ದೆಹಲಿ ಅಬಕಾರಿ ನೀತಿ ಹಗರಣ: ಕೆಸಿಆರ್‌ ಪುತ್ರಿ ಕವಿತಾಗೆ ಇ.ಡಿ ಸಮನ್ಸ್‌

ದೆಹಲಿ ಅಬಕಾರಿ ನೀತಿ ಹಗರಣ: ಕೆಸಿಆರ್‌ ಪುತ್ರಿ ಕವಿತಾಗೆ ಇ.ಡಿ ಸಮನ್ಸ್‌

ಹೈದರಾಬಾದ್‌: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್ ಅವರ ಪುತ್ರಿ ಹಾಗೂ ಬಿಆರ್‌ಎಸ್‌ ಶಾಸಕಿ ಕೆ. ಕವಿತಾ ಅವರಿಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು(ಇ.ಡಿ) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದ್ದಾರೆ.

      ಮಾರ್ಚ್‌ 9ರಂದು ದೆಹಲಿಯ ಇ.ಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

      ಎರಡು ದಿನಗಳ ಹಿಂದೆ ಕವಿತಾ ಅವರಿಗೆ ಆಪ್ತರಾದ ಉದ್ಯಮಿ, ಸೌತ್‌ ಗ್ರೂಪ್‌ ಕಂಪನಿ ಮಾಲೀಕ ಅರುಣ್‌ ರಾಮಚಂದ್ರ ಪಿಳೈ ಅವರನ್ನು ಬಂಧಿಸಿ ಇ.ಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಈ ಬೆನ್ನಲ್ಲೇ ಅಧಿಕಾರಿಗಳು ಕವಿತಾಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದ್ದಾರೆ.

      ಅರುಣ್‌ ರಾಮಚಂದ್ರ ಅವರು ಕವಿತಾ ಸೇರಿದಂತೆ ವೈಎಸ್‌ಆರ್‌ ಕಾಂಗ್ರೆಸ್‌ ಶಾಸಕ ಶ್ರೀನಿವಾಸಲು ರೆಡ್ಡಿ, ಉದ್ಯಮಿ ಶರತ್‌ ರೆಡ್ಡಿ ಅವರೊಂದಿಗೆ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಂಪರ್ಕ ಹೊಂದಿದ್ದಾರೆ ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ.

      ಮುಂಬರುವ ಸಂಸತ್‌ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಬೇಕು ಎಂದು ಒತ್ತಾಯಿಸಿ ಮಾರ್ಚ್ 10ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದರ ಮುನ್ನಾ ದಿನವೇ ಕವಿತಾ ಅವರನ್ನು ಇ.ಡಿ ವಿಚಾರಣೆಗೆ ಕರೆದಿದೆ.

       ಅಬಕಾರಿ ಗುತ್ತಿಗೆಯಲ್ಲಿ ಕವಿತಾ ಅವರು ಲಂಚ ಪಡೆದಿರುವ ಬಗ್ಗೆ ಆರೋಪಗಳಿದ್ದು, ಜಾರಿ ನಿರ್ದೇಶನಾಲಯ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೇಳಿತ್ತು. ₹100 ಕೋಟಿ ಲಂಚ ಪಡೆದ ಆರೋಪದ ಹಗರಣದ ಆರೋಪಿಗಳಲ್ಲಿ ಒಬ್ಬರಾದ ಉದ್ಯಮಿ ಅಮಿತ್‌ ಅರೋರ ಅವರು ಇ.ಡಿ ವಿಚಾರಣೆ ವೇಳೆ ಕವಿತಾ ಅವರ ಹೆಸರು ಹೇಳಿದ್ದರು.

      ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಕೆಲವು ದಿನಗಳ ಹಿಂದೆ ಕವಿತಾ ಅವರ ವಿಚಾರಣೆ ನಡೆಸಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ