ಪಲಸ್ತೀನ್-ಇಸ್ರೇಲ್ ಕದನ ವಿರಾಮದೊಂದಿಗೆ ಮುಗಿಯಿತೇ ನಮ್ಮ ಹೊಣೆ

ಪಲಸ್ತೀನ್-ಇಸ್ರೇಲ್ ಕದನ ವಿರಾಮದೊಂದಿಗೆ ಮುಗಿಯಿತೇ ನಮ್ಮ ಹೊಣೆ

(ಲೇಖಕರು: ಎಎಸ್.ಇಬ್ರಾಹಿಂ ಕರೀಂ)

ಪವಿತ್ರ ರಂಝಾನ್ ತಿಂಗಳ ಕೊನೆಯ ಹಂತದಲ್ಲಿ ಪೆಲಸ್ತೀನ್ ಜನರ ಮೇಲೆ ಧಾಳಿ ಆರಂಭಿಸಿದ್ದ ಇಸ್ರೇಲ್ ಹನ್ನೊಂದು ದಿನಗಳ ಕಾದಾಟದ ನಂತರ ಈಜಿಪ್ಟಿನ ಮಧ್ಯಸ್ಥಿಕೆಯಲ್ಲಿ ಪರಸ್ಪರ ಕದನ ವಿರಾಮವನ್ನು ಘೋಷಿಸಿಕೊಂಡಿದೆ.
      ಪೆಲಸ್ತೀನಿಯರಿಗಾಗಿ ಕಣ್ಣೀರಿಟ್ಟ ಲಕ್ಷಂತರ ಕಣ್ಣುಗಳು, ಅವರಿಗಾಗಿ ಪ್ರಾರ್ಥಿಸಿದ ಕೋಟ್ಯಂತರ ತುಟಿಗಳು ಒಮ್ಮೆಗೆ ನಿಟ್ಟುಸಿರು ಬಿಟ್ಟಿತ್ತು. ಇದು ತಮ್ಮ ಸ್ವಂತ ವಿಜಯವೇ ಎಂಬಂತೆ ನಾವೆಲ್ಲಾ ಸಾಮಾಜಿಕ ಜಾಲ ತಾಣಗಳಲ್ಲಿ ಸಂತೋಷವನ್ನು ಹಂಚಿಕೊಂಡದ್ದೇ, ಹಂಚಿಕೊಂಡದ್ದು. ಅನೇಕರು ಅವರವರಿಗೆ ತೋಚಿದಂತೆ ವ್ಯಾಖ್ಯಾನಗಳನ್ನೂ ನೀಡಿದರು. ಇದು ಇಸ್ರಾಈಲಿನ ಸೋಲು, ಪೆಲಸ್ತೀನಿನ ಗೆಲುವು ಎಂಬಂತೆಯೂ ಬಿಂಬಿಸಲ್ಪಟ್ಟಿತ್ತು.
      ಇದು ಇಂದು-ನಿನ್ನೆಯ ಕಥೆಯಲ್ಲ. ಇಂತಹ ಅದೆಷ್ಟೋ ಕದನ ವಿರಾಮಗಳೂ ಘೋಷಿಸಲ್ಪಟ್ಟಿವೆ. ಕದನ ವಿರಾಮದೊಂದಿಗೆ ನಾವೂ ಪೆಲಸ್ತೀನನ್ನು ಮರೆತು ಬಿಡುತ್ತೇವೆ. ಮತ್ತೆ ನಮಗೆ ನೆನಪಾಗೋದು ಇನ್ನೊಂದು ಯುದ್ಧ ಆರಂಭವಾಗುವಾಗ. ಬಲಿಷ್ಠವಾಗಿರುವ ಶತ್ರು ಕದನ ವಿರಾಮ ಘೋಷಿಸಿ ಹಿಂದೆ ಸರಿಯುತ್ತಿದ್ದಾನೆ ಎಂದರೆ ಅದರ ಹಿಂದೆ ಇನ್ನೇನೋ ಇರಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುತ್ತಿಲ್ಲ. ಪೆಲಸ್ತೀನಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ನಾವು ಒತ್ತಡ ಹಾಕುವ ಕೆಲಸವನ್ನೂ ಮಾಡುತ್ತಿಲ್ಲ. ನಮ್ಮದೇನಿದ್ದರೂ ಯುದ್ಧ ನಡೆಯುವಾಗ ಪ್ರತಿಭಟನೆ, ಕದನ ವಿರಾಮವಾದಾಗ ವಿಜಯೋತ್ಸವ ಪ್ರಕಟಣೆ ಅಷ್ಟಕ್ಕೇ ಸೀಮಿತಗೊಂಡಂತಿದೆ. ಇಲ್ಲಿಗೆ ನಮ್ಮ ಹೊಣೆ ಮುಗಿಯಿತೆ?
      ಅದು 1948. ಪೆಲಸ್ತೀನಿನ ಮಣ್ಣಿನಲ್ಲಿ, ಇಸ್ರಾಈಲ್ ಎಂಬ ರಾಷ್ಟ್ರವನ್ನು UNO ಅಕ್ರಮವಾಗಿ ಸ್ಥಾಪಿಸಿತು. ಆ ಸಂದರ್ಭದಲ್ಲಿ UNO ಪೆಲಸ್ತೀನಿನ ಭೂಮಿಯ 54% ಪ್ರದೇಶದಲ್ಲಿ ಇಸ್ರಾಈಲ್ ರಾಷ್ಟ್ರ ಮತ್ತು 46% ಭೂಮಿಯಲ್ಲಿ ಪೆಲಸ್ತೀನ್ ರಾಷ್ಟ್ರ ಹೀಗೆ ಎರಡು ಸ್ವತಂತ್ರ ರಾಷ್ಟ್ರಗಳನ್ನು ರಚಿಸುವುದಾಗಿ ಮತ್ತು ಬೈತುಲ್ ಮುಖದ್ದಸ್ ಇರುವ ಜೆರುಸಲೇಂ ನಗರವನ್ನು UNOದ ನಿಯಂತ್ರಣ ಪ್ರದೇಶವಾಗಿ ಇರಿಸುವ ಭರವಸೆ ನೀಡಲಾಗಿತ್ತು.
ಆದರೆ ಈ ಭರವಸೆಯ 75 ವರ್ಷಗಳಾದ ನಂತರವೂ ಸ್ವತಂತ್ರ ಪೆಲಸ್ತೀನ್ ರಾಷ್ಟ್ರ ಸ್ಥಾಪನೆ ಆಗಲೇ ಇಲ್ಲ. ಅದು ಕನಸಾಗಿಯೇ ಉಳಿದಿದೆ. ಪೆಲಸ್ತೀನ್ ರಾಷ್ಟ್ರ ಸ್ಥಾಪನೆಯನ್ನು ಮುಂದೂಡುವ ಸಂಚಿನ ಭಾಗವೇ ಇಸ್ರೇಲ್ ನ ಈ ನಿರಂತರ ಆಕ್ರಮಣ ಎಂಬ ಕಟು ಸತ್ಯವನ್ನು ನಾವು ಮನನ ಮಾಡಿಕೊಳ್ಳಬೇಕು.
      ಇಸ್ರೇಲ್, ಆಕ್ರಮಣ ಮತ್ತು ವೈರತ್ವದ  ಮೂಲಕ ಆ ಪ್ರದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಲೇ ಬಂದಿದೆ. ಈಗ ಕದನವಿರಾಮ ವೇನೋ ಆಗಿದೆ. ಆದರೆ ಇದು ಶಾಶ್ವತವೇ? ಇಸ್ರೇಲ್ ಬಗ್ಗೆ ತಿಳಿದಿರುವ ಯಾರೇ ಆದರೂ ಯಾವ ಕ್ಷಣದಲ್ಲಿ ಬೇಕಾದರೂ ಮತ್ತೆ ಯುದ್ಧ ಆರಂಭವಾಗಬಹುದು ಎಂದು ಒಪ್ಪಿಕೊಳ್ಳುತ್ತಾರೆ. ಹಂತ ಹಂತವಾಗಿ ಪೆಲಸ್ತೀನ್ ಇಸ್ರೇಲಿನ ಭಾಗವಾಗುವುದನ್ನು ನಾವು ನೋಡುತ್ತಲೇ ಇದ್ದೇವೆ. ಜಗತ್ತಿನಲ್ಲೇ ಶ್ರೇಷ್ಠವಾದ ಕಾರ್ಯಾಚರಣೆ ಹೊಂದಿರುವ ಮೊಸಾದ್ ಹೊಸ ಹೊಸ ತಂತ್ರಗಳನ್ನು ಅಳವಡಿಸುತ್ತಿದೆ. ಇತ್ತೀಚೆಗೆ ನಡೆದ ಆಕ್ರಮಣದ ಸಮಯದಲ್ಲಿ ಯುದ್ಧದ ಸಂಪೂರ್ಣ ನಿಯಂತ್ರಣವು ಭೂಮಿಯ ಅಡಿಯಲ್ಲಿ ನಿರ್ಮಿಸಿದ ಸುರಕ್ಷಿತ ಭಂಕರ್ ಗಳ ವಾರ್ ರೂಮಿನಲ್ಲಾಗಿತ್ತು.
      ಇವೆಲ್ಲಕ್ಕೂ ಶಾಶ್ವತ ಪರಿಹಾರ ಬೇಕಿದೆ. ಪೆಲಸ್ತೀನ್ ಸ್ವತಂತ್ರ ರಾಷ್ಟ್ರದ ಘೋಷಣೆ ಶೀಘ್ರವೇ ನಡೆಯಬೇಕು. ಇದಕ್ಕಾಗಿ ಜಾಗತಿಕ ಸಮುದಾಯವು ವಿಶ್ವಸಂಸ್ಥೆಯ ಮೇಲೆ ಒತ್ತಡ ಹೇರಬೇಕಾಗಿದೆ. ಸ್ವತಂತ್ರ ಪೆಲಸ್ತೀನ್ ರಾಷ್ಟ್ರ ರಚಿಸಿ UNO ತನ್ನ ಮಾತನ್ನು ಉಳಿಸುವಂತೆ ಎಲ್ಲೆಡೆ ಜನಧ್ವನಿ ಮೊಳಗಬೇಕಾಗಿದೆ. ಯುದ್ಧ ಸಮಯದಲ್ಲಿ ಟ್ವಿಟರ್ ನಂತಹ ಸಾಮಾಜಿಕ ಜಾಲ ತಾಣಗಳ ಮೂಲಕ ಹೋರಾಟ ಸಂಘಟಿಸಿದ ನ್ಯಾಯಪರರು, ಮಾನವೀಯತೆಯುಳ್ಳವರು, ಶಾಂತಿಪ್ರಿಯರು ಮತ್ತೊಂದು ಯುದ್ಧ ಆರಂಭವಾಗುವ ಮುನ್ನ ಪೆಲಸ್ತೀನ್ ಪರವಾದ ಧ್ವನಿ ಎತ್ತಬೇಕಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಕ್ಷಣ ಮಾತ್ರದಲ್ಲಿ ನಮ್ಮ ಧ್ವನಿ ಎಲ್ಲಿ ತಲುಪಬೇಕೋ ಅಲ್ಲಿಗೆ ತಲುಪಿಸಲು ಸಾಧ್ಯವಿರುವ ಜಾಲಗಳನ್ನು ಉಪಯೋಗಿಸಿಕೊಂಡು ಜನ ಸಾಮಾನ್ಯರು ವಿಶ್ವಸಂಸ್ಥೆಯ ಮೇಲೆ ಒತ್ತಡ ಹೇರಬೇಕಾಗಿದೆ. ಈ ಮೂಲಕ ಪೆಲಸ್ತೀನಿಯರಿಗೆ ತಡವಾಗಿಯಾದರು ನ್ಯಾಯ ಸಿಗುವಂತಾಗಬೇಕು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ