ನವೀಕೃತಗೊಂಡ ಇತಿಹಾಸ ಪ್ರಸಿದ್ಧ ಝೀನತ್ ಬಕ್ಷ್ ಮಸೀದಿ ಉದ್ಘಾಟನೆ ಇಂದು

ನವೀಕೃತಗೊಂಡ ಇತಿಹಾಸ ಪ್ರಸಿದ್ಧ ಝೀನತ್ ಬಕ್ಷ್ ಮಸೀದಿ ಉದ್ಘಾಟನೆ ಇಂದು
republicday728
republicday468
republicday234

ಮಂಗಳೂರು: ಸುಮಾರು 1400 ವರ್ಷಗಳ ಇತಿಹಾಸವಿರುವ ಮಂಗಳೂರಿನ ಬಂದರು ಪ್ರದೇಶದಲ್ಲಿರುವ ಮಸ್ಜಿದ್ ಝೀನತ್ ಬಕ್ಷ್ ಸುದೀರ್ಘ ಕಾಲದ ನಂತರ ಮತ್ತೆ ಜೀರ್ಣೋದ್ಧಾರಗೊಂಡು ಇಂದು ಮಗ್ರಿಬ್ ನಮಾಝ್ ಗೆ ಉದ್ಘಾಟನೆಗೊಳ್ಳಲಿದೆ ಎಂದು ಆಡಳಿತ ಸಮಿತಿ ಕೋಶಾಧಿಕಾರಿ ಸಯ್ಯಿದ್ ಅಹ್ಮದ್ ಭಾಷಾ ತಂಙಳ್ ತಿಳಿಸಿದ್ದಾರೆ.
     ಇಂದು ದಿನಾಂಕ 2020ನೇ ಡಿಸೆಂಬರ್‌ 31 ಮಗ್ರಿಬ್ ನಮಾಝ್ ಗೆ ಖಾಝಿ ಆಲ್-ಹಾಜ್ ಶೈಖುನಾ ತ್ವಾಖ ಅಹ್ಮದ್ ಮುಸ್ಲಿಯಾರ್ ರವರು ನೇತೃತ್ವ ನೀಡುವ ಮೂಲಕ ಮಸೀದಿಯನ್ನು ಉದ್ಘಾಟಿಸಿ ಸಾರ್ವಜನಿಕ ಆರಾಧನೆಗೆ ಮುಕ್ತಗೊಳಿಸಲಾಗುವುದು. ಆಡಳಿತ ಸಮಿತಿ ಅಧ್ಯಕ್ಷರಾದ ಯೇನಪೋಯ ಅಬ್ದುಲ್ಲ ಕುಂಞಿಯವರ ನಿರ್ದೇಶನದಂತೆ ಕೋರೋನಾ ಕಾರಣದಿಂದ ಯಾವುದೇ ಆಡಂಬರವಿಲ್ಲದೆ ಸರಳ ರೀತಿಯಲ್ಲಿ ಉದ್ಘಾಟನಾ ಕಾರ್ಯ ನೇರವೇರಿಸಲು ಆಡಳಿತ ಸಮಿತಿಯು ತೀರ್ಮಾನಿಸಿದೆ. ಉದ್ಘಾಟನಾ ಸಮಯದಲ್ಲಿ ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ರಷೀದ್ ಹಾಜಿ ಎಸ್.ಎಮ್.ಆರ್. ಮಾಜಿ ಮೇಯರ್ ಅಶ್ರಫ್ ಹಾಗೂ ಆಡಳಿತ ಸಮಿತಿಯ ಎಲ್ಲಾ ಸದಸ್ಯರುಗಳು, ಮಸೀದಿ ಖತೀಬರಾದ ಸ್ವದಖತುಲ್ಲಾ ಫೈಝಿ ಮುಂತಾದವರು ಹಾಜರಿರುವರು ಎಂದು ಭಾಷಾ ತಂಙಳ್ ವಿವರಿಸಿದರು. 
     ಮನಮೋಹಕ ಕೆತ್ತನೆಯನ್ನು ಹೊಂದಿರುವ ಈ ಪುರಾತನ ಮಸೀದಿಯು ಸುಮಾರು 225 ವರ್ಷಗಳ ನಂತರ ಮತ್ತೆ ಜಿರ್ಣೋದ್ಧಾರಗೊಳ್ಳುತ್ತಿದೆ. ಹಿಂದೆ ಮೈಸೂರು ರಾಜನಾಗಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನರ ಕಾಲದಲ್ಲಿ ಜೀರ್ಣೋದ್ಧಾರವಾಗಿತ್ತು. ಈ ಮಸೀದಿಯ ಸುಂದರ ಕೆತ್ತನೆಗಳು ಇತಿಹಾಸಕಾರರಿಗೂ ಪ್ತವಾಸಿಗಳಿಗೂ, ಬ್ರಿಟಿಷರಿಗೂ ಆಕರ್ಷಣೆಯ ಕೇಂದ್ರವಾಗಿತ್ತು. ಇತಿಹಾಸಕಾರರಿಂದಲೂ, ವಿಮರ್ಶಕರಿಂದಲೂ ಕೊಂಡಾಡಲ್ಪಟ್ಟ ಈ ಪುರಾತನ ಮಸೀದಿಗೆ ಸುಂದರ ರೂಪವನ್ನು ಕೊಟ್ಟವರು ಹಝ್ರತ್ ಟಿಪ್ಪು ಸುಲ್ತಾನ್.
     ಭಾರತದ ಪ್ರಥಮ ಐದು ಮಸೀದಿಗಳಲ್ಲಿ ಒಂದಾದ ಮಸ್ಜಿದ್ ಝೀನತ್ ಬಕ್ಷ್ ಮಸೀದಿಗೆ ಕರ್ನಾಟಕದ ಎರಡನೇ ಮಸೀದಿ ಎಂಬ ಖ್ಯಾತಿಯೂ ಇದೆ. ಪ್ರವಾದಿ ಸ.ಅ.ರವರ ಕಾಲದಲ್ಲಿ  ಭಾರತಕ್ಕೆ ಬಂದ ಮಾಲಿಕ್ ದೀನಾರ್ (ರ) ತಂಡ ಕಟ್ಟಿಸಿದ ಮಸೀದಿಗಳಲ್ಲಿ ಮಸ್ಜಿದ್ ಝೀನತ್ ಬಕ್ಷ್ ಕೂಡಾ ಒಂದು.
ಇಂತಹ ಶ್ರೇಷ್ಟತೆ ಹಾಗೂ ಪ್ರಸಿದ್ದಿಯನ್ನು ಪಡೆದಿರುವ ಮಸ್ಜಿದ್ ಝೀನತ್ ಬಕ್ಷ್  ನವೀಕರಣದ ನೇತೃತ್ವ ಭಾಗ್ಯವು ಸುಮಾರು 225 ವರ್ಷಗಳ ನಂತರ ಜಿಲ್ಲೆಯ ಪ್ರತಿಷ್ಟ ಕುಟುಂಬದ ಖ್ಯಾತ ಉದ್ಯಮಿ ವೈ. ಅಬ್ದುಲ್ಲ ಕುಂಞಿಯವರಿಗೆ ಒದಗಿ ಬಂದಿದೆ.
     ಪುರಾತನ ಮಸೀದಿಯ ಸೌಂದರ್ಯಕ್ಕೆ ಧಕ್ಕೆಯಾಗದಂತೆ  ಸಂರಕ್ಷಿಸುವ ಆಸಕ್ತಿ ಮತ್ತು ಜವಾಬ್ದಾರಿಯನ್ನು ಸಮರ್ಥವಾಗಿ ಮನದಟ್ಟು ಮಾಡಿಕೊಂಡ ಮಸ್ಜಿದ್ ಝೀನತ್ ಬಕ್ಷ್ ನ ಪ್ರಸ್ತುತ ಆಡಳಿತ ಸಮಿತಿಯ ಅಧ್ಯಕ್ಷರಾದ ವೈ ಅಬ್ದುಲ್ಲ ಕುಂಞಿಯವರು, ತಮ್ಮ ಸ್ವ ಮುತುವರ್ಜಿಯಿಂದ ಆಡಳಿತ ಸಮಿತಿಯ ಸಹಕಾರದೊಂದಿಗೆ   ಜೀರ್ಣೋದ್ಧಾರ ಕಾರ್ಯ ಆರಂಭಗೊಳಿಸಿದ್ದರು‌. ಕಾಲದ ಹೊಡೆತಕ್ಕೆ ಸಿಕ್ಕಿ ದುರ್ಬಲಗೊಂಡಿರುವ ಮರದ ಕೆತ್ತನೆಯ ಭಾಗಗಗಳನ್ನು ಮೂಲ ರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅತ್ಯುತ್ತಮ ಮರಗಳನ್ನು ಬಳಸಿ ಮರು ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ತಜ್ಞ ಕುಶಲಕರ್ಮಿಗಳ ತಂಡವನ್ನು ರಚಿಸಲಾಗಿತ್ತು. ಅದೇ ರೀತಿ ತಾಮ್ರದ ಹೊದಿಕೆಯನ್ನು ಹೊಂದಿರುವ  ಮಸೀದಿಯ ಮೇಲ್ಛಾವಣಿಯ ದುರಸ್ತಿ ಕಾರ್ಯಕ್ಕಾಗಿಯೂ ನುರಿತ ತಾಮ್ರದ ಕೆಲಸಗಾರರ ತಂಡವನ್ನೂ ರಚಿಸಿ ದೀರ್ಘ ಸಮಾಲೋಚನೆ ನಡೆಸಲಾಗಿದೆ.  ಮೇಲ್ಛಾವಣಿಯ ತಾಮ್ರದ ಹೊದಿಕೆ ಕೆಲಸಗಳು ಶಿಘ್ರದಲ್ಲೇ ಆರಂಭಗೊಳ್ಳಲಿದೆ. ಆರಾಧನೆಗೆ ತೊಂದರೆಯಾಗದ ರೀತಿಯಲ್ಲಿ ಮಸೀದಿಯ ಒಳಭಾಗದ ಕೆಲಸಗಳನ್ನು ಪೂರ್ಣಗೋಳಿಸಿ ಉದ್ಘಾಟಿಸಲಾಗುತ್ತಿದೆ.
     ಟಿಪ್ಪು ಸುಲ್ತಾನ್ ನಂತರ ಮಸೀದಿಯನ್ನು ಜೀರ್ಣೋದ್ಧಾರ ಗೊಳಿಸುವ ಗೌರವ ಪಡೆದ ವೈ. ಅಬ್ದುಲ್ಲ ಕುಂಞಿ ಹಾಗೂ ಆಡಳಿತ ಸಮಿತಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ