ನೀಟ್ ಬದಲು ಸಿಇಟಿಗೆ ರಾಜ್ಯ ಸರ್ಕಾರ ಒತ್ತು..! ಸದನದಲ್ಲಿ ಪ್ರಸ್ತಾಪ ಅಂಗೀಕಾರ..!

ಬೆಂಗಳೂರು: ವಿಧಾನಸಭಾ ಅಧಿವೇಶದಲ್ಲಿ ಪ್ರಮುಖ ನಿರ್ಣಯಗಳಿಗೆ ಸಭಾಧ್ಯಕ್ಷ ಯು.ಟಿ.ಖಾದರ್ ಅಂಗೀಕಾರ ನೀಡಿದ್ದಾರೆ. ಕ್ಷೇತ್ರ ಪುನರ್ ವಿಂಗಡನೆ, ಒಂದು ರಾಷ್ಟ್ರ ಒಂದು ಚುನಾವಣೆ, ನೀಟ್ ಪರೀಕ್ಷೆ ರದ್ದು, 2006 ರ ಅರಣ್ಯ ಹಕ್ಕು ಕಾಯಿದೆಗೆ ತಿದ್ದುಪಡಿ ಮೊದಲಾದ ಪ್ರಮುಖ ವಿಚಾರಕ್ಕೆ ಅಂಗೀಕಾರ ನೀಡಲಾಗಿದೆ.
ನೀಟ್ ಪರೀಕ್ಷೆಯ ರದ್ಧತಿ ಕುರಿತಾಗಿ ನಿರ್ಣಯವನ್ನು ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಮಂಡಿಸಿದ್ದಾರೆ.
ನೀಟ್ ವ್ಯವಸ್ಥೆ ರಾಜ್ಯ ಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ರಾಜ್ಯ ಸರ್ಕಾರದ ಹಕ್ಕನ್ನು ಕಸಿದುಕೊಳ್ಳುತ್ತಿದೆ.
ಹೀಗಾಗಿ ನೀಟ್ ಪರಿಕ್ಷಾ ವ್ಯವಸ್ಥೆಯನ್ನೇ ರದ್ದು ಮಾಡಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಿದ್ದಾರೆ.
ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿಇಟಿ ಅಂಕ ಆಧರಿಸಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ನೀಡಬೇಕು ಎಂದು ನಿರ್ಣಯ ಕೈಗೊಂಡಿದೆ.
ನೀಟ್ ಪರೀಕ್ಷೆಯಲ್ಲಿ ಆಗಿರುವ ಹಗರಣದಿಂದ ರಾಜ್ಯದ ಪ್ರತಿಭಾನ್ವಿತ ವಿದ್ಯಾರ್ಥಿಗಳ ವೈದ್ಯಕೀಯ ಭವಿಷ್ಯ ಅತಂತ್ರವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಈ ನಿರ್ಣಯವನ್ನು ಅಂಗೀಕರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಕ್ಷೇತ್ರ ಪುನರ್ವಿಂಗಡಣೆಯ ವಿಚಾರದಲ್ಲಿ ನಿರ್ಣಯ ಅಂಗೀಕಾರ ಜನಸಂಖ್ಯೆಯನ್ನು ಆಧರಿಸಿ ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವ ಸಂದರ್ಭದಲ್ಲಿ ಪ್ರತೀ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭಾ ಹಾಗೂ ವಿಧಾನಸಭಾ ಸ್ಥಾನಗಳ ಸಂಖ್ಯೆಯನ್ನು 1971 ರ ಜನಗಣತಿ ಆಧರಿಸಿ ನಿರ್ಧಾರ ಮಾಡಬೇಕು. 2026 ಹಾಗೂ ಅದರ ನಂತರ ನಡೆಸುವ ಹೊಸ ಜನಗಣತಿಯ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡಣೆಯ ಪ್ರಕ್ರಿಯೆ ನಡೆಸಬಾರದು ಎಂಬ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಒಂದು ರಾಷ್ಟ್ರ ಒಂದು ಚುನಾವಣೆ ಬೇಡ. ಇದೇ ವೇಳೆ ಒಂದು ರಾಷ್ಟ್ರ ಒಂದು ಚುನಾವಣೆಯು ದೇಶದ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದ್ದು, ಅದರ ವಿರುದ್ಧ ನಿರ್ಣಯವನ್ನು ಅಂಗೀಕರಿಸಲಾಗಿದೆ. ಕ್ಷೇತ್ರ ಪುನರ್ವಿಂಗಡನೆ ಹಾಗೂ ಒಂದು ರಾಷ್ಟ್ರ ಒಂದು ಚುನಾವಣೆಯ ನಿರ್ಣಯವನ್ನು ಸಚಿವ ಎಚ್.ಕೆ. ಪಾಟೀಲ್ ಮಂಡಿಸಿದ್ದಾರೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ