ನನ್ನ ಮಗ ಆಕಿಫ್ ನನ್ನು ಪೂರ್ವಯೋಜಿತವಾಗಿ ಕೊಲೆ ಮಾಡಲಾಗಿದೆ - ಮುಹಮ್ಮದ್ ಹನೀಫ್

ನನ್ನ ಮಗ ಆಕಿಫ್ ನನ್ನು ಪೂರ್ವಯೋಜಿತವಾಗಿ ಕೊಲೆ ಮಾಡಲಾಗಿದೆ - ಮುಹಮ್ಮದ್ ಹನೀಫ್

ಉಳ್ಳಾಲ: ನನ್ನ ಮಗ ಆಕಿಫ್ ನ ಕೊಲೆ ಪೂರ್ವ ನಿಯೋಜಿತ ಕೃತ್ಯ. ಪಬ್ಜಿ ಆಟದ ಸೇಡಿಗಾಗಿ ನಡೆದ ಕೊಲೆ ಅಲ್ಲ  ಎಂದು ಬಾಲಕ ಆಕೀಫ್ ತಂದೆ ಮೊಹಮ್ಮದ್ ಹನೀಫ್ ಆರೋಪಿಸಿದ್ದಾರೆ.

     ಕೆ.ಸಿ.ರೋಡಿನ ಆಕೀಫ್ ಶನಿವಾರ ಸಂಜೆ ಮೊಬೈಲ್ ಹಿಡಿದು ಕೊಂಡು ಮನೆಯಿಂದ ಹೊರಟಿದ್ದು ಭಾನುವಾರ ಸಮೀಪದ ಮೈದಾನದ ಬಳಿ ಶವವಾಗಿ ಪತ್ತೆಯಾಗಿದ್ದ. ಪೊಲೀಸರ ಪ್ರಾಥಮಿಕ ವಿಚಾರಣೆ ಮಾಹಿತಿಯಂತೆ ಕಾನೂನು ಸಂಘರ್ಷ ಕ್ಕೆ ಒಳಪಟ್ಟ 17 ವರ್ಷದ ಬಾಲಕ ಪಬ್‌ಜಿ ಆಟದ ಸೇಡಿಗಾಗಿ  ಕೊಲೆ ಮಾಡಿರುವುದಾಗಿ ತಿಳಿದು ಬಂದಿತ್ತು.
     ಈ ಕುರಿತು ಪ್ರತಿಕ್ರಿಯಿಸಿರುವ ಮೃತ ಬಾಲಕನ ತಂದೆ ಹನೀಫ್, ಶನಿವಾರ ಸಂಜೆ ಆಕೀಫ್ ಮನೆಯಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಕೊಲೆ ಮಾಡಿದ 17 ವರ್ಷದ ಬಾಲಕನು ಈ ಹಿಂದೆಯೂ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಮೂರು ತಿಂಗಳ ಹಿಂದಷ್ಟೇ ನನ್ನ ಮಗನಿಗೆ ಆ ಬಾಲಕನ ಪರಿಚಯವಾಗಿತ್ತು. ನನ್ನ ಮಗನ ಕೊಲೆಯು ಪೂರ್ವ ನಿಯೋಜಿತ ಕೃತ್ಯ ಎಂದು ಅವರು ದೂರಿದರು.
     ನಮ್ಮ ಮನೆ ಬಳಿಯ ಶಾಂತಿನಗರದ ಮನೆಯೊಂದರಲ್ಲಿ ಸಿಕ್ಕ ಸಿ.ಸಿ ಟಿವಿ ಫೂಟೇಜ್‌ನಲ್ಲಿ ಕೊಲೆಯಾದ ರಾತ್ರಿ ಆಕೀಫ್ 8.45 ರ ವೇಳೆಗೆ ವೇಗವಾಗಿ ನಡೆದುಕೊಂಡು ಹೋಗುವ ದೃಶ್ಯಗಳು ಸೆರೆಯಾಗಿವೆ. ಅಲ್ಲಿಂದ ಆರೋಪಿ ಮನೆ ತಲುಪಲು ಕನಿಷ್ಠ 12 ನಿಮಿಷ ಬೇಕು. ಬಳಿಕ ಮೊಬೈಲ್ ಗೇಮ್ ಆಡಲು ಅರ್ಧ ಗಂಟೆಯಾದರೂ ಬೇಕು ಆದರೆ, ರಾತ್ರಿ 9.05 ರ ವೇಳೆಗೆ ತಾಯಿ ಕರೆ ಮಾಡಿದಾಗ ಆಕೀಫ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಹಮೀದ್ ಹೇಳಿದರು.
     17 ವರ್ಷದ ಬಾಲಕನ ಮೇಲೆ ಮೊಬೈಲ್ ಕಳವಿನ ದೂರುಗಳಿವೆ. ಆತ ಕೆಲವು ಧಾರ್ಮಿಕ ಸಂಘಟನೆಗಳ ಜೊತೆಯೂ ಗುರುತಿಸಿಕೊಂಡಿದ್ದಾನೆ . ಹೀಗಾಗಿ ಪ್ರಕರಣದ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ