ಮಂಗಳೂರು : ತಾಯಿಯನ್ನು ರಕ್ಷಿಸಿದ ವಿದ್ಯಾರ್ಥಿನಿಗೆ ಜಿಲ್ಲಾಡಳಿತದಿಂದ ಸನ್ಮಾನ

ಮಂಗಳೂರು : ಆಟೋರಿಕ್ಷಾದಡಿಗೆ ಬಿದ್ದ ಅಮ್ಮನನ್ನು ರಕ್ಷಿಸಲು ಆಟೋರಿಕ್ಷಾವನ್ನೇ ಮೇಲಕ್ಕೆತ್ತಿ ಶೌರ್ಯ ಮೆರೆದ ಕಿನ್ನಿಗೋಳಿಯ ವೈಭವಿಗೆ ಇದೀಗ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಬಾಲಕಿಯ ಶೌರ್ಯವನ್ನು, ಸಕಾಲಿಕ ಪ್ರಜ್ಞೆಯನ್ನು ಕೊಂಡಾಡಿದ್ದರು.
ಜೊತೆಗೆ ಜಿಲ್ಲಾಡಳಿತವೂ ಬಾಲಕಿಯ ಕಾರ್ಯ ಮೆಚ್ಚಿಕೊಂಡಿದೆ. ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಂಗಳವಾರ(ಸೆ.10) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವೈಭವಿಯನ್ನು ಸನ್ಮಾನಿಸಿದರು. ಪೇಟ, ಹಾರ ತೊಡಿಸಿ ಸನ್ಮಾನಿಸಿದರಲ್ಲದೆ, ಬಾಲಕಿಯ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹೇಮಲತಾ, ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಮತ್ತು ವೈಭವಿಯ ಪಾಲಕರು ಉಪಸ್ಥಿತರಿದ್ದರು.
ಪೊಲೀಸ್ ಕಮಿಷನರ್ ಸನ್ಮಾನ : ಬಾಲಕಿ ವೈಭವಿಯ ಕಾರ್ಯವನ್ನು ಮೆಚ್ಚಿರುವ ಕಮಿಷನರ್ ಅನುಪಮ್ ಅಗರ್‌ವಾಲ್ ಅವರೂ ಪ್ರಶಂಸಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಕಚೇರಿ ವತಿಯಿಂದ ಕಮಿಷನರ್ ಅನುಪಮ್ ಅಗರ್‌ವಾಲ್ ಅವರು ಬಾಲಕಿಯ ಸಮಯಪ್ರಜ್ಞೆಯನ್ನು ಕೊಂಡಾಡಿದರಲ್ಲದೇ, ಆಕೆಗೆ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದ್ದಾರೆ.
ಏನಿದು ಘಟನೆ?: ಸೆಪ್ಟೆಂಬರ್ 6ರಂದು ಸಂಜೆ ಕಿನ್ನಿಗೋಳಿ ರಾಮನಗರ ಎಂಬಲ್ಲಿ ಚೇತನಾ ಯಾನೆ ಶ್ವೇತಾ ಎಂಬವರು ರಸ್ತೆ ದಾಟುತ್ತಿದ್ದಾಗ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದಿತ್ತು. ಆಟೋರಿಕ್ಷಾ ಪಲ್ಟಿಯಾಗಿ ಚೇತನ ಅವರು ರಿಕ್ಷಾದಡಿಗೆ ಬಿದ್ದಾಗ ಅಲ್ಲೇ ಇದ್ದ 13 ವರ್ಷದ ಮಗಳು ವೈಭವಿ ಯಾರ ಸಹಾಯಕ್ಕೂ ಕಾಯದೇ, ತಕ್ಷಣ ಕಾರ್ಯಪ್ರವೃತ್ತಳಾಗಿ ಆಟೋವನ್ನು ಎತ್ತಿ ಅಮ್ಮನ ಪ್ರಾಣ ಉಳಿಸಿದ್ದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ