ಮದರಸಾಗಳಲ್ಲಿ ತಾಲಿಬಾನಿಗಳು ಸೃಷ್ಠಿಯಾಗುತ್ತಿದ್ದಾರೆ - ಸಿಟಿ.ರವಿ

ಮದರಸಾಗಳಲ್ಲಿ ತಾಲಿಬಾನಿಗಳು ಸೃಷ್ಠಿಯಾಗುತ್ತಿದ್ದಾರೆ - ಸಿಟಿ.ರವಿ

ಕಲಬುರ್ಗಿ: ಓಲೈಕೆ ರಾಜಕಾರಣದಿಂದಾಗಿ ದೇಶದ ಮದರಸಾಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಿದ್ದು, ದೇಶದಲ್ಲಿ ಮತ್ತಷ್ಟು ಪಾಕಿಸ್ತಾನಗಳು ಸೃಷ್ಟಿಯಾಗುವ ಸಂಭವವವಿದೆ. ಎಲ್ಲಿಯವರೆಗೆ ಹಿಂದುತ್ವ ಆಧಾರಿತ ರಾಜಕಾರಣ ಅಧಿಕಾರದಲ್ಲಿರುತ್ತದೋ ಅಲ್ಲಿಯವರೆಗೆ ದೇಶದಲ್ಲಿ ಕೆಲವೇ ಲಕ್ಷದಷ್ಟಿರುವ ಪಾರ್ಸಿಗಳು, ಯಹೂದಿಗಳಂಥವರು ನೆಮ್ಮದಿಯಿಂದ ಇರುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

      ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲಿಬಾನಿಗಳು ಯಾವ ಗ್ರಂಥವನ್ನು ಓದಿ ಭಯೋತ್ಪಾದಕ ಕೃತ್ಯಕ್ಕಿಳಿದಿದ್ದಾರೆ ಎಂಬುದನ್ನು ನೋಡಿದರೆ ಆ ಗ್ರಂಥದ ದುಷ್ಟ ಪ್ರೇರಣೆ ಏನು ಎಂಬುದು ಅರ್ಥವಾಗುತ್ತದೆ. ಹಿಂದುತ್ವದ ರಾಜಕಾರಣ ದೇಶದಲ್ಲಿ ಇರುವವರೆಗೂ ಬುದ್ಧ, ಬಸವಣ್ಣನವರ ಚಿಂತನೆಗಳು, ಅಂಬೇಡ್ಕರ್‌ ಅವರ ವಾರಸುದಾರಿಕೆ ಉಳಿಯುತ್ತದೆ’ ಎಂದರು.

      ಈ ದೇಶದ ಧರ್ಮಗ್ರಂಥಗಳನ್ನು ಓದಿದವರು ಯಾರೂ ತಾಲಿಬಾನಿಗಳಾಗುವುದಿಲ್ಲ. ಬದಲಾಗಿ ಅವರೆಲ್ಲ ದಾರ್ಶನಿಕರಾಗಿದ್ದಾರೆ. ದೇಶಭಕ್ತರಾಗಿದ್ದಾರೆ. ನಮ್ಮ ಮೂಲ ನಂಬಿಕೆಯಲ್ಲಿಯೇ ಸಮಭಾವವಿದೆ. ಸಮಭಾವ ಹೊಂದಿದ ಜನ ಇದ್ದಾಗ ಮಾತ್ರ ಸಮಾನತೆ, ಮಹಿಳಾ ಸ್ವಾತಂತ್ರ್ಯ ಇರುತ್ತದೆ. ಇಲ್ಲದಿದ್ದರೆ ಅಫ್ಗಾನಿಸ್ತಾನದ ಸ್ಥಿತಿ ನಮಗೂ ಬರುತ್ತದೆ’ ಎಂದು ಹೇಳಿದರು.

      ಕಾಂಗ್ರೆಸ್‌ನವರು ದೇಶ ಮೊದಲು ಎಂಬ ತತ್ವವನ್ನು ಮರೆತು ರಾಜಕಾರಣ ಮಾಡುತ್ತಿದ್ದು, ತಾಲಿಬಾನ್‌ ಜೊತೆಗೆ ದೇಶಭಕ್ತ ಸಂಘಟನೆಯನ್ನು ಹೋಲಿಕೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಅಧಿಕಾರ ರಾಜಕಾರಣಕ್ಕಾಗಿ ಯಾರೊಂದಿಗೆ ಬೇಕಾದರೂ ಕೈಜೋಡಿಸಿ ಸರ್ಕಾರ ರಚನೆ ಮಾಡುತ್ತಾರೆ ಎಂದರು.

      ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯೂ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಅದು ಪಕ್ಷದ ತಂತ್ರಗಾರಿಕೆಯಾಗಿತ್ತು. ಪಿಡಿಪಿಯೊಂದಿಗೆ ಜೊತೆಗೂಡಿ ಸರ್ಕಾರ ನಡೆಸಿದರೂ ದೇಶದ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ 370 ಕಲಂ ರದ್ದತಿಯನ್ನು ಸಾಧಿಸಿತು ಎಂದು ಸಮರ್ಥಿಸಿಕೊಂಡರು.

      ರಾಜ್ಯದಲ್ಲಿ ಬೇರೆ ಪಕ್ಷದಿಂದ ಬಂದು ಸರ್ಕಾರ ರಚನೆಗೆ ಸಹಕಾರ ನೀಡಿದವರಿಗೆ ಸಚಿವ ಸ್ಥಾನ ಕೊಡಬೇಕಿದ್ದುದರಿಂದ ಕಲಬುರ್ಗಿ, ಯಾದಗಿರಿ, ವಿಜಯಪುರ, ರಾಯಚೂರು, ಚಾಮರಾಜನಗರ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲು ಸಾಧ್ಯವಾಗಿಲ್ಲ. ನರೇಂದ್ರ ಮೋದಿ ಅವರು ಮುಕ್ತವಾಗಿ ತಮ್ಮ ಸಚಿವ ಸಂಪುಟವನ್ನು ರಚಿಸಿಕೊಂಡಂತೆ ರಾಜ್ಯದಲ್ಲಿ ಸಂಪುಟ ವಿಸ್ತರಣೆ ಸಾಧ್ಯವಾಗಿಲ್ಲ ಎಂದು ಒಪ್ಪಿಕೊಂಡರು.

      ದ್ವೇಷ ಹುಟ್ಟಿಸುವುದರಲ್ಲಿ ಎತ್ತಿದ ಕೈ ಎನಿಸಿಕೊಂಡ ಬಿಜೆಪಿಯ ಕೆಲ ನೇತಾರರಲ್ಲಿ ಸಿಟಿ.ರವಿ ಕೂಡಾ ಒಬ್ಬರಾಗಿದ್ದಾರೆ. 

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ