ದೆಹಲಿ ಎಂಸಿಡಿ ಸಭೆಯಲ್ಲಿ ಗದ್ದಲ: ಕೇಜ್ರಿವಾಲ್ ನಿವಾಸದ ಬಳಿ ಬಿಜೆಪಿ ಪ್ರತಿಭಟನೆ
ನವದೆಹಲಿ: ದೆಹಲಿ ಮಹಾನಗರಪಾಲಿಕೆಯ (ಎಂಸಿಡಿ) ಸಭೆಯಲ್ಲಿ ಎಎಪಿ ಸದಸ್ಯರು ನಡೆಸಿದ ಗದ್ದಲವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಬಳಿ ಸೋಮವಾರ ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಬಿಜೆಪಿ ದೆಹಲಿ ಘಟಕದ ಕಾರ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕೇಜ್ರಿವಾಲ್ ಅವರ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಕಾರರನ್ನು ಕೇಜ್ರಿವಾಲ್ ಅವರ ನಿವಾಸದ ಅಲ್ಪ ದೂರದಲ್ಲಿ ಪೊಲೀಸರು ತಡೆದರು.
ದೆಹಲಿ ಮಹಾನಗರಪಾಲಿಕೆಯಲ್ಲಿ ಜನವರಿ 6ರಂದು ನಡೆದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಮಹಿಳೆಯರು ಸೇರಿದಂತೆ ಬಿಜೆಪಿ ಸದಸ್ಯರ ಮೇಲೆ ಎಎಪಿ ಸದಸ್ಯರು ಹಲ್ಲೆ ನಡೆಸಿದ್ದಾರೆ. ಇದಕ್ಕೆ ತಿರುಗೇಟು ನೀಡಲು ನಾವು ಸಿದ್ಧರಿದ್ದೇವೆ’ ಎಂದು ವೀರೇಂದ್ರ ಸಚ್‌ದೇವ ಹೇಳಿದ್ದಾರೆ.
ಎಂಸಿಡಿ ಸಭೆಯಲ್ಲಿ ಎಎಪಿ ಸದಸ್ಯರು ಗದ್ದಲ ಉಂಟು ಮಾಡಿ ಸದಸ್ಯರು ಪ್ರಮಾಣವಚನ ಸ್ವೀಕರಿಸುವುದಕ್ಕೆ ಅಡ್ಡಿಪಡಿಸುವ ಮೂಲಕ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ’ ಎಂದು ದೆಹಲಿ ವಿಧಾನಸಭೆ ವಿರೋಧಪಕ್ಷದ ನಾಯಕ ರಾಮ್‌ವೀರ್ ಸಿಂಗ್ ಬಿಧುರಿ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿ ಬಳಿ ಎಎಪಿ ಪ್ರತಿಭಟನೆ: ದೆಹಲಿ ಎಂಸಿಡಿಗೆ ಲೆಫ್ಟಿನಂಟ್ ಗವರ್ನರ್ ಅವರು ನಾಮ ನಿರ್ದೇಶನ ಮಾಡಿರುವ 10 ಮಂದಿ ಸದಸ್ಯರನ್ನು ಮೊದಲಿಗೆ ಪ್ರತಿಜ್ಞಾವಿಧಿ ಸ್ವೀಕರಿಸಲು ಆಹ್ವಾನಿಸುವ ಮೂಲಕ ಬಿಜೆಪಿಯು ನಿಯಮ ಉಲ್ಲಂಘಿಸಿದೆ ಎಂದು ಆರೋಪಿಸಿ ಎಎಪಿ ಕಾರ್ಯಕರ್ತರು ಸೋಮವಾರ ದೆಹಲಿಯ ಬಿಜೆಪಿ ಪ್ರಧಾನ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ದೆಹಲಿ ಸಚಿವ ರಾಜ್‌ಕುಮಾರ್ ಆನಂದ್, ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ಮತ್ತು ಮುಖಂಡ ಆದಿಲ್ ಅಹಮ್ಮದ್ ಖಾನ್ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಈಚೆಗೆ ನಡೆದಿದ್ದ ಎಂಸಿಡಿ ಸಭೆಯಲ್ಲಿ ಎಎಪಿ ಮತ್ತು ಬಿಜೆಪಿ ಸದಸ್ಯರ ನಡುವೆ ಗದ್ದಲ ನಡೆದ ಪರಿಣಾಮ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ನಡೆಯದೇ ಸಭೆಯನ್ನು ಮುಂದೂಡಲಾಗಿತ್ತು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ