ಮುಂದುವರಿಯುತ್ತಿರುವ ಕೋವಿಡ್ ಅಟ್ಟಹಾಸ: ಭಾರತದ ವಿಮಾನಗಳಿಗೆ ಯುಎಇ ನಿರ್ಬಂಧ

ಮುಂದುವರಿಯುತ್ತಿರುವ ಕೋವಿಡ್ ಅಟ್ಟಹಾಸ: ಭಾರತದ ವಿಮಾನಗಳಿಗೆ ಯುಎಇ ನಿರ್ಬಂಧ
republicday728
republicday468
republicday234

ನವದೆಹಲಿ: ಕ್ಷಣ ಕ್ಷಣಕ್ಕೂ ಏರುತ್ತಿರುವ ಭಾರತದ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ ಭಾರತದಿಂದ ಯುಎಇಯಲ್ಲಿ ಇಳಿಯುವ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತಗೊಳಿಸಲು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ನಿರ್ಧರಿಸಿದೆ.

     ಏಪ್ರಿಲ್‌ 25ರಿಂದ ಆರಂಭಗೊಂಡು ಭಾರತದಿಂದ ಹೊರಡುವ ಎಲ್ಲ ವಿಮಾನಗಳ ಹಾರಾಟ ಕಾರ್ಯಾಚರಣೆಯನ್ನು ಹತ್ತು ದಿನಗಳವರೆಗೆ ರದ್ದುಪಡಿಸುವುದಾಗಿ ಯುಎಇ ಗುರುವಾರ ಪ್ರಕಟಿಸಿದೆ. ಭಾರತದಿಂದ ಅತಿ ಹೆಚ್ಚು ವಿಮಾನಗಳು ಯುಎಇ ಮಾರ್ಗದಲ್ಲಿ ಸಂಚರಿಸುತ್ತವೆ.
     ಭಾರತದ ಪ್ರಯಾಣಿಕರು ಬೇರೆ ರಾಷ್ಟ್ರಗಳ ಮೂಲಕ ಯುಎಇ ಪ್ರವೇಶಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಪ್ರಯಾಣಿಕರು ಇತರೆ ರಾಷ್ಟ್ರಗಳಲ್ಲಿ 14 ದಿನಗಳು ತಂಗಿದ್ದರೆ, ನಂತರದಲ್ಲಿ ಯುಎಇ ಪ್ರವೇಶಕ್ಕೆ ಅವಕಾಶ ಸಿಗಲಿದೆ.
     ಉಭಯ ರಾಷ್ಟ್ರಗಳ ನಡುವೆ ಕಾರ್ಗೊ ವಿಮಾನಗಳು ಹಾಗೂ ಯುಎಇನಿಂದ ಭಾರತಕ್ಕೆ ಬಂದಿಳಿಯುವ ವಿಮಾನಗಳ ಮೇಲೆ ನಿರ್ಬಂಧ ಇರುವುದಿಲ್ಲ. ಯುಎಇ ನಾಗರಿಕರು, ರಾಜತಾಂತ್ರಿಕ ಪ್ರತಿನಿಧಿಗಳು, ಸರ್ಕಾರದ ಪ್ರತಿನಿಧಿಗಳು ಹಾಗೂ ಉದ್ಯಮಿಗಳ ವಿಮಾನಗಳಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.
     ಆ ಎಲ್ಲ ವರ್ಗದ ಪ್ರಯಾಣಿಕರು ಯುಎಇಗೆ ಬಂದಿಳಿಯುವ ದಿನದಂದು ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಕಡ್ಡಾಯವಾಗಿ 10 ದಿನಗಳು ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ ಎಂದು ಯುಎಇ ಆಡಳಿತ ತಿಳಿಸಿದೆ.
     ಕೋವಿಡ್ ಪ್ರಕರಣ ಹಿನ್ನೆಲೆಯಲ್ಲಿ ಭಾರತದಿಂದ ದೇಶಕ್ಕೆ ಸಂಪರ್ಕ ಕಲ್ಪಿಸುವ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸಲು ಆಸ್ಟ್ರೇಲಿಯಾ ಸರ್ಕಾರ ನಿರ್ಧರಿಸಿದೆ. ಅಂತರರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಿಸಿ ಭಾರತವನ್ನು ಬ್ರಿಟನ್‌ ಕೆಂಪುಪಟ್ಟಿಗೆ ಸೇರಿಸಿದ ಹಿಂದೆಯೇ, ಲಂಡನ್‌ನ ಅತಿದೊಡ್ಡ ವಿಮಾನನಿಲ್ದಾಣ 'ಹೀಥ್ರೂ' ಆಡಳಿತ ವರ್ಗವು, ಭಾರತದಿಂದ ಹೆಚ್ಚುವರಿ ವಿಮಾನಗಳ ಆಗಮನಕ್ಕೆ ಅವಕಾಶವನ್ನು ನಿರಾಕರಿಸಿದೆ. ಕೆಂಪುಪಟ್ಟಿಗೆ ಸೇರಿಸಿದ ಆದೇಶ ಶುಕ್ರವಾರದಿಂದ ಜಾರಿಗೆ ಬರಲಿದೆ. ಏರ್‌ ಇಂಡಿಯಾ ಭಾರತ ಮತ್ತು ಬ್ರಿಟನ್‌ ನಡುವಿನ ಹಾರಾಟವನ್ನು ಏಪ್ರಿಲ್‌ 24ರಿಂದ ಏಪ್ರಿಲ್‌ 30ರ ವರೆಗೂ ರದ್ದು ಪಡಿಸಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ