ನಿಮ್ಮ ಕೊಳಕು ಕಾರ್ಯಸೂಚಿಗೆ ನನ್ನ ಹೇಳಿಕೆಗಳನ್ನು ಬಳಸಿಕೊಳ್ಳಬೇಡಿ: ಕೆರಳಿದ ನೀರಜ್‌ ಛೋಪ್ರಾ

ನಿಮ್ಮ ಕೊಳಕು ಕಾರ್ಯಸೂಚಿಗೆ ನನ್ನ ಹೇಳಿಕೆಗಳನ್ನು ಬಳಸಿಕೊಳ್ಳಬೇಡಿ: ಕೆರಳಿದ ನೀರಜ್‌ ಛೋಪ್ರಾ

ನವದೆಹಲಿ: ಗುರುವಾರ ಟ್ವಿಟರ್‌ನಲ್ಲಿ ವೀಡಿಯೋ ಒಂದನ್ನು ಬಿಡುಗಡೆ ಮಾಡಿರುವ ನೀರಜ್‌ ಛೋಪ್ರಾ, ನನ್ನ ಹೇಳಿಕೆಗಳನ್ನು ನಿಮ್ಮ ಹಿತಾಸಕ್ತಿ ಮತ್ತು ಪ್ರಚಾರಕ್ಕಾಗಿ ಬಳಸಿಕೊಳ್ಳಬೇಡಿ.  ನಾವೆಲ್ಲರೂ ಒಂದು, ಒಗ್ಗಟ್ಟಾಗಿರಲು ಕ್ರೀಡೆ ನಮಗೆ ಕಲಿಸುತ್ತದೆ. ನಮ್ಮನ್ನು ಒಗ್ಗಟ್ಟಾಗಿರಲು ಬಿಡಿ ಎಂದು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ. ತನ್ನ ಇತ್ತೀಚಿನ ಹೇಳಿಕೆಗಳಿಗೆ ಕೆಲವರಿಂದ ಬಂದ ಪ್ರತಿಕ್ರಿಯೆಗಳನ್ನು ನೋಡಿ ನೀರಜ್ ತುಂಬಾ ಬೇಸರ‌ ವ್ಯಕ್ತಪಡಿಸಿದ್ದಾರೆ.

      ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ನಡೆದ ಸಂದರ್ಭದಲ್ಲಿ ಪಾಕ್ ಅಥ್ಲೀಟ್‌ ಅರ್ಷದ್ ನದೀಮ್ ತಮ್ಮ ಜಾವೆಲಿನ್ ತೆಗೆದುಕೊಂಡಿದ್ದನ್ನು ಮತ್ತು ಅವರಿಂದ ತಾವು ಜಾವೆಲಿನ್‌ ಪಡೆದುಕೊಂಡಿದ್ದನ್ನು ಭಾರತದ ನೀರಜ್ ಚೋಪ್ರಾ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ನಡೆಯುತ್ತಿರುವ ವಾದ–ವಿವಾದಗಳಿಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ಧಾರೆ.

      ಸ್ಪರ್ಧೆಯಲ್ಲಿ ಎಲ್ಲರ ಜಾವೆಲಿನ್‌ಗಳು (ಭರ್ಜಿ) ಒಂದೇ ಕಡೆ ಇರುತ್ತವೆ. ಅವುಗಳನ್ನು ಯಾರು ಬೇಕಾದರೂ ತೆಗೆದುಕೊಳ್ಳಬಹುದು. ಅರ್ಷದ್‌ ನನ್ನ ಜಾವೆಲಿನ್ ಹಿಡಿದು ಥ್ರೋಗೆ ತಯಾರಿ ಮಾಡುತ್ತಿದ್ದರು. ಇದು ದೊಡ್ಡ ವಿಷಯವೇನಲ್ಲ. ಪಾಕಿಸ್ತಾನದ ಕ್ರೀಡಾಪಟು ನನ್ನ ಜಾವೆಲಿನ್ ತೆಗೆದುಕೊಂಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲವೂ ನಿಯಮಗಳ ಪ್ರಕಾರವೇ ನಡೆದಿದೆ ಎಂದು ನೀರಜ್ ಸಮರ್ಥಿಸಿಕೊಂಡಿದ್ದಾರೆ.

      ಅವರು ಇತ್ತೀಚೆಗೆ ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿನ ಕೆಲ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ. ಫೈನಲ್‌ಗೂ ಮುನ್ನ ನಾನು ನನ್ನ ಜಾವೆಲಿನ್ ಹುಡುಕುತ್ತಿದ್ದೆ. ಆಗ ಪಾಕಿಸ್ತಾನದ ಅರ್ಷದ್ ನದೀಮ್ ನನ್ನ ಜಾವೆಲಿನ್ ಹಿಡಿದು ತಿರುಗಾಡುತ್ತಿರುವುದನ್ನು ತಟ್ಟನೇ ಗಮನಿಸಿದೆ. ಅವರ ಬಳಿಗೆ ಹೋಗಿ, ಈ ಜಾವೆಲಿನ್ ನನ್ನದು ಎಂದು ಹೇಳಿದೆ. ಅರ್ಷದ್‌ ಅದನ್ನು ನನಗೆ ಮರಳಿಸಿದರು. ನಂತರ ನಾನು ‌ಥ್ರೋ ಮಾಡಿರುವುದನ್ನು ನೀವು ನೋಡಿದ್ದೀರಿ’ ಎಂದಿದ್ದರು.

      ಈ ಹೇಳಿಕೆಯಿಂದಾಗಿ ಪಾಕ್ ಆಟಗಾರನ ಮೇಲೆ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಕ್ರೀಡೆಯಲ್ಲೂ ದ್ವೇಷವನ್ನು ಪಸರಿಸಲು ಉಪಯೋಗಿಸಿಕೊಂಡಿದ್ದರು. ಸಕಾಲಿಕವಾಗಿ ಬಂದ ನೀರಜ್‌ರವರ ಸಮಜಾಯಿಷಿ ಹೇಳಿಕೆ ಕ್ರೀಡಾ ಸ್ಪೂರ್ತಿಯನ್ನು ವ್ಯಕ್ತಪಡಿಸುತ್ತದೆ. ಕ್ರೀಡೆಯಲ್ಲಿ ದ್ವೇಷ ಬೆಳೆಸುವ ಪ್ರಯತ್ನವನ್ನು ತಡೆಯುವ ಹೇಳಿಕೆ ಅಭಿನಂದನಾರ್ಹ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ