ಬೀದಿ ಬದಿ ವ್ಯಾಪಾರಸ್ಥರ ತೆರವು ಕಾರ್ಯ ನಿಲ್ಲಿಸಿ: ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ಹೋರಾಟ - ಎಸ್‌ಡಿಟಿಯು

ಬೀದಿ ಬದಿ ವ್ಯಾಪಾರಸ್ಥರ ತೆರವು ಕಾರ್ಯ ನಿಲ್ಲಿಸಿ:  ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ಹೋರಾಟ - ಎಸ್‌ಡಿಟಿಯು

ಮಂಗಳೂರು, ಆಗಸ್ಟ್ 29: ಕೋವಿಡ್ ಸಂಕಷ್ಟದ ಕಾಲದಲ್ಲಿ ನಷ್ಟಕ್ಕೊಳಗಾಗಿದ್ದ ಬೀದಿ ಬದಿ ವ್ಯಾಪಾರಿಗಳು ಇದೀಗ ಬಹಳ ಶ್ರಮಪಟ್ಟು ತಮ್ಮ ಸ್ವಾಭಿಮಾನದ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಅವರನ್ನು ಒತ್ತಾಯಪೂರ್ವಕವಾಗಿ ತೆರವುಗೊಳಿಸುವ ಮಹಾನಗರ ಪಾಲಿಕೆ ಕಾರ್ಯಾಚರಣೆಯನ್ನು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ದ.ಕ ಜಿಲ್ಲಾ ಸಮಿತಿಯು ತೀವೃವಾಗಿ ಖಂಡಿಸುತ್ತದೆ ಎಂದು ಎಸ್‌ಡಿಟಿಯು ದ.ಕ ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ ತಿಳಿಸಿದ್ದಾರೆ.

      ಮಂಗಳೂರು ಮಹಾ ನಗರ ಪಾಲಿಕೆಯು ಬೀದಿ ಬದಿ ವ್ಯಾಪಾರಸ್ಥರಿಗೆ ಸೂಕ್ತವಾದ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಬಲವಂತದಿಂದ ತೆರವುಗೊಳಿಸಲು ಪ್ರಯತ್ನಿಸುತ್ತಿದೆ. ಇದು ಬಡ ಹಾಗೂ ಮಧ್ಯಮ ವರ್ಗದವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿರುತ್ತದೆ. ಈಗಾಗಲೇ ಕೋವಿಡ್ ಹಾಗೂ ಸ್ಮಾರ್ಟ್ ಸಿಟಿಯ ನೆಪ ದೊಂದಿಗೆ ಮಂಗಳೂರು ಕೇಂದ್ರ ಮಾರುಕಟ್ಟೆಯನ್ನು ನಗರದ ಹೊರವಲಯಕ್ಕೆ  ಸ್ಥಳಾಂತರಗೊಳಿಸಿದ ನಿರ್ಧಾರದಿಂದ ಬಡ ಕೂಲಿ ಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಸ್ಥರ ಬದುಕು ದುಸ್ತರವಾಗಿದೆ.

      ಇಂತಹ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸದ ಹೊರತು ಯಾವುದೇ ಕಾರಣಕ್ಕೂ ಬೀದಿ ಬದಿ ವ್ಯಾಪಾರಸ್ಥರನ್ನು ತೆರವು ಗೊಳಿಸಲು ಅವಕಾಶವನ್ನು ನೀಡುವುದಿಲ್ಲ ಹಾಗೂ ಈ ಬಗ್ಗೆ ಹೋರಾಟವನ್ನು ನಿರಂತರಗೊಳಿಸಲಿದ್ದೇವೆ ಎಂದು ಖಾದರ್ ಫರಂಗಿಪೇಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ