ಮಸೀದಿಗಳಲ್ಲಿ ಧ್ವನಿವರ್ಧಕಗಳಿಗೆ ನಿರ್ಬಂಧ: ವಕ್ಫ್ ಮಂಡಳಿಯಿಂದ ಸುತ್ತೋಲೆ

ಮಸೀದಿಗಳಲ್ಲಿ ಧ್ವನಿವರ್ಧಕಗಳಿಗೆ ನಿರ್ಬಂಧ: ವಕ್ಫ್ ಮಂಡಳಿಯಿಂದ ಸುತ್ತೋಲೆ
republicday728
republicday468
republicday234

ಬೆಂಗಳೂರು: ದರ್ಗಾಗಳು ಮತ್ತು ಮಸೀದಿಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಧ್ವನಿವರ್ದಕಗಳನ್ನು ಬಳಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ. ಶಬ್ದ ಮಾಲಿನ್ಯ ಕಾನೂನು (ನಿಯಂತ್ರಣ ಮತ್ತು ನಿರ್ವಹಣೆ)2000ದ ಅಡಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ.

       ಹಗಲು ಹೊತ್ತಿನಲ್ಲೂ ಲೌಡ್ ಸ್ಪೀಕರ್‌ಗಳನ್ನು ಬಳಸುವಾಗ ಸುತ್ತಲಿನ ಗಾಳಿಯ ಗುಣಮಟ್ಟಕ್ಕೆ ಅನುಗುಣವಾಗಿ ಬಳಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದು, ಮಸೀದಿ ಮತ್ತು ದರ್ಗಾಗಳಲ್ಲಿ ಧ್ವನಿವರ್ದಕಗಳ ಸದ್ದು, ಜನರೇಟರ್‌ಗಳ ಸದ್ದು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾಡುವ ಭಾಷಣಗಳಿಂದ ಶಬ್ದದ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಜನರ ಆರೋಗ್ಯ ಮತ್ತು ಮಾನಸಿಕ ಸ್ವಾಸ್ಥ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ವಕ್ಫ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.
       ಮಸೀದಿಗಳಲ್ಲಿ ಲೌಡ್‌ಸ್ಪೀಕರ್‌ಗಳ ಬಳಕೆಯನ್ನು ಪ್ರಶ್ನಿಸಿ ಹಲವು ರಾಜ್ಯಗಳ ನ್ಯಾಯಾಲಯಗಳಲ್ಲಿ ವಿಷಯ ಪ್ರಸ್ತಾಪವಾಗಿದೆ. ಕೆಲವು ಮಸೀದಿಗಳು ನಿಯಮಗಳನ್ನು ಅತ್ಯಂತ ಗಂಭೀರವಾಗಿ ಪಾಲನೆ ಮಾಡುತ್ತಿವೆ. ಇಸ್ಲಾಂ ಕೂಡ ನಮ್ಮ ಸುತ್ತಲಿನ ಪರಿಸರದ ಜತೆ ಸಾಮರಸ್ಯದಿಂದ ಸಹಬಾಳ್ವೆ ನಡೆಸುವುದಕ್ಕೆ ಪರಮೋಚ್ಛ ಆದ್ಯತೆ ನೀಡಿದೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
      ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಎಲ್ಲ ಮಸೀದಿ ಮತ್ತು ದರ್ಗಾಗಳ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ. ಆಝಾನ್ ಮತ್ತು ಪ್ರಮುಖ ಸೂಚನೆಗಳನ್ನು ನೀಡಲು (ಮರಣ, ಸಮಾಧಿ ಮಾಡುವ ಸಮಯ, ಚಂದ್ರ ಕಾಣಿಸುವ ಮತ್ತು ಹಗಲು ಹೊತ್ತಿನಲ್ಲಿ) ಮಾತ್ರ ಲೌಡ್ ಸ್ಪೀಕರ್ ಬಳಸಬೇಕು. ಧಾರ್ಮಿಕ ಸ್ಥಳಗಳಲ್ಲಿ ನಮಾಜ್ ಮಾಡಲು ಜನ ಸೇರಿದಾಗ, ಶುಕ್ರವಾರದ ಕಾರ್ಯಕ್ರಮಗಳು, ಧಾರ್ಮಿಕ ಮತ್ತು ಸಾಮಾಜಿಕ ಹಾಗೂ ಸಾಂಸ್ಕೃತಿಕ, ಜ್ಞಾನಾಧಾರಿತ ಕಾರ್ಯಕ್ರಮಗಳಲ್ಲಿ ಲೌಡ್ ಸ್ಪೀಕರ್ ಬಳಸಬಹುದು. ಎಷ್ಟು ಪ್ರಮಾಣದಲ್ಲಿ ಶಬ್ದ ಬಳಸಬೇಕು ಎಂಬುದನ್ನು ಸ್ಥಳೀಯ ಪರಿಸರ ಅಧಿಕಾರಿಗಳ ಜತೆ ಸಮಾಲೋಚಿಸಿ ನಿಗದಿ ಮಾಡಬೇಕು. ಮಸೀದಿ ಮತ್ತು ದರ್ಗಾ ಸುತ್ತಮುತ್ತ ಪಟಾಕಿಗಳನ್ನು ಸುಡಬಾರದು. ಧಾರ್ಮಿಕ ಸ್ಥಳದ ಸುತ್ತಮುತ್ತ ಭಿಕ್ಷಾಟನೆಗೆ ಪ್ರೋತ್ಸಾಹ ನೀಡಬಾರದು. ಅಂತಹವರಿಗೆ ನೆರವು ನೀಡಲು ಸಾಂಸ್ಥಿಕ ಮಟ್ಟದಲ್ಲೇ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ