ಪಾಣಕ್ಕಾಡ್ ಖಾಝಿ ಫೌಂಡೇಷನ್: ಅಗತ್ಯತೆ ಮತ್ತು ಕಾರ್ಯ ಯೋಜನೆ

ಪಾಣಕ್ಕಾಡ್ ಖಾಝಿ ಫೌಂಡೇಷನ್: ಅಗತ್ಯತೆ ಮತ್ತು ಕಾರ್ಯ ಯೋಜನೆ ಕುರಿತು ಪಾಣಕ್ಕಾಡ್ ಸಯ್ಯಿದ್ ಸಾದಿಕ್ ಅಲಿ ಶಿಹಾಬ್ ತಂಙಳ್‌ರವರ ಮಲೆಯಾಳಂ ಲೇಖನವನ್ನು ಕನ್ನಡಕ್ಕೆ ಭಾಷಾಂತರಿಸಲಾಗಿದೆ. (ಭಾಷಾಂತರ: ಎ.ಎಸ್.‌ ಇಬ್ರಾಹಿಂ ಕರೀಂ, ಕಡಬ)

ಪಾಣಕ್ಕಾಡ್ ಖಾಝಿ ಫೌಂಡೇಷನ್: ಅಗತ್ಯತೆ ಮತ್ತು ಕಾರ್ಯ ಯೋಜನೆ

     ಪಾಣಕ್ಕಾಡ್ ಸಯ್ಯಿದ್ ಸಾದಿಕ್ ಅಲಿ ಶಿಹಾಬ್ ತಂಙಳ್‌ರವರ ಮಲೆಯಾಳಂ ಲೇಖನವನ್ನು ಕನ್ನಡಕ್ಕೆ ಭಾಷಾಂತರಿಸಲಾಗಿದೆ. (ಭಾಷಾಂತರ: ಎ.ಎಸ್.‌ ಇಬ್ರಾಹಿಂ ಕರೀಂ, ಕಡಬ)

      ಪಾಣಕ್ಕಾಡ್‌ ಖಾಝಿ ಫೌಂಡೇಶನ್ ಎಂಬುದು ನಿರ್ಮಾಣಾತ್ಮಕತೆ ಮತ್ತು ಸಕ್ರಿಯ ಕಾರ್ಯ ಯೋಜನೆಯ ಫಲವಾಗಿದೆ. ಪಾಣಕ್ಕಾಡ್‌ ಕುಟುಂಬ ಸದಸ್ಯರು ಖಾಝಿಯಾಗಿರುವ ಮಹಲ್ಲುಗಳ ಒಕ್ಕೂಟವೊಂದನ್ನು ರಚಿಸುವುದು ಬಹು ದಿನಗಳ ಕನಸಾಗಿತ್ತು. ಸಯ್ಯಿದ್‌ ಹೈದರಲಿ ತಂಙಳ್‌ರವರ ವಫಾತ್‌ ನಂತರ ನನಗೆ ಹಲವಾರು ಮಹಲ್ಲುಗಳ ಖಾಝಿ ಸ್ಥಾನವನ್ನು ವಹಿಸಿಕೊಳ್ಳಬೇಕಾಗಿ ಬಂತು. ಖಾಝಿಯ ಜವಾಬ್ದಾರಿಯನ್ನು ನ್ಯಾಯಯುತವಾಗಿ ಮತ್ತು ಸಕ್ರಿಯವಾಗಿ ನಿರ್ವಹಿಸಲು ಅನುಕೂಲವಾಗುವಂತಹ ಕೇಂದ್ರವೊಂದರ ಸ್ಥಾಪನೆಯ ಕುರಿತು ಅಂದಿನಿಂದಲೇ ಯೋಚಿಸುತ್ತಿದ್ದೆ.

      ಸಯ್ಯಿದ್ ಜಿಫ್ರಿ ತಂಙಳ್‌ರವರು ಖಾಝಿಯಾಗಿರುವ ಮಹಲ್ಲ್‌ಗಳನ್ನು  ಒಗ್ಗೂಡಿಸಿ ಕಾಂಞಂಗಾಡಿನಲ್ಲಿ ವ್ಯವಸ್ಥಿತ ಚಟುವಟಿಕೆಗಳು ನಡೆಯುತ್ತಿದೆ. ಶೈಖುಲ್ ಜಾಮಿಅ ಪ್ರೊ.ಆಲಿಕುಟ್ಟಿ ಮುಸ್ಲಿಯಾರ್ ಖಾಝಿಯಾಗಿರುವ ಮಹಲ್ಲ್‌ಗಳನ್ನು ಒಗ್ಗೂಡಿಸಿ, ಕಾಸರಗೋಡು ಖಾಝಿ ಹೌಸ್ ಮುಖಾಂತರ ನಡೆಯುತ್ತಿರುವ   ಚಟುವಟಿಕೆಗಳು ಮಾದರಿ ಎನಿಸಿವೆ. ಈ ಎಲ್ಲಾ ಮಾದರಿಗಳು ಮತ್ತು ನಿದರ್ಶನಗಳು ಪಾಣಕ್ಕಾಡ್ ಖಾಝಿ ಫೌಂಡೇಶನ್‌ಗೆ ಪ್ರೇರಣೆ ಮತ್ತು ಮಾದರಿಯಾಗಿದೆ.

      ನಮ್ಮ ತಂದೆಯವರಾದ ಪಾಣಕ್ಕಾಡ್ ಸಯ್ಯಿದ್ PMSA ಪೂಕೋಯ ತಂಙಳ್‌ರವರು ನಮ್ಮ ಕುಟುಂಬದಿಂದ ಪ್ರಥಮವಾಗಿ ಹಲವು ಮಹಲ್ಲ್‌ಗಳ ಖಾಝಿಯಾಗಿ ನೇಮಕಗೊಂಡಿದ್ದರು. ಮಲಬಾರ್ ಮತ್ತು ನೀಲಗಿರಿಯ ಸುಮಾರು 80 ಮಹಲ್ಲ್‌ಗಳಲ್ಲಿ ಪೂಕೋಯ ತಂಙಳ್‌ರವರು ಖಾಝಿಯಾಗಿದ್ದರು. ತಂದೆಯವರ ಮರಣಾ ನಂತರ ಸಯ್ಯಿದ್ ಮುಹಮ್ಮದ್ ಅಲಿ ಶಿಹಾಬ್ ತಂಙಳ್, ಸಯ್ಯಿದ್ ಉಮರಲಿ ಶಿಹಾಬ್ ತಂಙಳ್ ಹಾಗೂ ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್‌ರವರು ಹಲವರು ಮಹಲ್ಲ್‌ಗಳಲ್ಲಿ ಖಾಝಿಯಾಗಿ ಕಾರ್ಯ ನಿರ್ವಹಿಸಿದ್ದರು. ಆ ಪರಂಪರೆಯನ್ನು ಮುಂದುವರಿಸುತ್ತಾ ಈಗಲೂ ಪಾಣಕ್ಕಾಡ್ ಕುಟುಂಬದವರು ನೂರಾರು ಮಹಲ್ಲ್‌ಗಳ ಖಾಝಿ ಸ್ಥಾನವನ್ನು ನಿರ್ವಹಿಸುತ್ತಿದ್ದಾರೆ.

      ಮಸ್ಜಿದುನ್ನಭವಿ ಕೇಂದ್ರವಾಗಿರಿಸಿ ಪ್ರವಾದಿ (ಸ.ಅ.) ಮದೀನಾದಲ್ಲಿ ಸ್ಥಾಪಿಸಿದ ವ್ಯವಸ್ಥೆಯ ಪೂರ್ವ ಮಾದರಿಯಾಗಿದೆ ಕೇರಳದ ಮಹಲ್ಲ್ ವ್ಯವಸ್ಥೆ. ಹಿಜರಾ ನಂತರ ಪ್ರವಾದಿ (ಸ.ಅ.)ರವರ ಮುಂದಾಳತ್ವದಲ್ಲಿ ಎರಡು ಮಸೀದಿಗಳನ್ನು ನಿರ್ಮಿಸಲಾಯಿತು. ಅದು ಪ್ರವಾದಿಯವರು ಸ್ಥಾಪಿಸಿದ ದೇಶ ರಾಷ್ಟ್ರದ ಕೇಂದ್ರ ಸ್ಥಾನವಾಗಿತ್ತು. ಮುಸ್ಲಿಂ ಸಮುದಾಯದ ಒಗ್ಗೂಡುವಿಕೆಯಿಂದ ಸ್ಥಾಪನೆ ಯಾಗುವ ಸಾಮಾಜಿಕ ವ್ಯವಸ್ಥೆಯ ಮಾದರಿಯನ್ನು ಮದೀನಾದ ಮೂಲಕ ಪ್ರವಾದಿ(ಸ.ಅ.) ನಮಗೆ ತೋರಿಸಿಕೊಟ್ಟಿದ್ದಾರೆ. ಭಾರತದ ಪರಿಸರದಲ್ಲಿ ಭಾಗಶಃವಾದರೂ ಮದೀನಾದ ಸಾಮಾಜಿಕ ಮಾದರಿಯನ್ನು ಕೇರಳದಲ್ಲಿ ಉಳಿಸಿಕೊಳ್ಳಲು ನಮಗೆ ಸಾಧ್ಯವಾಗಿದೆ. ಜುಮಾ ಮಸೀದಿಗಳನ್ನು ಕೇಂದ್ರೀಕರಿಸಿರುವ ಮಹಲ್ ವ್ಯವಸ್ಥೆಯ ಮೂಲಕ ನಮಗೆ ಅದು ಸಾಧ್ಯವಾಗಿದೆ.

      ವೈವಿಧ್ಯತೆಯ ಸಮಾಜದಲ್ಲಿ ಇಸ್ಲಾಮಿ ಪ್ರಬೋಧನೆಯನ್ನು ಸಾಧ್ಯವಾಗಿಸಲು ಕೆಲವೊಂದು ಆದ್ಯತಾ ಕ್ರಮಗಳನ್ನು ಪ್ರವಾದಿ(ಸ.ಅ.) ರವರು ಅನುಸರಿಸಿದ್ದರು. ಸೌಹಾರ್ದತೆ ಮತ್ತು ಶಾಂತಿಯುತ ಸಾಮಾಜಿಕ ಪರಿಸರ ಅದರಲ್ಲಿ ಮೊದಲನೆಯದಾಗಿತ್ತು. 120 ವರ್ಷಗಳ ಕಾಲ ಮುಂದುವರಿದಿದ್ದ ಔಸ್-ಖಝ್‌ರಜ್ ಗೋತ್ರಗಳ ಮಧ್ಯೆ ಇದ್ದ ವಿದ್ವೇಷವನ್ನು ನೆಬಿ(ಸ.ಅ.) ಸೌಹಾರ್ದಯುತವಾಗಿ ನಿಭಾಯಿಸಿದ್ದರು. ಮಕ್ಕಾ ಮತ್ತು ಮಗೀನ ಎಂಬ ಎರಡು ಭಿನ್ನ ದೇಶಗಳ ವ್ಯತ್ಯಸ್ತ ಸಂಸ್ಕೃತಿಯಲ್ಲಿ ಬದುಕಿದ್ದ ಮಹಾಜಿರ್ ಮತ್ತು ಅನ್ಸಾರಿಗಳ ಮಧ್ಯೆ ಬಿಡಿಸಲಾಗದ ಸಾಹೋದರ್ಯತೆಯನ್ನು ಬೆಸೆದರು. ಪ್ರವಾದಿ (ಸ.ಅ.) ಇಸ್ಲಾಮಿನ ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಒಪ್ಪದಿದ್ದ ಯಹೂದಿ ಗೋತ್ರಗಳೊಂದಿಗೆ ಸಾಮಾಜಿಕ ಸೌಹಾರ್ದತೆಯನ್ನು ಮೂಡಿಸಿದರು. ಕಾಲಾಂತರದಲ್ಲಿ ಆ ಸೌಹಾರ್ದತೆಯು ಸಡಿಲವಾಗಿವಾಗದಿರಲೆಂದು ಪ್ರವಾದಿ (ಸ.ಅ.) ಪ್ರಮಾಣವೊಂದನ್ನು ತಯಾರಿಸಿದರು. ಆ ಐತಿಹಾಸಿಕ ಪ್ರಮಾಣವೇ ಮದೀನಾ ಒಡಂಬಡಿಕೆ.

      ನಮ್ಮ ಮಹಲ್ಲ್ ವ್ಯವಸ್ಥೆಯಲ್ಲಿ ನೆಲೆ ನಿಂತಿರುವ ಸಾಮಾಜಿಕ ಐಕ್ಯತೆ ಮತ್ತು ಸಾಮುದಾಯಿಕ ಸೌಹಾರ್ದತೆಯು ಮದೀನಾ ವ್ಯವಸ್ಥೆಯೊಂದಿಗೆ ಕೆಲವೊಂದು ಸಾಮೀಪ್ಯವವನ್ನು ಹೊಂದಿದೆ. ಪರಂಪರಾಗತವಾಗಿ ನಮ್ಮ ಮಹಲ್ಲ್‌ಗಳಲ್ಲಿರುವ ಮುಸ್ಲಿಂ ಐಕ್ಯತೆಯು ಅಹ್ಲುಸ್ಸುನ್ನತ್-ವಲ್ ಜಮಾಅತಿನ ಆದರ್ಶದಲ್ಲಿ ಭದ್ರವಾಗಿ ನೆಲೆಯೂರಿದ್ದಾಗಿದೆ. ಈ ಐಕ್ಯವು ಎಂದೆಂದಿಗೂ ಮುಂದುವರಿಯಬೇಕು.

      ಕೇರಳದ ಮಹಲ್ ವ್ಯವಸ್ಥೆಯು ಶತಮಾನಗಳ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ. ಪ್ರಥಮ ಪ್ರಬೋಧಕರಾದ ಮಾಲಿಕ್ ಬಿನ್ ದೀನಾರ್(ರ) ಮತ್ತು ಸಂಗಡಿಗರು ಕರಾವಳಿ ಪ್ರದೇಶದಲ್ಲಿ ನೆಲೆಸಿದ್ದರು. ಅಲ್ಲೆಲ್ಲಾ ಅವರು ಮಸೀದಿಗಳನ್ನು ಸ್ಥಾಪಿಸಿದರು. ಆ ಮಸೀದಿಗಳನ್ನು ಕೇಂದ್ರವಾಗಿಟ್ಟು ಕೊಂಡು ಅವರು ದೀನೀ ಪ್ರಬೋಧನೆಯನ್ನು ಮುಂದುವರಿಸಿದ್ದರು. ಕಾಲಾ ನಂತರದಲ್ಲಿ ಇಸ್ಲಾಮಿನ ಬೆಳವಣಿಗೆ ಮತ್ತು ವಿಕಸಣವು ಆಯಾ ಪ್ರದೇಶದ ಮಸೀದಿಗಳ ಮುಖಾಂತರವೇ ಆಯಿತು. ವಿಶ್ವಾಸಿಗಳ ಮಸೀದಿ ಮತ್ತು ಮದ್ರಸ, ಪಂಚಾಯತ್,  ಸಂಸತ್ತು ಮತ್ತು ನ್ಯಾಯಾಲಯ ಎಲ್ಲವೂ ಮಸೀದಿಗಳೇ ಆಗಿದ್ದ ಕಾಲವೊಂದಿತ್ತು. ಆ ಮಸೀದಿಗಳ ಖಾಝಿ ಮತ್ತು ಅದರ ಮುಖ್ಯಸ್ಥರು ಮುಸ್ಲಿಂ ಸಮುದಾಯದ ದಿಶಾ ನಿರ್ಣಾಯಕರಾಗಿದ್ದರು. ಮಾಪಿಲ್ಲ ಸಮುದಾಯದ ವಿಚಾರಗಳಲ್ಲಿ ಖಾಝಿಗಳ ತೀರ್ಪುಗಳನ್ನೇ ಅಂದಿನ ನಾಡಪ್ರಭುಗಳೂ ಕಾಯುತ್ತಿದ್ದರು.

      ಮಲಬಾರ್ ದಂಗೆಯ ನಂತರ ಕೇರಳ ಮುಸ್ಲಿಮರ ಮಧ್ಯೆ ನೂತನ ಆಶಯಗಳು ಮತ್ತು ಒಡಕು ಧ್ವನಿಗಳು ಕೇಳತೊಡಗಿತ್ತು. ಇದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸ್ಥಾಪನೆಯಾಗಲು ಕಾರಣವಾಯಿತು. ಮುಸ್ಲಿಂ ಉಮ್ಮತ್ತನ್ನು ಪರಂಪರಾಗತ ಮಾರ್ಗದಲ್ಲಿ ಮುನ್ನಡೆಸಲು ಸಮಸ್ತ ಕಟಿ ಬದ್ಧವಾಯಿತು. ಸಮಸ್ತ ಗಟ್ಟಿಯಾಗಿ ಬೇರೂರಿ ಬೆಳೆಯಲು ವ್ಯವಸ್ಥಿತವಾಗಿದ್ದ ಮಹಲ್ಲ‌ಗಳು ಕಾರಣವಾಯಿತು. ಕಾಲದ ಗೋಡೆ ಬರಹವನ್ನು ಗಮನಿಸುತ್ತಾ ಅದರ ಅನುಸಾರ ಕಾರ್ಯ ಚಟುವಟಿಕೆಯನ್ನು ರೂಪಿಸುತ್ತಾ ಸಮಸ್ತ ಬೆಳೆದು ಬಂತು. ಇಂದು ಕಾಣುವ ಸುಸಜ್ಜಿತ ಮಹಲ್ಲ್  ವ್ಯವಸ್ಥೆಯ ಬೆಳವಣಿಗೆಗೆ ಸಮಸ್ತದ ಕೊಡುಗೆಯೂ ಅಪಾರ.

      ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಾವು ಸೃಷ್ಟಿಸಿದ ಕೇರಳ ಮಾದರಿಯು ಸಮಸ್ತ ನಡೆಸಿದ ನವೋತ್ಥಾನ ಚಟುವಟಿಕೆಯ ಫಲವಾಗಿದೆ. ಇಂದು ಮುಸ್ಲಿಂ ಸಮುದಾಯ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಅವೆಲ್ಲವನ್ನು ನಿವಾರಿಸಿ ಮುನ್ನಡೆಯಬೇಕಿದ್ದು, ಅದಕ್ಕೆ ಇಂದಿನ ಮಹಲ್ಲ್ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಶಕ್ತಿ ತುಂಬುವ ಹೊಸ ಆಲೋಚನೆಗಳು, ಆಶಯಗಳು, ಕಾರ್ಯಯೋಜನೆಗಳು ಬೇಕು. ಅದಕ್ಕಾಗಿ ಪಾನಕ್ಕಾಡ್ ಖಾಝಿ ಫೌಂಡೇಶನ್ ಎಂಬ ಚಿಂತನೆ ಜಾರಿಗೆ ತರಲಾಗಿದೆ. ವ್ಯವಸ್ಥಿತವಾದ ಮತ್ತು ಕಾರ್ಯಸಾಧುವಾದ ಗುರಿಯನ್ನು ಮುಂದಿಟ್ಟುಕೊಂಡು ಪಯಣ ಬೆಳೆಸಲಿದೆ ಪಾಣಕ್ಕಾಡ್ ಖಾಝಿ ಫೌಂಡೇಷನ್.

ಫೌಂಡೇಶನ ಧ್ಯೇಯ:


  1. ಪಾಣಕ್ಕಾಡ್ ಕುಟುಂಬದವರು  ಖಾಝಿಯಾಗಿರುವ ಮಹಲ್ಲ್‌ಗಳ ಒಕ್ಕೂಟದ ಮುಖಾಂತರ ಖಾಝಿ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗಿಸುವುದು. ಕೆಲಸ ಕಾರ್ಯಗಳ ಒತ್ತಡದ ಮಧ್ಯೆ        ಮಹಲ್ಲ್‌ಗಳ ದೀನೀ ಚಟುವಟಿಕೆಗಳಲ್ಲಿ ಖಾಝಿಗಳ ಭಾಗವಹಿಸುವಿಕೆಯು ಒಂದು ವ್ಯವಸ್ಥಿತ ಯೋಜನೆಯ ಮೂಲಕ ಮಾತ್ರ ಸಾಧ್ಯ. ಖಾಝಿಯವರು ಅನಿವಾರ್ಯವಾಗುವಮನತಹ ಸಮಸ್ಯೆಗಳು ಪ್ರತಿ ಮಹಲ್ಲ್‌ಗಳಲ್ಲೂ ದಿನನಿತ್ಯ ಹೆಚ್ಚುತ್ತಲೇ ಇದೆ. ಹಲವು ಸಮಸ್ಯೆಗಳು ನ್ಯಾಯಾಲಯದ ಕಟಕಟೆ ಏರುವ ಪರಿಸ್ಥಿತಿ ಕೂಡ ಇದೆ. ಇದರಿಂದ ಹಣದ ಖರ್ಚು ಮತ್ತು ಸಮಯ ನಷ್ಟವಲ್ಲದೆ ಶಾಶ್ವತ ಪರಿಹಾರ ಸಾಧ್ಯವಾಗಲಾರದು. ಮಹಲ್ಲ್ ಆಡಳಿತ ಸಮಿತಿಗಳು ಮತ್ತು ಖಾಝಿಗಳ ನೇತೃತ್ವದಲ್ಲಿ ನ್ಯಾಯಯುತ ಸಂಧಾನಗಳು ಖಾಝಿ ಫೌಂಡೇಶನ್ ಮೂಲಕ ಸಾಧ್ಯವಾಗಿಸಿ ಸುಭದ್ರ ಮತ್ತು ಸೌಹಾರ್ದಯುತ ಮಹಲ್ಲ್‌ಗಳ ನಿರ್ಮಾಣ ಸಾಧ್ಯವಾಗಿಸುವುದು.
  2. ಖಾಝು ಭವನ ಸ್ಥಾಪನೆ ಫೌಂಡೇಶನ್ ಗುರಿ. ಆ ಮೂಲಕ ಮಹಲ್ಲ್‌ಗಳ ಸಂಪೂರ್ಣ ಮಾಹಿತಿಯನ್ನು ಆಧುನಿಕ ತಂತ್ರಜ್ಞಾನ ಉಪಯೋಗಿಸಿ ಒಂದೆಡೆ ಶೇಖರಿಸಿಡಲು ಸಾಧ್ಯವಾಗುತ್ತದೆ. ಮಹಲ್ಲ್‌ಗಳೊಂದಿಗೆ ಅಧಿಕೃತವಾಗಿ ಮತ್ತು ಪಾರದರ್ಶಕವಾಗಿ ವಿಚಾರ ವಿನಿಮಯ ಸಾಧ್ಯವಾಗುತ್ತದೆ. ಧಾರ್ಮಿಕ ವಿಚಾರಗಳಲ್ಲಿ ಖಾಝಿಯವರನ್ನು ಭೇಟಿಯಾಗಬೇಕಾದವರಿಗೆ ಈ ಮೂಲಕ ಕ್ಲಪ್ತ ಸಮಯಕ್ಕೆ ತಮ್ಮ ಕಾರ್ಯಗಳನ್ನು ಪೂರೈಸಲು ಸಾಧ್ಯವಾಗುವುದು.
  3. ಮೊಹಲ್ಲಗಳ ಒಗ್ಗಟ್ಟು ಕಾಪಾಡುವುದು. ಪ್ರವಾದಿ(ಸ.ಅ.)ರವರ ಕಾಲದಲ್ಲೇ ಇಸ್ಲಾಂ ಸಂದೇಶ ತಲುಪಿದ್ದ ಕೇರಳದ ಮುಸ್ಲಿಮರ ವಿಶ್ವಾಸ, ಆಚಾರ-ಅನುಷ್ಠಾನಗಳ ಪರಂಪರೆ ಮತ್ತು ಸತ್ಯಪಥವನ್ನು ಸಂಪೂರ್ಣವಾಗಿ ಪಾಲಿಸುತ್ತಾ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಆಶಯ-ಆದರ್ಶಗಳ ಸರಣಿಯಲ್ಲಿ ಸಾಗುತ್ತಾ ಮುಸ್ಲಿಂ ಉಮ್ಮತ್ತಿನ ಒಗ್ಗಟ್ಟನ್ನು ಕಾಪಾಡುವುದು ಭಾರತೀಯ ಪರಿಸರದಲ್ಲಿ ಬಹಳ ಮುಖ್ಯವಾಗಿದೆ. ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹಲವಾರು ಸವಾಲುಗಳನ್ನು ಮುಸ್ಲಿಂ ಸಮುದಾಯವು ಎದುರಿಸುತ್ತಿದೆ. ಸಮಾನ ನಾಗರಿಕ ಸಂಹಿತೆ, ಪೌರತ್ವ ಕಾನೂನು, ಮಸೀದಿಗಳ ಮತ್ತು ದರ್ಗಾಗಳ ಮೇಲಿನ ಸಂಘ ಪರಿವಾರದ ಬೆದರಿಕೆ ಮೊದಲಾದವುಗಳು. ಇವೆಲ್ಲಾ ನಾವು ಒಗ್ಗಟ್ಟಾಗಿ ಎದುರಿಸಬೇಕಾದ ಸಮಸ್ಯೆಗಳಲ್ಲಿ ಕೆಲವು ಮಾತ್ರ. ಕಾನೂನು ಹೋರಾಟವಾದರೂ, ರಾಜಕೀಯ ಪ್ರತಿರೋಧವಾದರೂ ನಮ್ಮಲ್ಲಿ ಒಗ್ಗಟ್ಟಿಲ್ಲದಿದ್ದರೆ ಜಯ ಸಾಧ್ಯವಾಗದು.
  4. ಅಮಲುಮುಕ್ತ ಮೊಹಲ್ಲ: ಸಮಾಜವನ್ನು ಕಾಡುತ್ತಿರುವ ಬಹು ದೊಡ್ಡ ಪಿಡುಗು ಮಾದಕ ಪದಾರ್ಥಗಳ ಹಾವಳಿ. ಶಾಲಾ ಕಾಲೇಜುಗಳಲ್ಲೂ, ಕ್ಯಾಂಪಸ್‌ಗಳಲ್ಲೂ ವ್ಯಾಪಕವಾಗಿ ಮಾದಕ ವ್ಯಸನವು ಹರಡುತ್ತಿದೆ. ಸಮಗ್ರವಾದ ಕಾರ್ಯ ಸೂಚಿಯೊಂದಿಗೆ ಮೊಹಲ್ಲಾಗಳಲ್ಲಿ ಮಾದಕ ಪದಾರ್ಥಗಳ ವಿರುದ್ಧ ಆಂದೋಲನವು ನಡೆಯದಿದ್ದರೆ ಭವಿಷ್ಯ ಭಯಾನಕವಾದೀತು. ಸುನ್ನಿ ಮಹಲ್ ಫೆಡರೇಷನ್, ಸರಕಾರದ ಏಜೆನ್ಸಿಗಳು ಮೊದಲಾದವುಗಳೊಂದಿಗೆ ಸಹಕರಿಸಿ ಖಾಝಿ ಫೌಂಡೇಶನ್ ವತಿಯಿಂದ ಮೊಹಲ್ಲಾಗಳನ್ನು ಮಾದಕ ಮುಕ್ತವಾಗಿಸಲು ಸಾಧ್ಯವಾದೀತು.
  5. ನವ ಲಿಬರಲ್ ಚಿಂತನೆಯನ್ನು ಪ್ರತಿರೋಧಿಸುವುದು:
    ಯುವ ಜನಾಂಗವನ್ನು ಸೆಳೆಯುತ್ತಿರುವ ನವ ಲಿಬರಲ್ ಚಿಂತನೆಯು ಮುಸ್ಲಿಂ ಸಮುದಾಯವನ್ನು ಆತಂಕಕ್ಕೀಡು ಮಾಡುವ ಹೊಸ ಪಿಡುಗು. ಇದು ಸ್ವತಂತ್ರ ಚಿಂತನೆ, ಯುಕ್ತಿವಾದ, LGBTQ+ ರಾಜಕೀಯವೆಲ್ಲವೂ ಲಿಬರಲ್ ಚಿಂತನೆಯ ಭಾಗ. ಸರಕಾರ ಮತ್ತು ಅದರ ಅಂಗಗಳು ಈ ಲಿಬರಲ್ ಚಿಂತನೆಯನ್ನು ಯುವ ಪೀಳಿಗೆಗೆ ತಲುಪಿಸಲು ತಮ್ಮ ಪರಿಕರಗಳನ್ನು ಬಳಸುತ್ತಿರುವುದು ಇತ್ತೀಚೆಗೆ ವ್ಯಾಪಕ ಚರ್ಚೆಗೆ ಗ್ರಾಸವಾದ ವಿಚಾರ. ಸಾಮಾಜಿಕ ಸಂವಿಧಾನವನ್ನೂ, ಕುಟುಂಬ ವ್ಯವಸ್ಥೆಯನ್ನೂ ಚಿದ್ರಗೊಳಿಸುವ ಈ ಪಿಡುಗನ್ನು ಪ್ರತಿರೋಧಿಸಬೇಕಾದದ್ದು ಮೊಹಲ್ಲಾಗಲ ಕರ್ತವ್ಯ.
  6. ಶಿಕ್ಷಣಕ್ಕೆ ಆರ್ಥಿಕ ಸಹಾಯ: ಸಾಮಾಜಿಕ ಅಭಿವೃದ್ಧಿ ಮತ್ತು ನವ ಜಾಗೃತಿಯ ಆಧಾರ ಶಿಕ್ಷಣ. ಶಿಕ್ಷಿತರು ಸಾಮಾಜಿಕ ಜೀವನ ಕ್ರಮವನ್ನು ನಿರ್ಣಯಿಸುವ ಇಂದಿನ ದಿನಗಳಲ್ಲಿ ನಾವು ಹೆಚ್ಚಾಗಿ ಶಿಕ್ಷಣ ಕ್ಷೇತ್ರದಲ್ಲಿ ಗಮನಹರಿಸಬೇಕಾಗಿದೆ. ನಮ್ಮ ಪ್ರಾತಿನಿಧ್ಯ ಕಡಿಮೆ ಇರುವ, ನಾವು ಅಗತ್ಯವಾಗಿ ಪಾಲುಗೊಲ್ಲಬೇಕಾದ ಕ್ಷೇತ್ರಗಳು ಯಾವುದೆಂದು ಮೊಹಲ್ಲಾಗಳಿಗೆ ಸರಿಯಾದ ಯೋಚನೆ ಇರಬೇಕು. ಸಮರ್ಥರಾದ ವಿದ್ಯಾರ್ಥಿಗಳನ್ನು ಹುಡುಕಿ ಅವರಿಗೆ ಯೋಗ್ಯವಾದ ಕೋರ್ಸುಗಳ ಬಗ್ಗೆ ಮಾಹಿತಿ ನೀಡಬೇಕು. ಆರ್ಥಿಕ ಮುಗ್ಗಟ್ಟಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಗತ್ಯ ನೆರವನ್ನು ನೀಡಿ ಅವರು ಶಿಕ್ಷಣವನ್ನು ಮುಂದುವರಿಸಲು ನೆರವಾಗಬೇಕು. ಖಾಝು ಫೌಂಡೇಶನ್ ಮುಖಾಂತರ ಶಿಕ್ಷಣಕ್ಕೆ ಸಹಾಯ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಧಾರ್ಮಿಕ-ಲೌಕಿಕ ಕ್ಷೇತ್ರದ ಹಲವಾರು ವಿದ್ಯಾರ್ಥಿಗಳಿಗೆ ಇದೊಂದು ಉಪಯುಕ್ತ ಸಹಾಯವಾದೀತೆಂದು ನಮ್ಮ ನಿರೀಕ್ಷೆ.
  7. ದೀನಿ ಸೇವಕರ ಜೀವನ ಮಟ್ಟ ಸುಧಾರಣೆ: ಪ್ರತಿಯೊಂದು ಮೊಹಲ್ಲಾದ ಚಾಲಕ ಶಕ್ತಿ ಆಯಾ  ಮೊಹಲ್ಲಾದ ಖತೀಬರು, ಮುದರ್ರಿಸ್ ಮತ್ತು ಮುಅಝ್ಝಿನ್‌ಗಳು. ಅವರ ಜೀವನ ಮಟ್ಟವನ್ನು ಕಾಲಾನುಸಾರವಾಗಿ ಸುಧಾರಿಸುವ ಕರ್ತವ್ಯ ಮೊಹಲ್ಲಾಗಳದ್ದು‌ ಅದಕ್ಕಾಗಿ ಖಾಝಿ ಫೌಂಡೇಶನ್ ಮೊಹಲ್ಲಾಗಳೊಂದಿಗೆ ಕೈಜೋಡಿಸುವುದು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ