ನೌಷಾದ್‌ ಹಾಜಿ ನಿಧನಕ್ಕೆ ಅನಿವಾಸಿ ನಾಯಕರಿಂದ ಸಂತಾಪ: ಮಂಗಳವಾರ ರಾತ್ರಿ ದುಬೈಯಲ್ಲಿ ಅನುಸ್ಮರಣೆ

ನೌಷಾದ್‌ ಹಾಜಿ ನಿಧನಕ್ಕೆ ಅನಿವಾಸಿ ನಾಯಕರಿಂದ ಸಂತಾಪ: ಮಂಗಳವಾರ ರಾತ್ರಿ ದುಬೈಯಲ್ಲಿ ಅನುಸ್ಮರಣೆ

ದುಬೈ: ಸಮಸ್ತ ಮದ್ರಸ ಮ್ಯಾನೇಜ್‌ಮೆಂಟ್ ದ.ಕ.ಜಿಲ್ಲಾ‌ ಸಮಿತಿ ಅಧ್ಯಕ್ಷರಾದ ನೌಷಾದ್‌ ಹಾಜಿ ಸೂರಲ್ಪಾಡಿಯವರ ನಿಧನಕ್ಕೆ ಅನಿವಾಸಿ ಸಂಘ ಸಂಸ್ಥೆಗಳ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

      ಸದಾ ಹಸನ್ಮುಖಿಯಾಗಿದ್ದ ನೌಷಾದ್‌ ಹಾಜಿಯವರ ಸೇವಾ ಮನೋಭಾವವನ್ನು ಕೊಂಡಾಡಿದ ನಾಯಕರು,ಅವರ ಮರಣವು ಸಮುದಾಯದ ಬಡ-ಬಗ್ಗರಿಗೂ, ಸಮಾಜಕ್ಕೂ ಅಪಾರ ನಷ್ಟವನ್ನುಂಟು ಮಾಡಿದೆ ಎಂದು ಹೇಳಿದರು.

      ಯುಎಇ ವಿವಿಧ ಸಂಘ ಸಂಸ್ಥೆಗಳ ಪೋಷಕರಾಗಿರುವ ಜನಾಬ್ ಸಂಶುದ್ದೀನ್ ಸೂರಲ್ಪಾಡಿಯವರ ಸಹೋದರ ನೌಶಾದ್ ಹಾಜಿ ನಮ್ಮ ಆತ್ಮೀಯ ಮಿತ್ರರೂ, ನಮ್ಮ ಪ್ರೀತಿ ಪಾತ್ರರೂ, ಸಮಾಜ ಸೇವಕರೂ, ಧಾರ್ಮಿಕ ಮುಖಂಡರೂ , ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯೂ, ಬಡ  ಹೆಣ್ಣುಮಕ್ಕಳ ಕಲ್ಯಾಣ ಭಾಗ್ಯದ ನಂಡೆ ಪೆಂಙಳ್‌ (ನನ್ನ ಸಹೋದರಿ) ಅಭಿಯಾನದ ರುವಾರಿಯೂ, ಕೊಡುಗೈ ದಾನಿಯೂ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪ್ರಮುಖ ನೇತಾರರೂ, ದಾರುನ್ನೂರ್ ಕಾಶಿಪಟ್ಣ ಇದರ ಸ್ಥಾಪಕ ಸದಸ್ಯ ಮತ್ತು ಪ್ರಸಕ್ತ ಕಾರ್ಯದರ್ಶಿಯೂ, ದಾರುಸ್ಸಲಾಂ ಬೆಳ್ತಂಗಡಿ ಟ್ರಸ್ಟ್ ಇದರ ಕೋಶಾಧಿಕಾರಿಯೂ ಆಗಿದ್ದಾರೆ. ಅವರ ವಿದಾಯವು ಅವರನ್ನು ಬಲ್ಲ ಎಲ್ಲರನ್ನೂ ಧಿಗ್ಭ್ರಾಂತಿಗೆ ಒಳಪಡಿಸಿದೆ. ಅವರ ಅಗಳಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹನು ಆ ಕುಟುಂಬಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸಿದರು.

      ಅವರ ಪರಲೋಕ ವಿಜಯಕ್ಕೆ ಎಲ್ಲಾ ಸಹೃದಯರು ಪ್ರಾರ್ಥನೆ ಮಾಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

      SKSSF ಕರ್ನಾಟಕ ರಾಜ್ಯ ಯುಎಇ ಸಮಿತಿ ನೇತೃತ್ವದಲ್ಲಿ ಮರ್ಹೂಂ ನೌಶಾದ್ ಹಾಜಿ ಸೂರಲ್ಪಾಡಿ, ಧಾರ್ಮಿಕ, ಸಾಮಾಜಿಕ ಅನಿವಾಸಿ ಕಾರ್ಯಕರ್ತ ಅಶ್ರಫ್ ಪರ್ಲಡ್ಕ ಅವರ ತಾಯಿ ಮರ್ಹೂಂ ಮರಿಯಮ್ಮ ಗೋಳಿಕಟ್ಟೆ ಹಾಗೂ ನೌಶಾದ್ ಹಾಜಿ ಸೂರಲ್ಪಾಡಿಯವರ ಚಾಲಕ ಎಸ್‌ಕೆಎಸ್‌ಎಸ್‌ಎಫ್ ಸಕ್ರಿಯ ಕಾರ್ಯಕರ್ತ ಮುಶ‌ರ‍್ರಫ್ ಉಳಾಯಿಬೆಟ್ಟು‌ ಇವರುಗಳ ಹೆಸರಲ್ಲಿ ದುಆ ಮಜ್ಲಿಸ್, ಖತಮುಲ್ ಕುರ್‌ಆನ್, ತಹಲೀಲ್ ಸಮರ್ಪಣೆ ಮತ್ತು ಅನುಸ್ಮರಣೆ ಕಾರ್ಯಕ್ರಮವನ್ನು ಜನವರಿ 3 ಮಂಗಳವಾರದಂದು ನಡೆಸಲಾಗುವುದು. ಸಯ್ಯದ್ ಆಸ್ಕರ್ ಅಲಿ ತಂಗಳ್ ಕೋಲ್ಪೆಯವರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ರಾತ್ರಿ 9:00 ಗಂಟೆಗೆ ಸರಿಯಾಗಿ ಅಬು ಹೈಲ್‌ನಲ್ಲಿರುವ KMCC ಹಾಲ್‌ನಲ್ಲಿ ಜರುಗಲಿರುವುದು.

      ಮೃತರ ಪಾರತ್ರಿಕ ವಿಜಯಕ್ಕಾಗಿ ಮಾಡುವ ಈ ದುಆ ಕಾರ್ಯದಲ್ಲಿ ಯುಎಇಯಲ್ಲಿರುವ ಎಲ್ಲಾ ಸಂಘ ಸಂಸ್ಥೆಗಳ ಕಾರ್ಯಕರ್ತರು ಸಕ್ರಿಯರಾಗಿ ಪಾಲ್ಗೊಳ್ಳಬೇಕೆಂದು ಅವರು ಸಾರ್ವಜನಿಕವಾಗಿ ವಿನಂತಿಸಿ ಕೊಂಡರು.

      ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ರಾಜ್ಯ ಯುಎಇ ಅಧ್ಯಕ್ಷ ಸೈಯದ್ ಅಸ್ಕರ್ ಅಲಿ ತಂಙಳ್, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯುಎಇ ಅಧ್ಯಕ್ಷ ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ, ದಾರುನ್ನೂರ್ ಎಜುಕೇಷನ್  ಸೆಂಟರ್ ಕಾಶಿಪಟ್ಣ ಯುಎಇ ಅಧ್ಯಕ್ಷ ಮೊಹಮ್ಮದ್ ಹಾಜಿ ಮಾಡಾವು, ಶಂಸುಲ್ ಉಲಮಾ ಎಜುಕೇಷನ್ ಟ್ರಸ್ಟ್ ತೋಡಾರ್ ಯುಎಇ ಅಧ್ಯಕ್ಷ ಸಲೀಂ ಮೂಡುಬಿದಿರೆ, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್ ಯುಎಇ ಅಧ್ಯಕ್ಷ ಶೆರೀಫ್ ಕಾವು, ದಾರುಸ್ಸಲಾಮ್ ಎಜುಕೇಷನ್ ಟ್ರಸ್ಟ್ ಬೆಳ್ತಂಗಡಿ ಯುಎಇ ಕೋಶಾಧಿಕಾರಿ ಇಬ್ರಾಹಿಂ ಆತೂರ್, ದಾರುಲ್ ಹಸನಿಯಾ ಎಜುಕೇಷನ್ ಟ್ರಸ್ಟ್ ಸಾಲ್ಮರ ಯುಎಇ ಅಧ್ಯಕ್ಷ  ಅನೀಸ್ ಪುರುಷರಕಟ್ಟೆ, ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಯುಎಇ ಸಮಿತಿ ಅಧ್ಯಕ್ಷ ನವಾಝ್ ಬಿ.ಸಿ.ರೋಡ್ ಮುಂತಾದವರು ಜಂಟಿ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ