ಪ್ರವಾದಿ ನಿಂದಕ ಕಾರ್ಟೂನಿಸ್ಟ್‌ ಲಾರ್ಸ್ ವಿಲ್ಕ್ಸ್ ದಾರುಣ ಅಂತ್ಯ

ಪ್ರವಾದಿ ನಿಂದಕ ಕಾರ್ಟೂನಿಸ್ಟ್‌ ಲಾರ್ಸ್ ವಿಲ್ಕ್ಸ್  ದಾರುಣ ಅಂತ್ಯ

ಸ್ಟಾಕ್ ಹೋಮ್ (ಸ್ವೀಡನ್): ಪ್ರವಾದಿ ಮುಹಮ್ಮದ್(ಸ) ರವರ ಕುರಿತಾದ ವಿವಾದಾತ್ಮಕ ಕಾರ್ಟೂನ್ ತಯಾರಿಸಿದ ಸ್ವೀಡಿಷ್ ವ್ಯಂಗ್ಯಚಿತ್ರಕಾರ ಲಾರ್ಸ್ ವಿಲ್ಕ್ಸ್ ಭೀಕರ ರಸ್ತೆ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾನೆ. ಸ್ವೀಡಿಶ್ ಕಲಾವಿದ ಪ್ರವಾದಿ ಕುರಿತಾದ ವಿವಾದಾತ್ಮಕ ವ್ಯಂಗ್ಯಚಿತ್ರವನ್ನು ತಯಾರಿಸಿದ ನಂತರ ಕೊಲೆ ಬೆದರಿಕೆಗಳು ಬಂದ ಕಾರಣ ನಿರಂತರ ಪೊಲೀಸ್ ರಕ್ಷಣೆಯಲ್ಲಿಯೇ ಇದ್ದ.

      ಸ್ವೀಡಿಷ್ ಸುದ್ದಿವಾಹಿನಿ ಎಕ್ಸ್‌ಪ್ರೆಸ್ಸನ್ ಪ್ರಕಾರ ಪೋಲೀಸ್‌ ಕಾವಲಿನಲ್ಲಿದ್ದ 75 ಹರೆಯದ‌ ಕಾರ್ಟೂನಿಸ್ಟ್ ಲಾರ್ಸ್ ವಿಲ್ಕ್ಸ್‌ ಪ್ರಯಾಣಿಸುತ್ತಿದ್ದ ಕಾರು ಭಾನುವಾರ (ಅಕ್ಟೋಬರ್ 3, 2021) ಭೀಕರ ಅಪಘಾತಕ್ಕೀಡಾಗಿದೆ. ಎದುರುಗಡೆಯಿಂದ ಬಂದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಎರಡೂ ವಾಹನಗಳು ಬೆಂಕಿಗಾಹುತಿಯಾಗಿವೆ.  ಘಟನೆಯಲ್ಲಿ  ಆತನ ಇಬ್ಬರು ಬೋಡಿಗಾರ್ಡ್‌ ಪೋಲೀಸರೂ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಟ್ರಕ್ ನ 45 ವರ್ಷದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

      ಅಪಘಾತದ ಬಗ್ಗೆ ವಿಶೇಷ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಲಾರ್ಸ್ ವಿಲ್ಕ್ಸ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆಯೇ ಅಥವಾ ಪೂರ್ವಯೋಜಿತ ಅಪಘಾತ ನಡೆದಿದೆಯೇ ಎಂಬುದನ್ನು ಪತ್ತೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಪ್ರಥಮ ವರದಿಯಂತೆ ಇದೊಂದು ಸಾಮಾನ್ಯ ಅಪಘಾತ ಎನ್ನಲಾಗಿದೆ.

       2007 ರಲ್ಲಿ ನಾಯಿಯ ದೇಹದ ಮೇಲೆ ಮಾನವ ತಲೆಯನ್ನು ಚಿತ್ರಿಸಿ ಪ್ರವಾದಿಯನ್ನು ಹೋಲಿಸಿದಾಗ ವಿವಾದವು ಭುಗಿಲೆದ್ದಿತು. 2010 ರಲ್ಲಿ ಸ್ವೀಡನ್‌ನಲ್ಲಿದ್ದ ವಿಲ್ಕೆಸ್‌ನ ಮನೆಯನ್ನು ಸುಟ್ಟುಹಾಕಲು ಪ್ರಯತ್ನಿಸಲಾಗಿತ್ತು.  2014 ರಲ್ಲಿ ಆತನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಕ್ಕಾಗಿ ಮಹಿಳೆಯೋರ್ವರನ್ನು ಅಮೆರಿಕದಲ್ಲಿ ಬಂಧಿಸಲಾಗಿತ್ತು.  ಮುಂದಿನ ವರ್ಷ, ಡೆನ್ಮಾರ್ಕ್ ನ ಕೋಪನ್ ಹ್ಯಾಗನ್ ನಲ್ಲಿ ವಿಲ್ಕ್ಸ್ ಭಾಗವಹಿಸಿದ್ದ ಸಮಾರಂಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದ. ವಿಲ್ಕ್ಸ್ ವಿರುದ್ದ ಹಲವಾರು ಕೊಲೆ ಬೆದರಿಕೆಗಳಿದ್ದವು. 2015 ರಲ್ಲಿ ಹತ್ಯಾ ಪ್ರಯತ್ನವನ್ನು ನಡೆಸಲಾಗಿತ್ತು. ವಿಲ್ಕ್ಸ್‌ನನ್ನು ಕೊಂದವರಿಗೆ ಅಲ್ ಖೈದಾ 1 ಮಿಲಿಯನ್ ಡಾಲರ್ ಬಹುಮಾನವನ್ನು ಘೋಷಿಸಿದೆ. ವಿಲ್ಕೆಸ್‌ನನ್ನು ನಂತರ ಸ್ವೀಡಿಶ್ ಸರ್ಕಾರವು ಪೋಲಿಸ್ ರಕ್ಷಣೆಯಲ್ಲಿ ಇರಿಸಿತು.  ಕಾರ್ಟೂನ್ ವಿವಾದವು ಸ್ವೀಡನ್ ರಾಜತಾಂತ್ರಿಕ ಸಂಬಂಧದ ಮೇಲೆ ಪರಿಣಾಮ ಬೀರಿದ ನಂತರ ಅಂದಿನ ಸ್ವೀಡಿಷ್ ಪ್ರಧಾನಿ ಫ್ರೆಡ್ರಿಕ್ ರೀನ್ಫೆಲ್ಡ್ 22 ಮುಸ್ಲಿಂ ರಾಷ್ಟ್ರಗಳ ರಾಯಭಾರಿಗಳೊಂದಿಗೆ ಮಾತುಕತೆಯನ್ನು ನಡೆಸಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ