಆದರೆ ತಡೆ ನೀಡಲು ಸಾಧ್ಯವಿಲ್ಲ. ಸೆಪ್ಟೆಂಬರ್‌ನಲ್ಲಿ ಅರ್ಜಿಗಳ ವಿಚಾರಣೆ ನಡೆಸಲಾಗುವುದು’ ಎಂದರು.

       ರಾಜ್ಯ ಸರ್ಕಾರದ ಉಭಯ ಸದನಗಳಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡ ಮಸೂದೆಗೆ ಕಳೆದ ಜೂನ್ 20ರಂದು ಪಟ್ನಾ ಹೈಕೋರ್ಟ್‌ ತಡೆ ನೀಡಿತ್ತು. ಸಂವಿಧಾನದ ಆಶಯವಾದ ಸಮಾನತೆಗೆ ವಿರುದ್ಧವಾದ ನಡೆ ಇದು ಎಂದು ಅಭಿಪ್ರಾಯಪಟ್ಟಿದ್ದ ಪೀಠ, ಸರ್ಕಾರದ ಕ್ರಮವನ್ನು ರದ್ದುಗೊಳಿಸಿತ್ತು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ