ಮುಡಾ ಹಗರಣ: 'ಬಿಜೆಪಿಯವರು ಬ್ಲ್ಯಾಕ್‌ಮೇಲ್ ತಂತ್ರ ಮಾಡ್ತಿದ್ದಾರೆ'- ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣವನ್ನು ಬಿಜೆಪಿಯವರು ಸೃಷ್ಟಿಸುತ್ತಿದ್ದಾರೆ. ಬಿಜೆಪಿಯವರು ಬ್ಲ್ಯಾಕ್ ಮೇಲ್ ತಂತ್ರ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಾವತ್ತೂ ನ್ಯಾಯದ ಪರವಾಗಿಲ್ಲ. ಮುಡಾ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ಹೇಳಿ? ನ್ಯಾಯಾಂಗ ತನಿಖೆ ಅನುಮಾನದಿಂದ ನೋಡಿದರೆ ಅರ್ಥ ಇದೆಯಾ? ಬಿಜೆಪಿ ಅವಧಿಯಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಗೊತ್ತಾ? ಒಂದು ಪ್ರಕರಣವನ್ನಾದರೂ ನ್ಯಾಯಾಂಗ ತನಿಖೆ ಮಾಡಿಸಿದರಾ ಎಂದು ಪ್ರಶ್ನಿಸಿದರು.
ಪುಟ್ಟಯ್ಯ ಸಿಐಟಿಬಿ ಅಧ್ಯಕ್ಷರಾಗಿದ್ದಾಗ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಕುಟುಂಬಕ್ಕೆ ಎಷ್ಟು ನಿವೇಶನ ಬರೆಸಿಕೊಂಡಿದ್ದಾರೆ ಪಟ್ಟಿ ಕೊಡಲಾ?. ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ 40 ವರ್ಷದ ಹಿಂದೆ ಮುಡಾ ಸೈಟ್ ಪಡೆದಿದ್ದಾರೆ. ಅದರ ಸ್ವಾಧೀನ ಪತ್ರವೂ ಪಡೆದುಕೊಂಡಿದ್ದಾರೆ. ಈಗ ಇಲ್ಲ ಎಂದು ಸುಳ್ಳು ಹೇಳಿದರೇ ಹೇಗೆ? ಇವರೆಲ್ಲ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಮುಡಾ ಅರೋಪ ವಿಚಾರದಲ್ಲಿ ನನಗೆ ಯಾವ ಬೇಸರವೂ ಆಗಿಲ್ಲ. ಯಾಕೆಂದರೆ ನಾನು ತಪ್ಪೇ ಮಾಡಿಲ್ಲ ಎನ್ನುವುದಾದರೇ ಬೇಸರ ಏಕೆ ಆಗುತ್ತೆ? 40 ವರ್ಷದ ರಾಜಕಾರಣದಲ್ಲಿ ಇಂತಹ ಆರೋಪ ಬಹಳ ಬಂತು. ಇದನ್ನು ರಾಜಕೀಯವಾಗಿ ಎದುರಿಸುತ್ತೇನೆ ಎಂದು ತಿಳಿಸಿದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ