ನಿಮ್ಮ ಮೇಲಿನ ವಿಶ್ವಾಸದಿಂದ MLC ಅವಕಾಶ ಬಿಟ್ಟು ಚುನಾವಣೆಗೆ ಬಂದಿದ್ದೇನೆ, ಅವಕಾಶ ಮಾಡಿ ಕೊಡಿ: ರಮಾನಾಥ ರೈ ಮನವಿ
ಇದು ನನ್ನ ಕೊನೆಯ ಚುನಾವಣೆ. ಜನರಿಗೆ ಮೋಸ ಮಾಡಿಲ್ಲ. ಚುನಾವಣೆಯಲ್ಲಿ ಸೋತ ಬಗ್ಗೆ ಬೇಸರವೂ ಇಲ್ಲ. ಸೋಲಿಸುವುದಕ್ಕೆ ಮಾಡಿದ ಅಪಪ್ರಚಾರ ಮತ್ತು ಕುತಂತ್ರದ ಬಗ್ಗೆ ಬೇಸರವಿದೆ.

ಬಂಟ್ವಾಳ: ಜನರ ಬೆಂಬಲದಿಂದ ಆರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಕ್ಷೇತ್ರದ ಜನರು ತಲೆತಗ್ಗಿಸುವಂತಹ ಯಾವುದೇ ಕಾರ್ಯ ಮಾಡಿಲ್ಲ. ಇದು ನನ್ನ ಕೊನೆಯ ಚುನಾವಣೆ. ಅವಕಾಶ ಮಾಡಿಕೊಡಿ ಎಂದು ಮಾಜಿ ಸಚಿವರಾದ ಬಿ.ರಮಾನಾಥ ರೈ ಹೇಳಿದರು.
ಅವರು ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಮಂಗಳವಾರದಂದು ಸರಪಾಡಿ ಗ್ರಾಮದ ಮಾವಿನಕಟ್ಟೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ನಾನು ಸೈದ್ಧಾಂತಿಕವಾಗಿ ಎಲ್ಲೂ ರಾಜಿ ಮಾಡಿಕೊಂಡಿಲ್ಲ. ಕಳೆದ ಬಾರಿ ಸೋತಿರುವುದಕ್ಕೆ ಖಂಡಿತಾ ನನಗೆ ಬೇಸರವಿಲ್ಲ. ಅದರೆ ನನ್ನನ್ನು ಸೋಲಿಸಲು ಮಾಡಿದ ಅಪಪ್ರಚಾರ ಮತ್ತು ಕುತಂತ್ರದ ಬಗ್ಗೆ ಬೇಸರವಿದೆ. ಕೆಲಸ ಮಾಡಿಯೂ ಸೋತಿರುವುದಕ್ಕೆ ಬೇಸರವಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಪ್ರತಿ ಗ್ರಾಮಗಳಿಗೂ ತೆರಳಿ ಸಾರ್ವಜನಿಕರನ್ನು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡುವ ಉದ್ದೇಶದಿಂದ ಪ್ರಜಾಧ್ವನಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಹಂತ ಹಂತವಾಗಿ ಪಕ್ಷದ ಜವಾಬ್ದಾರಿ ಯನ್ನು ನಿಭಾಯಿಸಿಕೊಂಡು ಬಂದಿದ್ದೇನೆ. ನಮ್ಮ ಸರಕಾರ ಅನುದಾನ ನೀಡಿದ ಸೌಹಾರ್ದ ಸೇತುವೆ, ಬೆಂಜನಪದವಿನ ಕ್ರೀಡಾಂಗಣ, ಅಂಬೇಡ್ಕರ್ ಭವನ, ಪಂಜೆ ಮಂಗೇಶ ರಾವ್ ಭವನ ಕಾರ್ಯಗಳು ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ತಿಗೊಳಿಸುವ ಚಿಂತನೆ ಇದೆ. ಬೆಂಜನಪದವಿನಲ್ಲಿ ನೂರು ಕೋಟಿಯ ಸುಸಜ್ಜಿತ ಕ್ರೀಡಾಂಗಣ ಮಾಡುವ ಕನಸು ಇದೆ ಎಂದು ತನ್ನ ಕನಸುಗಳನ್ನು ಬಿಚ್ಚಿಟ್ಟರು.
ವಿಧಾನ ಪರಿಷತ್ ಸದಸ್ಯನಾಗುವ ಅವಕಾಶ ಇದ್ದರೂ ಕೂಡಾ ಜನರ ಮೇಲಿನ ನಂಬಿಕೆ ವಿಶ್ವಾಸದಿಂದ ಅದನ್ನು ತಿರಸ್ಕರಿಸಿ ಕೊನೆಯ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಶಕ್ತಿ ನೀಡುವಂತೆ ವಿನಂತಿಸಿಕೊಂಡರು.
ವಿಧಾನ ಪರಿಷತ್ ಸದಸ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪ ಸಂಖ್ಯಾಕ ಘಟಕದ ಅಧ್ಯಕ್ಷ ಕೆ.ಅಬ್ದುಲ್ ಜಬ್ಬಾರ್ ಮಾತನಾಡಿ ರಾಜ್ಯದಲ್ಲಿರುವ ದರಿದ್ರ ಸರಕಾರವನ್ನು ಮನೆಗೆ ಕಳುಹಿಸ ಬೇಕಾದರೆ ಜನರು ನೂರು ಶೇಕಡ ಮತದಾನ ಮಾಡಬೇಕು ಎಂದರು.
ಸರಕಾರಿ ಸ್ವಾಮ್ಯದ ಎಲ್ಲಾ ಸಂಸ್ಥೆಗಳನ್ನು ಮಾರಾಟ ಮಾಡಿದ ಕೇಂದ್ರ ಸರಕಾರ ಈಗ LICಗೂ ಕೈ ಹಾಕಿದೆ. ಸಣ್ಣ ಸಣ್ಣ ಪಕ್ಷಗಳನ್ನು ಖರೀದಿ ಮಾಡಿ ಕಾಂಗ್ರೆಸ್‌ಗೆ ಬರುವ ಮತವನ್ನು ಹೇಗೆ ತಮ್ಮ ಪಕ್ಷಕ್ಕೆ ಸೆಳೆಯಬಹುದು ಎನ್ನುವ ಹುನ್ನಾರದಲ್ಲಿ ಬಿಜೆಪಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿದರು. ಸುಳ್ಳು ಭರವಸೆ ನಮ್ಮಲ್ಲಿ ಇಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ತಿಳಿಸಿದರು.
ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರ ಪುಕಾಶ್ ಶೆಟ್ಟಿ, ಶಾಹುಲ್ ಹಮೀದ್, ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಲವೀನ ವಿಲ್ಮ ಮೋರಸ್, ಸದಾಶಿವ ಬಂಗೇರ, ಸುದರ್ಶನ್ ಜೈನ್, ಮಾಯಿಲಪ್ಪ ಸಾಲ್ಯಾನ್, ಶಿವಪ್ಪ ಪೂಜಾರಿ ಹಟದಡ್ಕ ಸಂಪತ್ ಕುಮಾರ್ ಶೆಟ್ಟಿ, ಸುಧಾಕರ ಶೆಣೈ ಖಂಡಿಘ, ಅಬ್ಬಾಸ್ ಅಲಿ, ಸಿದ್ದಿಕ್ ಗುಡ್ಡೆಯಂಗಡಿ, ಶಬೀರ್ ಸಿದ್ದಕಟ್ಟೆ, ಯೋಗೀಶ್ ಶೆಟ್ಟಿ ಆರುಮುಡಿ, ದಯಾನಂದ ಶೆಟ್ಟಿ, ಅಮ್ಮ, ರಝಾಕ್ ಕುಕ್ಕಾಜೆ, ಮನೋಹರ ನೇರಂಬೋಳು, ಸುರೇಶ್ ಕುಮಾರ್ ನಾವೂರು, ದಯಾನಂದ ನೇರಂಬೋಳು, ಲೋಲಾಕ್ಷ ಶೆಟ್ಟಿ ಮುಂತಾದ ನಾಯಕರು ಉಪಸ್ಥಿತರಿದ್ದರು.
ರಾಜೀವ ಶೆಟ್ಟಿ ಎಡ್ತೂರು ಪ್ರಾಸ್ತವಿಕವಾಗಿ ಮಾತನಾಡಿದರು. ಆದಂ ಕುಂಞ ಸ್ವಾಗತಿಸಿದರು. ಬೇಬಿ ಕುಂದರ್ ಕಾರ್ಯಕ್ರಮ ನಿರೂಪಿಸಿದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ