ಬಿಜೆಪಿ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಿದ ರೈತರು: ಲಾಠಿ ಚಾರ್ಜ್‌ನಿಂದ ರೈತರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಪೋಲೀಸರು

ಬಿಜೆಪಿ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಿದ ರೈತರು: ಲಾಠಿ ಚಾರ್ಜ್‌ನಿಂದ ರೈತರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಪೋಲೀಸರು

ಚಂಡೀಗಡ: ಬಿಜೆಪಿ ಸಭೆಯ ವಿರುದ್ಧ ಪ್ರತಿಭಟಿಸಲು ಹರಿಯಾಣದ ಕರ್ನಾಲ್ ಕಡೆಗೆ ಹೊರಟಿದ್ದ ರೈತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಚ್‌ನಲ್ಲಿ 10 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಭೆಯಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಜೊತೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಓಂ ಪ್ರಕಾಶ್ ಧಣಕರ್ ಮತ್ತು ಇತರ ಮುಖಂಡರು ಹಾಜರಿದ್ದರು.

      ರೈತರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಹರಿಯಾಣ ಪೊಲೀಸ್ ತೀವ್ರ ಟೀಕೆಗೆ ಗುರಿಯಾಗಿದೆ. ಘಟನೆಯ ಕುರಿತು ಸಂಯುಕ್ತ ಕಿಸಾನ್‌ ಮೋರ್ಚಾದ (SKM) ದರ್ಶನ್ ಪಾಲ್ "ಶಾಂತಿಯುತ ಪ್ರತಿಭಟನೆಯ ಹೊರತಾಗಿಯೂ, ಲಾಠಿ ಚಾರ್ಜ್‌ನಿಂದ ರೈತರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ. ನೂರಾರು ರೈತರನ್ನು ಪೊಲೀಸರು ಬಂಧಿಸಿದ್ದಾರೆ." ತಮ್ಮ ಫೇಸ್‌ಬುಕ್‌ ವೀಡಿಯೊದಲ್ಲಿ ಹೇಳಿದ್ದಾರೆ. ಬಂಧಿತ ರೈತರನ್ನು ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.

      ಘಟನೆಯ ನಂತರ ರೈತರ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ (SKM) ಹರಿಯಾಣದಾದ್ಯಂತ ಎಲ್ಲಾ ಹೆದ್ದಾರಿಗಳು ಮತ್ತು ಟೋಲ್ ಪ್ಲಾಜಾಗಳನ್ನು ನಿರ್ಬಂಧಿಸುವಂತೆ ರೈತರಿಗೆ ಕರೆ ನೀಡಿತು. ಹಲವಾರು ಕಡೆ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಯಿತು.

      ಫತೇಹಾಬಾದ್-ಚಂಡೀಗಡ, ಗೊಹಾನ-ಪಾಣಿಪತ್, ಜಿಂದ್-ಪಟಿಯಾಲ ಹೆದ್ದಾರಿ, ಅಂಬಾಲಾ-ಚಂಡೀಗಡ ಮತ್ತು ಹಿಸಾರ್-ಚಂಡೀಗಡ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಮೊಟಕುಗೊಂಡಿದೆ.

      ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ವಿನಾಕಾರಣ ಲಾಠಿಚಾರ್ಜ್ ಮಾಡಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ' ಎಂದು ಹರಿಯಾಣ ಭಾರತೀಯ ಕಿಸಾನ್ ಸಂಘದ (ಚದುನಿ) ಅಧ್ಯಕ್ಷ ಗುರ್ನಾಮ್ ಸಿಂಗ್ ಹೇಳಿದ್ದಾರೆ.

      ಪ್ರದೇಶದಲ್ಲಿ ಸೆಕ್ಷನ್ 144 ಹೇರಲಾಗಿತ್ತು. ಪ್ರತಿಭಟನಾಕಾರರು ಹೆದ್ದಾರಿಯನ್ನು ತಡೆ ನಡೆಸಿದ್ದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಇದನ್ನು ನಿಯಂತ್ರಿಸಲು ಪೊಲೀಸ್ ಪಡೆಯನ್ನು ಬಳಕೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

      ಸಂಯುಕ್ತ ಕಿಸಾನ್ ಮೋರ್ಚಾ ಘಟನೆಯ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, "ಪ್ರತಿಭಟನಾಕಾರರ ತಲೆಯ ಮೇಲೆ ಹೊಡೆಯುವಂತೆ " ಪೊಲೀಸರಿಗೆ ಆದೇಶಿಸಿದ ಉಪವಿಭಾಗದ ಮ್ಯಾಜಿಸ್ಟ್ರೇಟ್ ಆಯುಷ್ ಸಿನ್ಹಾ ಅವರನ್ನು ತಕ್ಷಣವೇ ವಜಾಗೊಳಿಸುವಂತೆ ಸಂಘಟನೆ ಒತ್ತಾಯಿಸಿದೆ.

      ಉಪವಿಭಾಗದ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಯುಷ್ ಸಿನ್ಹಾ ಅವರು ಪ್ರತಿಭಟನಾ ನಿರತ ರೈತರ ತಲೆ ಮೇಲೆ ಹೊಡೆಯುವಂತೆ ಪೊಲೀಸರಿಗೆ ಆದೇಶ ನೀಡಿದ ವೀಡಿಯೋ ವ್ಯಾಪಕವಾಗಿ ವೈರಲಾಗಿತ್ತು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ