ಬಿಡಿಎಯಲ್ಲಿ ಮಧ್ಯವರ್ತಿಗಳು: ಒಂಭತ್ತು ಕಡೆಗಳಲ್ಲಿ ಎಸಿಬಿ ದಾಳಿ

ಬಿಡಿಎಯಲ್ಲಿ ಮಧ್ಯವರ್ತಿಗಳು: ಒಂಭತ್ತು ಕಡೆಗಳಲ್ಲಿ ಎಸಿಬಿ ದಾಳಿ

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳಿಗೆ ಲಂಚದ ಆಮಿಷವೊಡ್ಡಿ ಮತ್ತು ಪ್ರಭಾವ ಬೀರಿ ಸರ್ಕಾರಿ ಕೆಲಸಗಳಲ್ಲಿ ಹಸ್ತಕ್ಷೇಪ ನಡೆಸಿತ್ತಿರುವ ಆರೋಪದ ಮೇಲೆ ಒಂಬತ್ತು ಮಂದಿ ಖಾಸಗಿ ಮಧ್ಯವರ್ತಿಗಳ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಶೋಧ ನಡೆಸುತ್ತಿದೆ

      ಬಿಡಿಎ ಕಚೇರಿಗಳಲ್ಲಿ ಏಜೆಂಟರಂತೆ ಕೆಲಸ ಮಾಡುತ್ತಿರುವ ಚಾಮರಾಜಪೇಟೆಯ ಬಿ.ಎನ್‌. ರಘು, ಆರ್‌.ಟಿ. ನಗರದ ಮನೋರಾಯನ ಪಾಳ್ಯದ ಮೋಹನ್‌, ದೊಮ್ಮಲೂರಿನ ಮನೋಜ್‌, ಮಲ್ಲತ್ತಹಳ್ಳಿಯ ಕೆನಗುಂಟೆ ಮುನಿರತ್ನ ಅಲಿಯಾಸ್‌ ರತ್ನವೇಲು, ರಾಜ ರಾಜೇಶ್ವರಿನಗರದ ತೇಜು ಅಲಿಯಾಸ್‌ ತೇಜಸ್ವಿ, ಮುದ್ದಿನಪಾಳ್ಯದ ಕೆ.ಜಿ. ವೃತ್ತದ ಅಶ್ವತ್ಥ್‌, ಚಾಮುಂಡೇಶ್ವರಿ ನಗರ ಬಿಡಿಎ ಬಡಾವಣೆಯ ರಾಮ ಮತ್ತು ಲಕ್ಷ್ಮಣ ಹಾಗೂ ಮುದ್ದಿನಪಾಳ್ಯದ ಚಿಕ್ಕಹನುಮಯ್ಯ ಇವರುಗಳ ಮನೆ ಮೇಲೆ ದಾಳಿಮಾಡಿರುವ ಎಸಿಬಿ ಅಧಿಕಾರಿಗಳು, ಶೋಧ ನಡೆಸುತ್ತಿದ್ದಾರೆ.

      ಈ ಹಿಂದೆ ಬಿಡಿಎ ಕಚೇರಿಗಳ ಮೇಲೆ ದಾಳಿಮಾಡಿದ್ದ ಎಸಿಬಿ ಅಧಿಕಾರಿಗಳು, ಹಲವು ಅಕ್ರಮಗಳನ್ನು ಪತ್ತೆಮಾಡಿದ್ದರು. ಆ ಪ್ರಕರಣದ ತನಿಖೆಯಲ್ಲಿ ಖಾಸಗಿ ಮಧ್ಯವರ್ತಿಗಳ ಪಾತ್ರದ ಕುರಿತು ಮಾಹಿತಿ ಲಭ್ಯವಾಗಿತ್ತು. ಅದನ್ನು ಆಧರಿಸಿ ಪ್ರತ್ಯೇಕ ಪ್ರಕರಣ ದಾಖಲಿಸಿರುವ ತನಿಖಾ ಸಂಸ್ಥೆ, ಕಾರ್ಯಾಚರಣೆ ನಡೆಸುತ್ತಿದೆ.

      ಎಸಿಬಿ ಕೇಂದ್ರ ಸ್ಥಾನದ ಎಸ್‌ಪಿ ಉಮಾ ಪ್ರಶಾಂತ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. 100ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

      ದಾಖಲೆಗಳು, ಆಸ್ತಿ ವಿವರಗಳು, ಬ್ಯಾಂಕ್‌ ವಹಿವಾಟು, ಅಧಿಕಾರಿಗಳ ಜತೆಗಿನ ಒಡನಾಟಕ್ಕೆ ಸಂಬಂಧಿಸಿದ ವಿವರಗಳು, ಬಿಡಿಎ ಕಚೇರಿಗಳಿಗೆ ಸಂಬಂಧಿಸಿದ ಕಡತಗಳಿಗಾಗಿ ಆರೋಪಿತರ ಮನೆಗಳಲ್ಲಿ ಶೋಧ ನಡೆಯುತ್ತಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ