ಬಂಗಬಂಧು ಶೇಖ್‌ ಮುಜೀಬುರ್‌ ರಹ್ಮಾನ್‌ ಗೆ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿ

ಬಂಗಬಂಧು  ಶೇಖ್‌ ಮುಜೀಬುರ್‌ ರಹ್ಮಾನ್‌ ಗೆ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿ

ಢಾಕಾ: ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯೊತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಭಾರತದ ಪ್ರಧಾನಿ ನರೇಂದ್ರ ಮೋದಿಯವರು 2020ನೇ ವರ್ಷದ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸಿಯನ್ನು ಬಾಂಗ್ಲಾದ ರಾಷ್ಟ್ರಪಿತ ಶೇಖ್ ಮುಜೀಬುರ‍್ರಹ್ಮಾನ್ ರವರಿಗಾಗಿ ಅವರ ಮಗಳು ಬಾಂಗ್ಲಾದ ಪ್ರಧಾನಿ ಶೇಖ್ ಹಸೀನಾ ಹಾಗೂ ಶೇಖ್ ರೆಹನಾರವರಿಗೆ ಹಸ್ತಾಂತರಿಸಿದರು.

     ಭಾರತದ ಪ್ರಧಾನಿಗಳ ಭೇಟಿಯಿಂದ ಭಾರತ ಮತ್ತು ಬಾಂಗ್ಲಾ ದೇಶಗಳ ಮಧ್ಯೆ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಯುಗವೊಂದು ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. 2021ನೇ ವರ್ಷವು ಈ ಎರಡು ರಾಷ್ಟ್ರಗಳ ಮಧ್ಯೆ ಅನೇಕ ದ್ವಿಪಕ್ಷೀಯ ಬಾಂಧವ್ಯಗಳಿಗೆ ಸಾಕ್ಷಿಯಾಗುತ್ತಿದೆ‌. ಭಾರತದ ಪ್ರಧಾನ ಮಂತ್ರಿಯವರ ಢಾಕಾ ಭೇಟಿಯು ಬಾಂಗ್ಲಾ ದೇಶದೊಂದಿಗಿನ ಭಾರತದ ಎಲ್ಲಾ ಸಂಬಂಧಗಳನ್ನು ಬಲಪಡಿಸಿ ಪರಸ್ಪರ ಅಭಿವೃದ್ಧಿಯ ಗುರಿಯೆಡೆಗೆ ಸಾಗುವ ವಾತಾವರಣವನ್ನು ನಿರ್ಮಿಸುತ್ತಿದೆ. ಇದೊಂದು ನಿರ್ಣಾಯಕ ಭೇಟಿ. ಶೇಖ್ ಮುಜೀಬರ‍್ರಹ್ಮಾನರವರ 100ನೇ ವರ್ಷದ ಜನ್ಮ ದಿನಾಚರಣೆ, ಭಾರತ-ಬಾಂಗ್ಲಾ ಬಾಂಧವ್ಯದ 50ನೇ ವರ್ಷಾಚರಣೆ ಹಾಗೂ ಬಾಂಗ್ಲಾ ದೇಶ ಸ್ವತಂತ್ರಗೊಂಡು 50ನೇ ವರ್ಷಾಚರಣೆ ಕೂಡಾ ಆಗಿದೆ.
      ಸುರಕ್ಷತೆ, ವಾಣಿಜ್ಯ, ಮಾಹಿತಿ ತಂತ್ರಜ್ಞಾನ ಮತ್ತು ಕ್ರೀಡಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಬಾಂಗ್ಲಾದೇಶ ಐದು ಒಡಂಬಡಿಕೆಗಳನ್ನು ಮಾಡಿಕೊಂಡಿವೆ. ಇದೇ ವೇಳೆ ಪ್ರಧಾನಿ ಮೋದಿ ಅವರು ಬಾಂಗ್ಲಾದೇಶಕ್ಕೆ ಭಾರತದ 12 ಲಕ್ಷ ಕೋವಿಡ್ ಲಸಿಕೆಯನ್ನು ಉಡುಗೊರೆಯಾಗಿ ನೀಡುವುದರ ಸಂಕೇತವಾಗಿ ಪ್ರಾತಿನಿಧಿಕ ಪೆಟ್ಟಿಗೆಯನ್ನು ಬಾಂಗ್ಲಾದೇಶದ ಪ್ರಧಾನಿಗೆ ಹಸ್ತಾಂತರಿಸಿದರು.
      2021 ರ ಗಣರಾಜ್ಯೋತ್ಸವ ಪರೇಡ್ ನಲ್ಲಿ 122 ಸದಸ್ಯರ ಬಾಂಗ್ಲಾದೇಶ ಸಶಸ್ತ್ರ ಪಡೆಗಳ  ಭಾಗವಹಿಸುವಿಕೆ ಮತ್ತು ಬಾಂಗ್ಲಾದೇಶಕ್ಕೆ ಕೋವಿಡ್ ಲಸಿಕೆಗಳನ್ನು ಉಡುಗೊರೆಯ ರೂಪದಲ್ಲಿ ನೀಡುವ ಘೋಷಣೆಯು ಭಾರತ ತನ್ನ ನೆರೆಹೊರೆಯ ದೇಶವಾದ ಬಾಂಗ್ಲಾದೊಂದಿಗಿನ ಬಾಂಧವ್ಯ ವೃದ್ದಿಸುವ ಹಾಗೂ ಪ್ರಭಾವವನ್ನು ಗಟ್ಟಿ ಗೊಳಿಸುವ ಸೂಚನೆಯನ್ನು ನೀಡಿತ್ತು.
      2021ರ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿಯನ್ನು ಉಪ-ಖಂಡದ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಮತ್ತು ಅದಮ್ಯ ಧೈರ್ಯದ ಪ್ರತಿರೂಪವಾದ ಬಾಂಗ್ಲಾ ದೇಶದ ಪಿತಾಮಹ ಬಂಗಬಂಧು ಶೇಖ್ ಮುಜಿಬುರ್ರಹಮಾನ್ ಅವರಿಗೆ ಘೋಷಿಸುವ ಮೂಲಕ ಭಾರತವು ತನ್ನ ಸ್ನೇಹವನ್ನು ಪ್ರಕಟಿಸಿದೆ..         
      ಪ್ರಶಸ್ತಿಯನ್ನು ಘೋಷಿಸುವಾಗ, ಭಾರತದ ಪ್ರಧಾನ ಮಂತ್ರಿಯವರು ಶೇಕ್ ಮುಜಿಬುರ್ರಹಮಾನ್ ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಬಾಂಗ್ಲಾ ಸ್ವಾತಂತ್ರ‍್ಯದ ಹೀರೋ ಎಂದು ಬಣ್ಣಿಸಿದರು. ಅವರು ಭಾರತ ಮತ್ತು ಬಾಂಗ್ಲಾದೇಶದ ಲಕ್ಷಾಂತರ ಅಭಿಮಾನಿಗಳಿಗೆ ವೀರರಾಗಿದ್ದರು ಎಂದು ಹೇಳಿದರು.  ಬಂಗಬಂಧು ತೋರಿಸಿದ ಹಾದಿಯು ಎರಡೂ ದೇಶಗಳ ಪಾಲುದಾರಿಕೆ, ಪ್ರಗತಿ ಮತ್ತು ಸಮೃದ್ಧಿಗೆ ಬಲವಾದ ಅಡಿಪಾಯವನ್ನು ಹಾಕಿದೆ ಎಂದೂ ಅವರು ಹೇಳಿದರು.     
      ಇದಕ್ಕೆ ಪ್ರತಿಕ್ರಿಯೆಯಾಗಿ, ಬಾಂಗ್ಲಾದೇಶ ಸರ್ಕಾರವು ಈ ಪ್ರಶಸ್ತಿಯು ನಮ್ಮ ದೇಶ ಮತ್ತು ಅದರ ಜನರಿಗೆ ಲಭಿಸಿದ ಗೌರವವಾಗಿದೆ ಎಂದು ಹೇಳಿದೆ.  ಬಾಂಗ್ಲಾದೇಶದ ಸ್ವಾತಂತ್ರ‍್ಯ ಸುವರ್ಣ ಮಹೋತ್ಸವವನ್ನು ಉಭಯ ದೇಶಗಳು ಜಂಟಿಯಾಗಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಗಾಢವಾಗುತ್ತಿರುವ ಸಂಬಂಧಕ್ಕೆ ಈ ಪ್ರಶಸ್ತಿ ಸೂಕ್ತ ಗೌರವವಾಗಿದೆ ಎಂದೂ ಬಾಂಗ್ಲಾದೇಶ ಸರಕಾರದ ಹೇಳಿಕೆ ತಿಳಿಸಿದೆ.

     ಭದ್ರತೆ, ಸಂರಕ್ಷಣೆ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಗಾಢವಾಗಿ ಬೆಳೆಯುತ್ತಿರುವ ಸಂಬಂಧವು 21ನೇ ಶತಮಾನದ ಅವಶ್ಯಕತೆಯಾಗಿದೆ. ಏಕೆಂದರೆ ಈಶಾನ್ಯ ಭಾರತೀಯ ರಾಜ್ಯಗಳಲ್ಲಿನ ಬಂಡಾಯವನ್ನು ತಟಸ್ಥಗೊಳಿಸಲು, ಎರಡೂ ದೇಶಗಳ ರಫ್ತು ಅವಕಾಶಗಳನ್ನು ಹೆಚ್ಚಿಸಲು ಮತ್ತು ಆ ಮೂಲಕ ಅವರ ಆರ್ಥಿಕತೆಯನ್ನು ಹೆಚ್ಚಿಸಲು ಈ ಪ್ರಯತ್ನಗಳು ಸಹಕಾರಿ ಎಂದು ಅಭಿಪ್ರಾಯ ಪಡಲಾಗಿದೆ.
ರೈಲಿಗೆ ಚಾಲನೆ : ಬಾಂಗ್ಲಾದೇಶದ ಢಾಕಾ ಮತ್ತು ಭಾರತದ ನ್ಯೂ ಜಲ್ಪೈಗುರಿ ಸಂಪರ್ಕಿಸುವ ಹೊಸ ಪ್ಯಾಸೆಂಜರ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
    ಮೋದಿ ಅವರು ಬಾಂಗ್ಲಾದೇಶ ಪ್ರವಾಸದ ವೇಳೆ ಎರಡು ಪ್ರಮುಖ ಹಿಂದೂ ದೇವಾಲ ಯಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದರು. ಇದೇ ವೇಳೆ ಶೇಖ್ ಮುಜಿಬುರ್ ರಹಮಾನ್ ಅವರ `ಬಂಗಬಂಧು' ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನನ್ನೂ ಸಲ್ಲಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ