ಮತ್ತೆ ರೈತರ ಪರ ವರುಣ್‌ ಗಾಂಧಿ: ಹೋರಾಟದಲ್ಲಿ ಮೃತ ಪಟ್ಟ ಕುಟುಂಬಗಳಿಗೆ ಒಂದು ಕೋಟಿ ಪರಿಹಾರಕ್ಕೆ ಒತ್ತಾಯ

ಮತ್ತೆ ರೈತರ ಪರ ವರುಣ್‌ ಗಾಂಧಿ: ಹೋರಾಟದಲ್ಲಿ ಮೃತ ಪಟ್ಟ ಕುಟುಂಬಗಳಿಗೆ ಒಂದು ಕೋಟಿ ಪರಿಹಾರಕ್ಕೆ ಒತ್ತಾಯ

ನವದೆಹಲಿ:‌ ‌ಬಿಜೆಪಿ ಸಂಸದ ವರುಣ್‌ ಗಾಂಧಿ ಮತ್ತೆ ರೈತರ ಪರ ಧ್ವನಿ ಎತ್ತಿದ್ದು, ಬೆಳೆಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯ ಖಾತ್ರಿಯನ್ನು ಶಾಸನಬದ್ಧಗೊಳಿಸಬೇಕು ಎಂಬ ರೈತರ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸದ ವರುಣ್ ಗಾಂಧಿ ಮನವಿ ಮಾಡಿದ್ದಾರೆ. ಈ ಬೇಡಿಕೆ ಈಡೇರದಿದ್ದರೆ ರೈತರ ಪ್ರತಿಭಟನೆ ಕೊನೆಗೊಳ್ಳುವುದಿಲ್ಲ ಎಂದೂ ಅವರು ಹೇಳಿದ್ದಾರೆ.

      ಈ ಕುರಿತು ಪ್ರಧಾನಿಯವರಿಗೆ ಪತ್ರ ಬರೆದಿರುವ ಅವರು, ಕೇಂದ್ರ ಸಚಿವ ಅಜಯ್‌ ಮಿಶ್ರಾ ಹೆಸರನ್ನು ಉಲ್ಲೇಖಿಸದೇ, ಲಖಿಂಪುರ– ಖೇರಿಯಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

      ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಿದ ಮೋದಿ ಅವರಿಗೆ ಧನ್ಯವಾದ ಹೇಳಿರುವ ಅವರು, ಮೊದಲೇ ಈ ನಿರ್ಧಾರ ತೆಗೆದುಕೊಂಡಿದ್ದರೆ, ಅನೇಕ ಅಮಾಯಕರ ಜೀವ ಉಳಿಯುತ್ತಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

      ಎಂಎಸ್‌ಪಿಯನ್ನು ಶಾಸನಬದ್ಧಗೊಳಿಸಬೇಕು ಎಂಬ ರೈತರ ಬೇಡಿಕೆಯನ್ನು ಒಪ್ಪಿಕೊಳ್ಳುವ ಅಗತ್ಯವನ್ನು ಪತ್ರದಲ್ಲಿ ಒತ್ತಿ ಹೇಳಿರುವ ವರುಣ್, ಈ ಬೇಡಿಕೆ ಈಡೇರದೇ ರೈತರ ಚಳವಳಿ ಕೊನೆಗೊಳ್ಳುವುದಿಲ್ಲ. ಈಗಾಗಲೇ ಅವರಲ್ಲಿ ಈ ಬಗ್ಗೆ ವ್ಯಾಪಕವಾದ ಆಕ್ರೋಶವಿದೆ. ಅದು ಒಂದಲ್ಲ ಒಂದು ರೂಪದಲ್ಲಿ ಹೊರಹೊಮ್ಮುತ್ತಲೇ ಇರುತ್ತದೆ. ಆದ್ದರಿಂದ ರೈತರ ಬೇಡಿಕೆ ಈಡೇರಿಸಿ ಎಂದು ಅವರು ಮನವಿ ಮಾಡಿದ್ದಾರೆ.

     ಈ ರೈತ ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬದವರಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ಒದಗಿಸುವಂತೆ ಆಗ್ರಹಿಸಿರುವ ಅವರು, ಪ್ರತಿಭಟನಾ ನಿರತ ರೈತರ ಮೇಲೆ ರಾಜಕೀಯ ಪ್ರೇರಣೆಯಿಂದ ಹೂಡಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ