ಭಾರತಕ್ಕೆ T20 ವಿಶ್ವಕಪ್ ಚಾಂಪಿಯನ್ ಪಟ್ಟ: ದಿಗ್ಗಜರ ನಿವೃತ್ತಿ

ಬಾರ್ಬಡೋಸ್: 2024ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ರೋಚಕವಾಗಿ ಮಣಿಸುವ ಮೂಲಕ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.
ಇದರ ಬೆನ್ನಲ್ಲೇ ಭಾರತದ ಇಬ್ಬರು ದಿಗ್ಗಜ ಆಟಗಾರರು T20 ಕ್ರಿಕೆಟ್‌ಗೆ ವಿದಾಯ ಘೋಷಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ.
ಒಂದೆಡೆ T20 ವಿಶ್ವಕಪ್ ವಿಜಯದ ಸಂಭ್ರಮವಾದರೆ, ಮತ್ತೊಂದೆಡೆ ಸ್ಟಾರ್ ಆಟಗಾರರ ನಿವೃತ್ತಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
“ಇದು ನನ್ನ ಕೊನೆಯ ಟಿ20 ವಿಶ್ವಕಪ್” ಎಂದು ಹೇಳುವ ಮೂಲಕ ಅಂತಾರಾಷ್ಟ್ರೀಯ ಟಿ20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, “ಇದು ನನ್ನ ಕೊನೆಯ ಟಿ20 ವಿಶ್ವಕಪ್. ವಿಶ್ವಕಪ್ ಗೆದ್ದಿರುವುದು ನನಗೆ ಖುಷಿ ತಂದಿದೆ. ಮುಂದಿನ ಪೀಳಿಗೆಯವರಿಗೆ ಅವಕಾಶ ಕಲ್ಪಿಸಿಕೊಡಲು ಇದು ಸೂಕ್ತ ಸಂದರ್ಭ” ಎಂದು ಹೇಳುವ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ವಿರಾಟ್ ಕೊಹ್ಲಿಯವರ ಬೆನ್ನಲ್ಲೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ಘೋಷಿಸಿದ್ದಾರೆ.
ಟೀಮ್ ಇಂಡಿಯಾ ಚಾಂಪಿಯನ್ ಆದ ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಟ್‌ಮ್ಯಾನ್,“ಟಿ20 ಪಂದ್ಯಗಳಿಂದ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ” ಎಂದು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ರೋಹಿತ್ ಶರ್ಮಾ ತಿಳಿಸಿದ್ದಾರೆ.
“ಇದು ನನ್ನ ಕೊನೆಯ ಪಂದ್ಯವೂ ಆಗಿತ್ತು. ಪ್ರಾಮಾಣಿಕವಾಗಿ, ನಾನು ಈ ಟಿ20 ಸ್ವರೂಪವನ್ನು ಆಡಲು ಪ್ರಾರಂಭಿಸಿದ ಸಮಯದಿಂದ ಸಿಕ್ಕಾಪಟ್ಟೆ ಖುಷಿಯಲ್ಲಿದ್ದೆ. ಈ ಸ್ವರೂಪಕ್ಕೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ನಾನು ಈ ಮಾದರಿಯ ಪ್ರತಿಯೊಂದು ಕ್ಷಣವನ್ನು ಪ್ರೀತಿಸುತ್ತೇನೆ. ನಾನು ಈ ಸ್ವರೂಪದಲ್ಲಿ ಆಡುವ ಮೂಲಕ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ. ನಾನು ಈಗ ಏನು ಮಾಡಿದ್ದೇನೋ ಅದನ್ನೇ ಮಾಡಲು ಬಯಸಿದ್ದೆ. ಕಪ್ ಗೆದ್ದು ವಿದಾಯ ಹೇಳಿದೆ” ಎಂದು ಬಾರ್ಬಡೋಸ್ನಲ್ಲಿ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ