ಮಂಜೇಶ್ವರ: ನಾಮಪತ್ರ ಹಿಂಪಡೆಯಲು 15 ಲಕ್ಷ ಆಮಿಷ ಒಡ್ಡಿದ್ದ ಬಿಜೆಪಿ

ಮಂಜೇಶ್ವರದ ಅಭ್ಯರ್ಥಿಯಾಗಿದ್ದ ಬಿಜೆಪಿಯ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್‌ ವಿರುದ್ಧದ ನಾಮಪತ್ರ ಹಿಂಪಡೆಯುವಂತೆ ಬಿಎಸ್‌ಪಿ ಅಭ್ಯರ್ಥಿ ಕೆ.ಸುಂದರ್ ಅವರಿಗೆ ₹15 ಲಕ್ಷ ಆಮಿಷವೊಡ್ಡಿದ ಸಂಗತಿ ಬಯಲಾಗಿದೆ.

ಮಂಜೇಶ್ವರ: ನಾಮಪತ್ರ ಹಿಂಪಡೆಯಲು 15 ಲಕ್ಷ ಆಮಿಷ ಒಡ್ಡಿದ್ದ ಬಿಜೆಪಿ

ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಪಾರ ಪ್ರಮಾಣದ ಕಪ್ಪುಹಣವನ್ನು ಬಳಸಿದೆ ಎಂಬ ಆರೋಪ ಕೇಳಿಬಂದಿದೆ.

      ಮಂಜೇಶ್ವರದ ಅಭ್ಯರ್ಥಿಯಾಗಿದ್ದ ಬಿಜೆಪಿಯ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್‌ ವಿರುದ್ಧದ ನಾಮಪತ್ರ ಹಿಂಪಡೆಯುವಂತೆ ಬಿಎಸ್‌ಪಿ ಅಭ್ಯರ್ಥಿ ಕೆ.ಸುಂದರ್ ಅವರಿಗೆ ₹15 ಲಕ್ಷ ಆಮಿಷವೊಡ್ಡಿದ ಸಂಗತಿ ಬಯಲಾಗಿದೆ.
ಈ ಆರೋಪಗಳನ್ನು ಆಧಾರರಹಿತವೆಂದು ಬಿಜೆಪಿ ತಳ್ಳಿಹಾಕಿದೆ. ಇದು ಪಕ್ಷದ ವಿರುದ್ಧದ ಪಿತೂರಿ ಎಂದು ಅದು ಹೇಳಿಕೊಂಡಿದೆ.

      ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರ ಮಾರ್ಚ್ 22 ರಂದು ತಮ್ಮ ನಾಮಪತ್ರ ಹಿಂಪಡೆದಿದ್ದರು. ಬಿಎಸ್‌ಪಿ ಅಭ್ಯರ್ಥಿ ಕೆ. ಸುಂದರ ಅವರ ಹೆಸರು ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್‌ ಅವರ ಹೆಸರಿನೊಂದಿಗೆ ತಾಳೆಯಾಗುತ್ತಿತ್ತು. ಕೆ. ಸುಂದರ ಅವರ ಉಮೇದುವಾರಿಕೆ ಹಿಂತೆಗೆತದ ಹೊರತಾಗಿಯೂ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್‌ ಚುನಾಣೆಯಲ್ಲಿ ಸೋಲುಂಡಿದ್ದರು.

      ಇವರಿಬ್ಬರ ಹೆಸರುಗಳ ನಡುವಿನ ಸಾಮ್ಯತೆಯಿಂದಾಗಿ 2016 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಮುಸ್ಲಿಂ ಲೀಗಿನ ಪಿ.ಬಿ.ಅಬ್ದುಲ್‌ ರಝಾಕ್ ವಿರುದ್ಧ ಕೇವಲ 89 ಮತಗಳ ಅಂತರದಲ್ಲಿ ಸೋತಿತ್ತು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಂದರ 467 ಮತಗಳನ್ನು ಪಡೆದಿದ್ದರು.

      ನನ್ನ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವಂತೆ ಬಿಜೆಪಿ ನಾಯಕರು ನನ್ನಲ್ಲಿ ವಿನಂತಿಸಿದರು. ನಾನು 15 ಲಕ್ಷ ರೂ. ಕೇಳಿದ್ದೆ. ಆದರೆ ಅವರು ನನಗೆ ಕೇವಲ ₹2.5 ಲಕ್ಷ ಹಣ, ₹15,000 ಮೌಲ್ಯದ ಮೊಬೈಲ್ ಫೋನ್ ನೀಡಿದರು. ಬಿಜೆಪಿ ಗೆದ್ದಿದ್ದೇ ಆದರೆ, ಕರ್ನಾಟಕದಲ್ಲಿ ಒಂದು ವೈನ್ ಶಾಪ್‌ಗೆ ಅವಕಾಶ ಕೊಡಿಸಬೇಕಾಗಿ ಕೇಳಿದ್ದೆ. ಆದರೆ ಚುನಾವಣೆ ಮುಗಿದ ನಂತರ ಯಾರೂ ನನ್ನತ್ತ ಬರಲಿಲ್ಲ, ಎಂದು ಕೆ.ಸುಂದರ ಹೇಳಿದ್ದಾರೆ.

      ಚುನಾವಣೆಯಲ್ಲಿ ಉಮೇದುವಾರಿಕೆ ಹಿಂದಕ್ಜೆ ಪಡೆದಿದ್ದ ಬಿಎಸ್‌ಪಿಯ ಸುಂದರ, ನಂತರ ಬಿಜೆಪಿಗೆ ಸೇರಿದ್ದರು. ಕೇರಳದಲ್ಲಿ ಬಿಜೆಪಿ ಗೆಲ್ಲುವ ಭರವಸೆ ಹೊಂದಿದ್ದ ಕ್ಷೇತ್ರಗಳಲ್ಲಿ ಮಂಜೇಶ್ವರ ಕೂಡ ಒಂದಾಗಿತ್ತು.

      ಆದರೆ ಬಿಜೆಪಿ ಈ ಆರೋಪಗಳನ್ನು ತಳ್ಳಿಹಾಕಿದೆ. ನಾಮಪತ್ರ ಹಿಂತೆಗೆದುಕೊಳ್ಳಲು ಸುಂದರ ಅವರಿಗೆ ನಾವೂ ಏನನ್ನೂ ಕೊಟ್ಟಿಲ್ಲ. ಅವರು ತಮ್ಮ ಉಮೇದುವಾರಿಕೆಯನ್ನು ಏಕೆ ಹಿಂತೆಗೆದುಕೊಂಡರು ಎಂಬುದನ್ನು ಆಗಲೇ ಬಹಿರಂಗವಾಗಿ ವಿವರಿಸಿದ್ದರು. ಈಗ ಅವರು ತಮ್ಮ ನಿಲುವನ್ನು ಬದಲಾಯಿಸಿಕೊಂಡಿದ್ದಾರೆ. ಅವರ ಮೇಲೆ ಯಾರೋ ಒತ್ತಡ ಹೇರುತ್ತಿರುವಂತೆ ಕಾಣುತ್ತಿದೆ. ಒತ್ತಡದಿಂದಾಗಿ ಅವರು ಈ ಆರೋಪಗಳನ್ನು ಮಾಡಿದ್ದಾರೆ. ಸಿಪಿಐ (ಎಂ) ಮತ್ತು ಮುಸ್ಲಿಂ ಲೀಗ್ ಮೇಲೆ ನಮಗೆ ಅನುಮಾನವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಹೇಳಿದ್ದಾರೆ.

      ಈ ಮಧ್ಯೆ, 2021 ರ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದ ಸಿಪಿಐ (ಎಂ) ಅಭ್ಯರ್ಥಿ ವಿ.ವಿ.ರಮೇಶನ್ ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥರನ್ನು ಸಂಪರ್ಕಿಸಿದ್ದು, ಆರೋಪದ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಕೋರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪ್ರಮಾಣದ ಕಪ್ಪು ಹಣವನ್ನು ಬಳಸಿದೆ ಎಂದು ಸಿಪಿಐ (ಎಂ) ಆರೋಪಿಸಿದೆ.

       ಚುನಾವಣೆಯಲ್ಲಿ ಮುಸ್ಲಿಂ ಲೀಗಿನ ಎ.ಕೆ.ಎಂ. ಅಶ್ರಫ್ 65,758 ಮತ, ಬಿಜೆಪಿಯ ಸುರೇಂದ್ರನ್ 65,013 ಮತ, ಸಿಪಿಐಎಂ ರಮೇಶನ್ 40,639 ಮತಗಳನ್ನು ಪಡೆದಿದ್ದರು. ಮುಸ್ಲಿಂ ಲೀಗಿನ ಎಕೆಎಂ ಅಶ್ರಫ್‌ 745 ಮತಗಳಿಂದ ಜಯಿಸಿದ್ದರು

      ಕೋಟಕರ ಹವಾಲ ಹಣ ಪ್ರಕರಣದ ತನಿಖೆ ಮುಂದುವರಿಯುತ್ತಿದ್ದಂತೆ ಅದು ಬಿಜೆಪಿಯ ರಾಜ್ಯಾಧ್ಯಕ್ಷ ಸುರೇಂದ್ರರನ್ನು ಪಕ್ಷದಲ್ಲಿ ಏಕಾಂಗಿಯನ್ನಾಗಿಸುತ್ತಿದೆ. ಪಕ್ಷದೊಳಗೆ ಸುರೇಂದ್ರರ ಸರ್ವಾಧಿಕಾರವನ್ನು ಎದುರಿಸುತ್ತಿದ್ದ ವಿಭಾಗವು ಈ ಅವಕಾಶವನ್ನು ಸರಿಯಾಗಿ ಉಪಯೋಗಿಸಲು ಪ್ಯತ್ನಗಳನ್ನೂ ನಡೆಸುತ್ತಿದೆ. ಹಣ ವರ್ಗಾವಣೆ ಆರೋಪದಲ್ಲಿ ಕೇಂದ್ರ ನಾಯಕತ್ವವೂ ಆರೋಪ ಎದುರಿಸುತ್ತಿರುವುದರಿಂದ ಮುಖ ಉಳಿಸಲು ಸುರೇಂದ್ರನ್  ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕುವ ಸಾಧ್ಯತೆಯೂ ಇದೆ. ಈ ಮಧ್ಯೆ ಸಿ.ಕೆ. ಜಾನುವಿಗೆ ಹಣಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಆಡಿಯೋ ಕ್ಲಿಪ್ಪುಗಳು ಹೊರಬಂದಿತ್ತು. ಇದೀಗ ವಾಟ್ಸಪ್ ಚಾಟಿಂಗ್ ಕೂಡಾ ಹೊರಬರುವುದರೊಂದಿಗೆ ಸುರೇಂದ್ರ ತನ್ನನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗದೆ ಗೊಂದಲದಲ್ಲಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ