ಬ್ಯಾಂಕ್ ಸಿಬ್ಬಂದಿ ವೇಷ: ಬೆರಳಚ್ಚು ಕ್ಲೋನಿಂಗ್ ಮೂಲಕ ಬ್ಯಾಂಕ್‌ ನಿಂದ ಹಣ ದೋಚುತ್ತಿದ್ದ ಖದೀಮರ ಬಂಧನ

ಬ್ಯಾಂಕ್ ಸಿಬ್ಬಂದಿ ವೇಷ:  ಬೆರಳಚ್ಚು ಕ್ಲೋನಿಂಗ್ ಮೂಲಕ ಬ್ಯಾಂಕ್‌ ನಿಂದ ಹಣ ದೋಚುತ್ತಿದ್ದ ಖದೀಮರ ಬಂಧನ

ಲಕ್ನೋ: ಜನರ ಬೆರಳಚ್ಚುಗಳನ್ನು ಕ್ಲೋನಿಂಗ್ ಮಾಡಿ (Fingerprint Cloning) ಬ್ಯಾಂಕ್‌ನಿಂದ ಹಣ ದೋಚುತ್ತಿದ್ದ ಖದೀಮರ ಗುಂಪನ್ನು ಉತ್ತರ ಪ್ರದೇಶದ ಲಕ್ನೋ ಪೊಲೀಸರು ಬಂಧಿಸಿದ್ದಾರೆ.

      ಇತ್ತೀಚೆಗೆ ಸೈಬರ್ ಅಪರಾಧಗಳು ವ್ಯಾಪಕವಾಗಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಆನ್‌ಲೈನ್ ಖದೀಮರಿಂದ ಅನೇಕ ಜನ ಹಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಕಳ್ಳರು, ಗ್ರಾಹಕರ ಮೊಬೈಲ್ ಸಂಖ್ಯೆ, ಆಧಾರ್‌ ಕಾರ್ಡ್, ಪಾನ್ ಕಾರ್ಡ್‌ ಡೇಟಾಗಳನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಕಲಿ ಬೆರಳಚ್ಚು ಸೃಷ್ಟಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕಲಾಗುತ್ತಿದೆ.

‌      ಈ ರೀತಿ ಅಪರಾಧ ಕೃತ್ಯಗಳಲ್ಲಿ ನಿರತಾಗಿದ್ದ ಮೂವರನ್ನು ಲಕ್ನೋದ ಗೋಮತಿ ನಗರ ಪೊಲೀಸ್ ಠಾಣೆ ಪೊಲೀಸರು ಗುರುವಾರ ಬಂಧಿಸಿ ಅವರಿಂದ ರೂ.2.98 ಲಕ್ಷ ವಶ ಪಡಿಸಿಕೊಂಡಿದ್ದಾರೆ. ಬಂಧಿತರನ್ನು ಗೋರಖ್‌ಪುರದ ರಾಜೇಶ್ ರೈ, ರಾಹುಲ್ ಕುಮಾರ್ ರೈ, ರಾಮ್ ಶರಣ್ ಗೌರ್ ಎಂದು ಗುರುತಿಸಲಾಗಿದೆ.

      ಇವರು ಬ್ಯಾಂಕ್ ಸಿಬ್ಬಂದಿ ತರ ವೇಷ ಹಾಕಿಕೊಂಡು ಕೆ.ವೈ.ಸಿ. ಪೂರ್ಣ ಮಾಡಬೇಕೆಂದು ಗ್ರಾಹಕರಿಂದ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದರು. ನಂತರ ಆಧಾರ್ ಕಾರ್ಡ್ ಮೂಲಕ ಬೆರಳಚ್ಚು ಪಡೆದುಕೊಂಡು, ಗ್ರಾಹಕರ ಬ್ಯಾಂಕ್‌ ಖಾತೆಯಿಂದ ಹಣ ಪಡೆಯಲು ಅದನ್ನು ಬಳಸುತ್ತಿದ್ದರು. ಈ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಲಕ್ನೋ ಹೆಚ್ಚುವರಿ ಡಿಸಿಪಿ ಖಾಶಿಮ್ ಅಬಿದಿ ತಿಳಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ